ಹೆಣ್ಣನ್ನು ಕಡೆಗಣಿಸುವುದನ್ನು ನಿಲ್ಲಿಸಿ: ಹೋರಾಟಗಾರ್ತಿ ಡಾ.ವೆಂ.ವನಜಾ ಕಿವಿಮಾತು

Kavita Memorial Award presentation mandya
Published on

ಮಂಡ್ಯ: ಸಮಾಜದಲ್ಲಿ ಹೆಣ್ಣು ಭ್ರೂಣ ಹತ್ಯೆ ನಿಲ್ಲಬೇಕು. ಅಂತೆಯೇ ಹೆಣ್ಣನ್ನು ಕಡೆಗಣಿಸುವ ಮನೋಭಾವ ಬದಲಾಗಬೇಕು ಎಂದು ಮಹಿಳಾ ಹೋರಾಟಗಾರ್ತಿ ಡಾ.ವೆಂ.ವನಜಾ ಹೇಳಿದರು.

ನಗರದ ಕರ್ನಾಟಕ ಸಂಘದ ಕೆ.ವಿ.ಶಂಕರಗೌಡ ಶತಮಾನೋತ್ಸವ ಭವನದಲ್ಲಿ ಕವಿತಾ ಸ್ಮಾರಕ ಉಪನ್ಯಾಸ-14, ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಕವಿತಾ ಸ್ಮಾರಕ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಅವರು, ಮೊದಲು ಮನೆಯಲ್ಲಿಯೇ ಹೆಣ್ಣು ಬೇಕೆಂಬ ಹಟಕ್ಕಾದರೂ ಬೀಳುವ ಮನಸ್ಥಿತಿ ಹೆಣ್ಣಾದವಳಿಗೆ ಬರಬೇಕು. ಆ ನಂತರ ಸಮಾಜದಲ್ಲಿ ಸ್ವಲ್ಪ ಸುಧಾರಣೆ ಆಗುತ್ತದೆ ಎಂದು ಅಭಿಪ್ರಾಯಪಟ್ಟರು.

ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದ ವಿಶ್ರಾಂತ ಕುಲಪತಿ ಪದ್ಮಾ ಶೇಖರ್ ಮಾತನಾಡಿ, ಸಾಹಿತಿ ರಾಗೌ ತಮ್ಮ ಮಗಳ ನೆನಪಲ್ಲಿ ಪ್ರಶಸ್ತಿ ನೀಡುವ ಮೂಲಕ ಸಾಹಿತ್ಯ ಕ್ಷೇತ್ರ ಬೆಳೆಸಲು ಹಾಗೂ ಮಗಳ ಅಸ್ತಿತ್ವ ಉಳಿಸಿಕೊಳ್ಳುವಲ್ಲಿ ಸಾಗುತ್ತಿರುವುದು ಮೆಚ್ಚುವ ಕೆಲಸ. ಅಪಾರವಾಗಿ ಪ್ರೀತಿಸುತ್ತಿದ್ದ ಮಗಳನ್ನು ರಾಗೌ ಅವರು ಕಳೆದುಕೊಳ್ಳುತ್ತಾರೆ. ಇದರ ಬೆನ್ನಲ್ಲೇ ಮಗನನ್ನೂ ಕಳೆದುಕೊಳ್ಳುತ್ತಾರೆ. ಅವರು ಯಾವ ರೀತಿ ಸಂಕಟವನ್ನು ನುಂಗಿದ್ದಾರೋ ಗೊತ್ತಿಲ್ಲ. ನಂಜುಂಡನ ರೀತಿ ನೋವು ನುಂಗಿರುವ ರಾಗೌ ಎಲ್ಲರಿಗೂ ಮಾದರಿಯಾಗಿದ್ದಾರೆ. ಕವಿತಾ ಎಂಬ ಮುದ್ದು ಮಗಳ ಹೆಸರಿನಲ್ಲಿ ಸಾಹಿತ್ಯ ಕೃಷಿ ಮಾಡುತ್ತಿರುವುದು ಶ್ಲಾಘನೀಯವಾದದು ಎಂದು ತಿಳಿಸಿದರು.

ಶಾರದಾ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲೆ ಡಾ.ಅನುಸೂಯ ಹೊಂಬಾಳೆ ‘ಮಹಿಳೆ ಮತ್ತು ಆಧುನಿಕತೆ’ ವಿಷಯದ ಬಗ್ಗೆ ಉಪನ್ಯಾಸ ನೀಡಿದರು. ಶಂಕರಗೌಡ ಶಿಕ್ಷಣ ಮಹಾವಿದ್ಯಾಲಯದ ಪ್ರಾಂಶುಪಾಲೆ ಡಾ.ವಿ.ಡಿ.ಸುವರ್ಣ, ಸಾಹಿತಿ ರಾಗೌ, ಕರ್ನಾಟಕ ಸಂಘದ ಅಧ್ಯಕ್ಷ ಪ್ರೊ.ಬಿ.ಜಯಪ್ರಕಾಶಗೌಡ, ಸಹಾಯಕ ಪ್ರಾಧ್ಯಾಪಕಿ ಡಾ.ಎಂ.ಕೆಂಪಮ್ಮ ಇತರರಿದ್ದರು.

ಇದೇ ವೇಳೆ ಹೋರಾಟಗಾರ್ತಿ ಡಾ.ವೆಂ.ವನಜಾ ಅವರಿಗೆ 15 ಸಾವಿರ ರೂ ನಗದಿನ ಜತೆಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net