

ಕವಿತಾಳ: ಸಾರ್ವಜನಿಕರ ಅನುಕೂಲಕ್ಕಾಗಿ ಗ್ರಾಮದಲ್ಲಿ ಜಿಲ್ಲಾಧಿಕಾರಿ ನಡೆ ಹಳ್ಳಿಯ ಕಡೆ ಕಾರ್ಯಕ್ರಮವನ್ನು ನಡೆಸಲಾಗುತ್ತಿದ್ದು, ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ತಹಸೀಲ್ದಾರ್ ಸುಧಾ ಅರಮನೆ ಹೇಳಿದರು.
ಇರಕಲ್‌ನಲ್ಲಿ ಜಿಲ್ಲಾಧಿಕಾರಿ ನಡೆ ಹಳ್ಳಿ ಕಡೆ ಕಾರ್ಯಕ್ರಮವನ್ನು ಉದ್ಘಾಟಿಸಿ ಶನಿವಾರ ಮಾತನಾಡಿದರು. ರೈತರ ಅನುಕೂಲಕ್ಕಾಗಿ ಪಹಣಿ ತಿದ್ದುಪಡಿ, ಸರ್ವೇ ಮಾಡುವುದು, ವಿಧವಾ ವೇತನ, ವೃದ್ಧಾಪ್ಯ ವೇತನ ಸೇರಿ ಹಲವು ಯೋಜನೆಗಳನ್ನು ಸರ್ಕಾರ ಜಾರಿಗೊಳಿಸಿದ್ದು, ಅರ್ಹರು ಈ ಯೋಜನೆಗಳನ್ನು ಪಡೆದುಕೊಳ್ಳಬೇಕು. ಒಟ್ಟು 29 ಅರ್ಜಿಗಳು ಸಲ್ಲಿಕೆಯಾಗಿದ್ದು, ಈ ಅರ್ಜಿಗಳನ್ನು ಶೀಘ್ರ ಪರಿಹರಿಸಲಾಗುವುದು ಎಂದು ಭರವಸೆ ನೀಡಿದರು.
ಗ್ರಾಮಸ್ಥ ಸುಧಾಕರ್ ವಟಗಲ್ ಮಾತನಾಡಿ, ಗ್ರಾಮದಲ್ಲಿ ಕುಡಿವ ನೀರಿನ ಸಮಸ್ಯೆ ತಾಂಡವಾಡುತ್ತಿದ್ದು, ಚರಂಡಿಯಿಲ್ಲದೆ ಕಲುಷಿತ ನೀರು ರಸ್ತೆಯಲ್ಲಿ ಹರಿಯುತ್ತಿದೆ. ಬಸ್ ಇಲ್ಲದೆ ಶಾಲಾ ಮಕ್ಕಳಿಗೆ ಸಮಸ್ಯೆಯಾಗಿದೆ. ರಸ್ತೆ ವಿಸ್ತರಣೆ ಮಾಡಬೇಕು. ಇದನ್ನೆಲ್ಲ ನೀವು ಪರಿಹರಿಸುತ್ತಿಲ್ಲ. ವಿವಿಧ ಇಲಾಖೆಯ ಅಧಿಕಾರಿಗಳ ಗೈರಾಗಿರುವುದರಿಂದ ಸಾರ್ವಜನಿಕರ ಸಮಸ್ಯೆಗೆ ಸ್ಪಂದನೆಯಿಲ್ಲದಾಗಿದೆ. ಇನ್ನು ಮುಂದೆ ಎಲ್ಲ ಅಧಿಕಾರಿಗಳು ಬಂದರೆ ಮಾತ್ರ ಕಾರ್ಯಕ್ರಮ ನಡೆಸಬೇಕೆಂದು ಹೇಳಿದರು.
ಸಿಡಿಪಿಒ ಮುದುಕಪ್ಪ, ಕೃಷಿ ಅಧಿಕಾರಿ ಶ್ರೀಶೈಲ ಭೋವಿ, ಜೆಸ್ಕಾಂ ಎಇ ವೆಂಕಟೇಶ, ಗ್ರೇಡ್-2 ತಹಸೀಲ್ದಾರ್ ಷಣ್ಮುಖಪ್ಪ, ಶಿರಸ್ತೇದಾರ್ ಅನೀತಾ ಮಸ್ಕಿ, ನಾಡ ತಹಸೀಲ್ದಾರ್ ದೇವರಾಜ, ಕಂದಾಯ ನಿರೀಕ್ಷಕ ಹರಳಪ್ಪ, ಗ್ರಾಮ ಲೆಕ್ಕಾಧಿಕಾರಿ ರವಿ ವಟಗಲ್, ನಿಂಗಣ್ಣ ಅಮೀನಗಡ, ಧರೆಪ್ಪ ಪಾಮನಕಲ್ಲೂರು, ಬಸಪ್ಪ ಬಸ್ಸಾಪೂರ, ಅನೀತಾ ಗುಡಿಹಾಳ, ಶಿವಲೀಲಾ ಗುಡಿಹಾಳ, ಸಿಆರ್‌ಸಿ ಅಮರಗುಂಡಪ್ಪ ಗ್ರಾಮಸ್ಥರಾದ ಕರಿಯಪ್ಪ, ಡಾ.ಶರಣಪ್ಪ, ರವಿ, ಲಿಂಗರಾಜ ಇತರರಿದ್ದರು.