

ಕವಿತಾಳ: ಶ್ರೀ ಸಿದ್ಧಲಿಂಗ ಸ್ವಾಮಿಗಳ 49ನೇ ಪುಣ್ಯಸ್ಮರಣೆ ಅಂಗವಾಗಿ ಏ.5ರ ವರೆಗೆ ಪ್ರತಿ ಸಂಜೆ ಎಡಿಯೂರ ಸಿದ್ಧಲಿಂಗೇಶ್ವರ ಪುರಾಣ ಹಮ್ಮಿಕೊಳ್ಳಲಾಗಿದೆ ಎಂದು ಕಲ್ಮಠದ ಅಭಿನವ ಸಿದ್ಧಲಿಂಗ ಸ್ವಾಮೀಜಿ ತಿಳಿಸಿದರು.
ಪಟ್ಟಣದ ಕಲ್ಮಠದಲ್ಲಿ ಶನಿವಾರ ಆರಂಭಗೊಂಡ ಪುರಾಣ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು, 35ನೇ ವರ್ದಂತಿ ಮಹೋತ್ಸವವು ನಡೆಯಲಿದೆ. ಮಾ.19ಕ್ಕೆ ಉಜ್ಜಿನಿ ಜಗದ್ಗುರು, ಏ.4ಕ್ಕೆ ಕಾಶಿ ಜಗದ್ಗುರು ಆಗಮಿಸಲಿದ್ದು, ಈ ಎರಡು ದಿನಗಳ ನಡುವೆ ಕೊಪ್ಪಳದ ಶ್ರೀ ಗವಿಸಿದ್ಧೇಶ್ವರ ಸ್ವಾಮೀಜಿ ಪಾಲ್ಗೊಳ್ಳಲಿದ್ದಾರೆ. ಸತತ 21 ದಿನಗಳವರೆಗೆ ನಡೆಯುವ ಈ ಕಾರ್ಯಕ್ರಮದಲ್ಲಿ ಶಂಭುಲಿಂಗ ಶಾಸ್ತ್ರೀ ರಟಗಲ್ ಪುರಾಣ ವಾಚಿಸಲಿದ್ದಾರೆ. ಕೂಡದಳ್ಳಿ ಸಿದ್ದಯ್ಯಸ್ವಾಮಿ, ನಾಗಡದಿನ್ನಿ ಬಸವರಾಜಯ್ಯಸ್ವಾಮಿ ಹಿರೇಮಠ ಹಾಗೂ ಸಿಂಧನೂರಿನ ಎಚ್.ಎಂ.ಶಾಂತವೀರಯ್ಯಸ್ವಾಮಿ ಸಂಗೀತ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ. ಏ.4ರಂದು ಖಾಸಗಿ ವಾಹಿನಿ ರಿಯಾಲಿಟಿ ಶೋನ ಮಹನ್ಯ ಗುರುಪಾಟೀಲ್ ತಂಡದಿಂದ ಸಂಗೀತ ಗಾಯನ ಆಯೋಜಿಸಲಾಗಿದೆ. ಏ.5ರಂದು ಸಿದ್ಧಲಿಂಗ ಸ್ವಾಮಿಗಳ ಪುಣ್ಯಾರಾಧನೆ ನಿಮಿತ್ತ ಬೆಳಗ್ಗೆ ಕರ್ತೃ ಗದ್ದುಗೆಗೆ ಮಹಾರುದ್ರಾಭೀಷೇಕ, ಮಹಾ ಮಂಗಳಾರತಿ, ಜಂಗಮಗಣಾರಾಧನೆ ಜರುಗಲಿದೆ ಎಂದು ತಿಳಿಸಿದರು.