

ಹುಸೇನಬಾಷಾ ಗುಡಗುಂಟಿ ಕವಿತಾಳ
ಉಟಕನೂರಿನ ಮರಿ ಬಸವಲಿಂಗ ದೇಶಿಕೇಂದ್ರ ಸ್ವಾಮೀಜಿ ಭಕ್ತರು ಬೇಡಿದ ವರವನ್ನು ಕೊಡುವ ಕಾಮಧೇನುವಾಗಿದ್ದಾರೆ. ಉಟಕನೂರು ಮಠವು ಬೆಳಗಾವಿ ಜಿಲ್ಲೆಯ ಅಂಕಲಗಿಯ ಶಾಖಾ ಮಠವಾಗಿದೆ. ಅಡವಿಸಿದ್ಧೇಶ್ವರರು ಮಹಾನ್ ಶಿವ ಶರಣರಾಗಿದ್ದರು. ಸಿಂಧನೂರು ತಾಲೂಕಿನ ಅಲಬನೂರಿನ ಬಸವಲಿಂಗ ದೇಶಿಕೇಂದ್ರ ಶಿವಯೋಗಿ ಮತ್ತು ಅಂಕಲಿಮಠದ ನಿರುಪಾದಿ ಸ್ವಾಮೀಜಿ ಶ್ರೀ ಸಿದ್ಧೇಶ್ವರ ಸ್ವಾಮೀಜಿಯ ಶಿಷ್ಯರಾಗಿದ್ದರು. ಅಡವಿಸಿದ್ಧೇಶ್ವರ ಸ್ವಾಮೀಜಿ ಬಸವಲಿಂಗ ತಾತನವರಿಗೂ ಮತ್ತು ನಿರುಪಾದಿ ತಾತನವರಿಗೂ ವಿದ್ಯೆ ಧಾರೆ ಎರೆದು, ಅಡವಿಸಿದ್ದೇಶ್ವರ ಮಠವನ್ನು ಸ್ಥಾಪಿಸಲು ಹೇಳಿ, ಸಿದ್ಧೇಶ್ವರ ಲಿಂಗವನ್ನು ಕೊಟ್ಟು ಆಶೀರ್ವದಿಸಿದ್ದರು. ನಂತರ ಧರ್ಮದ ಕಾರ್ಯವನ್ನು ಭಕ್ತರಿಗೆ ತಿಳಿಸುತ್ತ ಉಟಕನೂರಿಗೆ ಬಂದ ಬಸವಲಿಂಗತಾತನವರು ಹಳ್ಳದ ಬಳಿಯ ಬನ್ನಿಮರದ ಹತ್ತಿರದಲ್ಲಿ ಹಾವು-ಮುಂಗುಸಿ ಪ್ರೀತಿಯಿಂದ ಆಟವಾಡುತ್ತಿರುವುದನ್ನು ಕಂಡರು.
ಪವಿತ್ರ ಸ್ಥಳದ ಮಹತ್ವವನ್ನು ಅರಿತ ಶರಣ ಬಸವಲಿಂಗಸ್ವಾಮೀಜಿ ಅಲ್ಲಿಯೇ ಅಡವಿ ಸಿದ್ಧೇಶ್ವರ ಶರಣರು ಕೊಟ್ಟ ಲಿಂಗವನ್ನು ಪ್ರತಿಷ್ಠಾಪಿಸಿ, ಅಡವಿಸಿದ್ಧೇಶ್ವರ ಮಠವೆಂದು ಕರೆದರು. ಕೆಲದಿನಗಳವರೆಗೆ ಮೂವರು ಶರಣರು ಮಠವನ್ನು ಮುಂದುವರಿಸಿಕೊಂಡು ಹೋದರು. ತರುವಾಯ ವೇದ ಮೂರ್ತಿ ಗುರುಪಾದಯ್ಯ ಮತ್ತು ಶರಣೆ ವೀರಮ್ಮನವರ ಪುಣ್ಯ ಗರ್ಭದಲ್ಲಿ 1938ರಲ್ಲಿ ಮರಿಬಸವಲಿಂಗ ದೇಶಿಕೇಂದ್ರ ಸ್ವಾಮೀಜಿ ಜನಿಸಿದರು. ಇವರನ್ನೇ ಅಡವಿ ಸಿದ್ಧೇಶ್ವರ ಮಠದ ಪೀಠಾಧಿಪತಿಯನ್ನಾಗಿ ಮಾಡಲಾಯಿತು.
ತಾತನವರು ಗೋವುಗಳನ್ನು ಪೂಜ್ಯ ಭಾವನೆಯಿಂದ ಕಾಣುತ್ತಿದ್ದರು. ಆಕಳು, ಎಮ್ಮೆ, ಎತ್ತು, ಕುರಿ ಮೊದಲಾದ ಪ್ರಾಣಿಗಳನ್ನು ತಮ್ಮ ಜತೆಯಲ್ಲೇ ಕರೆದುಕೊಂಡು ಸಂಚಾರ ಮಾಡುತ್ತಿದ್ದರು. ಚಿಲ್ಕರಾಗಿ, ಹರ‌್ವಾಪುರ, ಕಾರಲಕುಂಟಿ, ಗೌಡನಬಾವಿ ಮೊದಲಾದ ಕಡೆ ತಾವು ಜೀವಂತ ಇರುವಾಗಲೇ ಬಸವಲಿಂಗನ ಕಟ್ಟೆಯನ್ನು ಸ್ಥಾಪಿಸಿ ತಮ್ಮ ಜಾತ್ರೆಯನ್ನು ಮಾಡಿಸಿಕೊಂಡರು.
ತಾತನವರ ಪವಾಡಗಳನ್ನು ಕಂಡ ಭಕ್ತರು ದರ್ಶನಕ್ಕಾಗಿ ಕಾಯುತ್ತಿದ್ದರು. ವನ್ಯಜೀವಿಗಳಿಗೆ ಹಿಂಸೆ ನೀಡಬಾರದು ಎಂಬದು ಇವರ ಉಪದೇಶವಾಗಿತ್ತು. ಪ್ರತಿ ಗ್ರಾಮದಲ್ಲಿ ನಾಗದೇವತೆಯ ರೂಪದಲ್ಲಿ ಹುಟ್ಟಿ ಬುರುತ್ತೇನೆ ಎಂದು ಹೇಳಿ 1991ರ ಜ.8ರಂದು ಬೆಳಗ್ಗೆ 7.35ಕ್ಕೆ ಲಿಂಗ ಪೂಜೆ ಮಾಡುತ್ತಲೇ ಉಟಕನೂರುನಲ್ಲಿ ಲಿಂಗೈಕ್ಯರಾದರು. ನಂತರ, ಪ್ರತಿಗ್ರಾಮದಲ್ಲೂ ನಾಗರೂಪದ ಜೀವಿ ಕಂಡು ಬಂದವು. ಭಕ್ತರು ನಾಗರೂಪದ ಜೀವಿಯನ್ನು ಉಟಕನೂರಿನ ಮರಿಬಸವಲಿಂಗದೇಶಿಕೇಂದ್ರ ಸ್ವಾಮೀಜಿ ಎಂದು ತಿಳಿದು, ತುಂಬಿದ ಕೊಡದಲ್ಲಿರಿಸಿ ಪೂಜಿಸಿದರು. ನಾಗರಾಜನು ಐಕ್ಯವಾದ ನಂತರ ಗ್ರಾಮದಲ್ಲಿ ಗದ್ದುಗೆಯನ್ನು ನಿರ್ಮಿಸಿ ಉಟಕನೂರು ತಾತನ ದೇವಸ್ಥಾನವೆಂದು ನಾಮಕರಣ ಮಾಡಿದರು.
ಬಸವಲಿಂಗದೇಶಿಕೇಂದ್ರ ಸ್ವಾಮಿಗಳು ಲಿಂಗೈಕ್ಯರಾದ ನಂತರ ಅದೇ ಗ್ರಾಮದ ಬಸವಲಿಂಗಯ್ಯ ಸಿದ್ದಮ್ಮನವರ ಪುತ್ರರಾದ ಮರಿ ಬಸವರಾಜ ದೇಶಿಕೇಂದ್ರ ಸ್ವಾಮೀಜಿಯನ್ನು ಅಡವಿಸಿದ್ಧೇಶ್ವರ ಮಠದ ನೂತನ ಉತ್ತರಧಿಕಾರಿಯಾಗಿ ಭಕ್ತರ ಸಮ್ಮುಖದಲ್ಲಿ ನೇಮಕ ಮಾಡಲಾಯಿತು. ಶಿಷ್ಯ ನಾಗಪ್ಪತಾತನವರನ್ನು ಜತೆಯಾಗಿ ಕರೆದುಕೊಂಡು, ರಾಜ್ಯದ ಹಲವೆಡೆ ತಾತನವರ ಗದ್ದುಗೆ ಸ್ಥಾಪನೆ ಮಾಡುತ್ತ ಅಲ್ಲಿ ಜಾತ್ರೆಯನ್ನು ಮಾಡಿಸುತ್ತ ಸಾಗಿದರು.
ಧಾರ್ಮಿಕ ಕಾರ್ಯಕ್ರಮಗಳು ಹೀಗಿವೆ: ಜ.15ರಂದು ಮರಿಬಸವಲಿಂಗ ಸ್ವಾಮೀಜಿ ಜಾತ್ರೆ ನಡೆಯಲಿದ್ದು, ಬೆಳಗ್ಗೆ ಬಸವಲಿಂಗಸ್ವಾಮಿಗಳ ಕರ್ತೃ ಗದ್ದುಗೆಗೆ ರುದ್ರಾಭಿಷೇಕ ಸಹಸ್ರ ಬಿಲ್ವಾರ್ಚನೆ, ಪಲ್ಲಕ್ಕಿ ಮೆರವಣಿಗೆ, ಸಂಜೆ 6 ಗಂಟೆಗೆ ಹರ ಗುರು ಚರಮೂರ್ತಿಗಳ ಸಮ್ಮುಖದಲ್ಲಿ ಹೂವಿನ ರಥೋತ್ಸವ ನಡೆಯಲಿದೆ. 8 ಗಂಟೆಗೆ ಧರ್ಮಸಭೆ ನಡೆಯಲಿದೆ.
ಉಟಕನೂರಿನ ಮರಿಬಸವಲಿಂಗ ಸ್ವಾಮೀಜಿ ನಡೆದಾಡುವ ದೇವರು. ಪ್ರಾಣಿ, ಪಕ್ಷಿಗಳನ್ನು ಪ್ರೀತಿಸುವ ತಾತನವರು ಜೀವಂತ ಇರುವಾಗಲೇ ಗೌಡನಬಾವಿ, ಚಿಲ್ಕರಾಗಿ, ಅಂಕುಶದೊಡ್ಡಿಯಲ್ಲಿ ರಥದಲ್ಲಿ ತಾವು ಕುಳಿತು ಜಾತ್ರೆ ನಡೆಸಿದವರು. ಉಟಕನೂರಿನಲ್ಲಿ ಲಿಂಗೈಕ್ಯರಾದರು. ಬಸವಲಿಂಗ ತಾತಾ ಅಲಬನೂರು ಅವರಿಂದ ಉಟಕನೂರಿನಲ್ಲಿ ಸ್ಥಾಪಿತವಾದ ಅಡವಿ ಸಿದ್ಧೇಶ್ವರ ಮಠವು ಮರಿಬಸವಲಿಂಗಸ್ವಾಮಿಗಳ ಕಾಲದಲ್ಲಿ ಪ್ರಸಿದ್ಧಿ ಪಡೆಯಿತು. ಇಂದು ಕರ್ನಾಟಕ, ಆಂಧ್ರ, ಮಹಾರಾಷ್ಟ್ರದಲ್ಲಿ ಅಪಾರ ಭಕ್ತರಿದ್ದಾರೆ.| ಮರಿಬಸವರಾಜ ದೇಶಿಕೇಂದ್ರ ಸ್ವಾಮೀಜಿ, ಉಟಕನೂರು ಮಠದ ಪಿಠಾಧಿಪತಿ. ಮಾನ್ವಿ ತಾಲೂಕಿನಲ್ಲಿ ಪ್ರಸಿದ್ಧಿಯಾದ ಉಟಕನೂರು ಮಠವು ಅಪಾರ ಭಕ್ತರನ್ನು ಹೊಂದಿದೆ. ಜಾತಿ-ಮತ ಬೇಧವಿಲ್ಲ. ಪ್ರತಿಗ್ರಾಮದಲ್ಲಿ ಹಾವಾಗಿ ಹುಟ್ಟಿಬಂದ ತಾತನವರ ಗದ್ದುಗೆಯನ್ನು ನಿರ್ಮಿಸಿ ಜಾತ್ರೆಗಳನ್ನು ನಡೆಸಲಾಗುತ್ತಿದೆ. ಮಾನ್ವಿ, ಮಸ್ಕಿ, ಸಿಂಧನೂರು, ಲಿಂಗಸುಗೂರು, ದೇವದುರ್ಗ, ರಾಯಚೂರು ಜಿಲ್ಲೆಗಳ ವಿವಿಧ ಗ್ರಾಮಗಳಲ್ಲಿ ಮರಿಬಸವಲಿಂಗಸ್ವಾಮೀಜಿ ದೇವಸ್ಥಾನಗಳಿವೆ. ಅದ್ದೂರಿ ಜಾತ್ರೆ ನಡೆಯುತ್ತವೆ. ಉಟಕನೂರು ಪುಣ್ಯ ಕ್ಷೇತ್ರವಾಗಿದ್ದು, ನಾನು ಮಠದ ಪರಮ ಭಕ್ತನಾಗಿದ್ದೇನೆ.| ಶರಣು ಸಾಹುಕಾರ, ಲಿಂಗಸಗೂರು ಸಾ ಚಿಂಚರಕಿ