

ಕವಿತಾಳ: ಸಮೀಪ ಹಣಗಿ-ಬಾಗಲವಾಡ ಸಂಪರ್ಕ ರಸ್ತೆಯಲ್ಲಿ ಲಕ್ಷ್ಮೀ ಕ್ಯಾಂಪ್ ಬಳಿ ನಿರ್ಮಿಸಿರುವ ತುಂಗಭದ್ರಾ ಎಡದಂಡೆ ಮುಖ್ಯ ನಾಲೆ ಸೇತುವೆ ಶಿಥಿಲಗೊಂಡಿದೆ. ಈ ಸೇತುವೆ ಕವಿತಾಳದಿಂದ ಮಾನ್ವಿಗೆ ಸಂಪರ್ಕ ಕಲ್ಪಿಸುತ್ತದೆ.
ದುರಂತ ಸಂಭವಿಸುವ ಮುನ್ನ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಎಚ್ಚೆತ್ತುಕೊಳ್ಳಬೇಕೆಂಬುದು ಜನರ ಆಗ್ರಹವಾಗಿದೆ.
ತುಂಗಭದ್ರ ನಾಲೆ ನಿರ್ಮಾಣ ಸಮಯದಲ್ಲಿ ಈ ಸೇತುವೆಯನ್ನು ನಿರ್ಮಿಸಲಾಗಿದೆ.
ಇದನ್ನೂ ಓದಿರಿ: ಮೂರು ಮಕ್ಕಳು ಸೇರಿ ಒಂದೇ ಕುಟುಂಬದ ಐವರು ಶವವಾಗಿ ಪತ್ತೆ..!
ಬಹಳಷ್ಟು ಸಲ ನಾಲೆ ದುರಸ್ತಿಗೊಳಿಸಲಾಗಿದ್ದರೂ ಸೇತುವೆ ದುರಸ್ತಿ ಆಗಿಲ್ಲ. ಸೇತುವೆ ಬುನಾದಿಯ ಕಲ್ಲುಗಳು ಕಿತ್ತುತ್ತಿವೆ. ಪಿಲ್ಲರ್‌ಗಳ ರಾಡ್‌ಗಳು ಹೊರಬಂದಿವೆ. ಬ್ರಿಡ್ಜ್ ವಾಲ್‌ಗಳು ಜಖಂಗೊಂಡಿವೆ. ಸೇತುವೆಗೆ ಹೊಂದಿಕೊಂಡಂತೆ ಬೇಲಿಯೂ ಬೆಳೆದಿರುವುದರಿಂದ ಅಪಘಾತಗಳು ಸಂಭವಿಸುತ್ತಿವೆ.
ಈ ಕುರಿತು ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಹಣಗಿಯ ಶಿವರಾಜ. ಬಾಗಲವಾಡದ ಅಮರೇಶ ದೇಸಾಯಿ, ನಾಗರಾಜ ಹಿಂದಿನಮನೆ, ಲಕ್ಷ್ಮಣ ಪಾತಪೂರ, ಜಯರಾಜ ಹರಿಜನ, ಹುಸೇನಪ್ಪ ಹರಿಜನ ಒತ್ತಾಯಿಸಿದ್ದಾರೆ.
ಕವಿತಾಳದಿಂದ ಮಾನ್ವಿಗೆ ಸಂಪರ್ಕ ಕಲ್ಪಿಸುವ ರಸ್ತೆಗೆ ಲಕ್ಷ್ಮೀ ಕ್ಯಾಂಪ್ ಸೇತುವೆ ಪ್ರಮುಖ ಕೊಂಡಿಯಾಗಿದೆ. ಸೇತುವೆ ಶಿಥಿಲಗೊಂಡಿರು ವದರಿಂದ ವಾಹನ ಸವಾರರು ಜೀವಭಯದಲ್ಲಿ ಚಲಿಸುವಂತಾಗಿದೆ. ಸೇತುವೆ ಪಕ್ಕದಲ್ಲಿ ಬೇಲಿ ಬೆಳೆದಿದ್ದು ರಸ್ತೆ ಕಾಣದಂತಾಗಿದೆ. ಇದರಿಂದ ಅಪಘಾತಗಳು ಸಂಭವಿಸುವ ಸಾಧ್ಯತೆಯಿದೆ. ಆದಷ್ಟು ಬೇಗ ಸೇತುವೆ ದುರಸ್ತಿ ಮಾಡಬೇಕು.ಅಮರೇಶ ದೇಸಾಯಿ, ಬಾಗಲವಾಡ ಗ್ರಾಮಸ್ಥ
ಲಕ್ಷ್ಮೀ ಕ್ಯಾಂಪ್ ಹತ್ತಿರದ ಸೇತುವೆ ಶಿಥಿಲಗೊಂಡ ಬಗ್ಗೆ ಸಾರ್ವಜನಿಕರಿಂದ ದೂರು ಬಂದಿದೆ. ನೂತನ ಸೇತುವೆ ನಿರ್ಮಿಸುವ ಸಲುವಾಗಿ ಸರ್ಕಾರಕ್ಕೆ ಈಗಾಗಲೇ ಪ್ರಸ್ತಾವನೆ ಕಳಿಸಲಾಗಿದೆ ಎನ್ನಲಾಗುತ್ತಿದೆ. ಇದರ ಬಗ್ಗೆ ಹಿರಿಯ ಅಧಿಕಾರಿಗಳಿಗೆ ಮಾಹಿತಿ ನೀಡಲಾಗುವುದು.ವಿಜಯಲಕ್ಷ್ಮೀ ಪಾಟೀಲ್, ನೀರಾವರಿ ಇಲಾಖೆ ಎಇಇ, ಸಿರವಾರ