ಅಸ್ಪೃಶ್ಯತಾ ನಿವಾರಣೆ ಗಾಂಧೀಜಿ ಪರಿಕಲ್ಪನೆ: ಕವಯತ್ರಿ ಎಚ್.ಆರ್.ಸುಜಾತಾ ಹೇಳಿಕೆ

Kavita Memorial Award Ceremony Mandya
Published on

ಮಂಡ್ಯ: ಅಸ್ಪೃಶ್ಯತಾ ನಿವಾರಣೆ, ಜನರ ಆರ್ಥಿಕ ಪರಿಸ್ಥಿತಿ ಉತ್ತಮಪಡಿಸುವುದು ಸೇರಿದಂತೆ ಮಹಿಳಾ ಹಾಗೂ ಅವರಿಗೆ ಶಿಕ್ಷಣ ನೀಡುವುದು ಮಹಾತ್ಮ ಗಾಂಧೀಜಿ ಅವರ ಪರಿಕಲ್ಪನೆಯಾಗಿತ್ತು ಎಂದು ಬೆಂಗಳೂರು ಕವಯಿತ್ರಿ ಎಚ್.ಆರ್.ಸುಜಾತಾ ಹೇಳಿದರು.

ನಗರದ ಕೆ.ವಿ.ಶಂಕರಗೌಡ ಶತಮಾನೋತ್ಸವ ಭವನದಲ್ಲಿ ಕರ್ನಾಟಕ ಸಂಘ, ಎಂ.ಎಲ್.ಶ್ರೀಕಂಠೇಗೌಡ ಸಂಶೋಧನಾ ಕೇಂದ್ರದ ಸಹಯೋಗದಲ್ಲಿ ಆಯೋಜಿಸಿದ್ದ ಕವಿತಾ ಸ್ಮಾರಕ ಪ್ರಶಸ್ತಿ ಪ್ರದಾನ ಸ್ವೀಕರಿಸಿ ’ಗಾಂಧಿ ಮತ್ತು ಮಹಿಳೆ’ ಕುರಿತು ಉಪನ್ಯಾಸ ನೀಡಿದ ಅವರು, ಹಳ್ಳಿಯ ಪರಿಕಲ್ಪನೆಯಲ್ಲಿ ಸುಧಾರಣೆಗೆ ಹೆಚ್ಚು ಒತ್ತು ನೀಡಿದ್ದ ಗಾಂಧೀಜಿ ಅವರು ಇಂದಿಗೂ ಪ್ರಸ್ತುತವಾಗಿದ್ದಾರೆ. ಸ್ವಾತಂತ್ರ್ಯ ಎನ್ನುವುದು ಮಹಿಳೆಯರ ಹಕ್ಕಾಗಿದೆ. ಅದನ್ನು ಪುರುಷರ ವಿರುದ್ಧ ಹೋರಾಟ ಮಾಡಿ ಪಡೆದುಕೊಳ್ಳುವಂತೆ ಆಗಬಾರದು. ಮಹಿಳೆಯರಿಗೂ ಸೂಕ್ತ ಸ್ಥಾನ ಸಿಗಬೇಕು. ಹೆಣ್ಣು ಮಕ್ಕಳಿಗೆ ಶಿಕ್ಷಣ ಸಿಗಬೇಕೆನ್ನುವ ಭಾವನೆಯ ಪುರುಷರಲ್ಲಿಯೂ ಬರಬೇಕು. ಜತೆಗೆ ಪುರುಷರು ತಮ್ಮನ್ನು ತಾವು ಶುದ್ಧ ಮಾಡಿಕೊಳ್ಳುವಂತೆ ಗಾಂಧಿ ಅವರು ಸಾರ್ವಜನಿಕವಾಗಿ ಮನವಿ ಮಾಡಿಕೊಂಡಿರುವುದು ಜಗಜ್ಜಾಹೀರು ಎಂದು ಹೇಳಿದರು.

ಪುರುಷರಂತೆ ಸಮಾನವಾಗಿ ಇರಬೇಕೆನ್ನುವ ಉದ್ದೇಶದಿಂದಲೇ ಮಹಿಳೆಯರು ಶ್ರಮಪಡುತ್ತಾರೆ ನಿಜ. ಆದರೆ ಅನೇಕ ಮಹಿಳೆಯರು, ಪುರುಷರ ಮೇಲೆ ತಪ್ಪನ್ನು ಹಾಕಿ ತಮ್ಮ ಪಾಡಿಗೆ ಇದ್ದು ಬಿಡುವುದು ತಪ್ಪಾಗುತ್ತದೆ ಎಂಬುದನ್ನು ಗಾಂಧಿ ಅವರು ಹೇಳಿದ್ದರು. ನಿಮ್ಮ ಸ್ನೇಹಿತೆಯರು, ಅಕ್ಕ-ತಂಗಿಯರ ನಡುವೆ ಒಂದು ಚರ್ಚೆ ಮಾಡಿ ಸುಧಾರಣೆ ಕಂಡುಕೊಳ್ಳಬೇಕು ಎಂಬ ಆಶಯವನ್ನು ತಿಳಿಸಿದ್ದರು. ಗಾಂಧೀಜಿ ವಿಧವೆಯರ ಪುನರ್ ವಿವಾಹ ಬಹಳ ಮುಖ್ಯವಾಗಿದ್ದು, ಇಲ್ಲಿ ಪುರುಷರು ಮನಸ್ಸು ಮಾಡಬೇಕು ಎಂದಿದ್ದಾರೆ. ವಿಧವೆಯರ ಸ್ಥಿತಿಯನ್ನು ಯೋಚಿಸಿದಾಗ ಜಾತಿ ಮೀರಿ ಯುವಕರು ಮುಂದೆ ಬರಬೇಕೆನ್ನುವ ಮಾತನ್ನೂ ಹೇಳಿದ್ದಾರೆ. ನತದೃಷ್ಟ ವೇಶೈಯರನ್ನು ಗೌರವದಿಂದ ಬದುಕಲು ಅನುಕೂಲವಾಗುವ ಹಾಗೆ ಉದ್ಯೋಗ ಕಲಿಸಬೇಕೆಂಬ ಸಂದೇಶ ನೀಡಿದ್ದಾರೆ ಎಂದರು.

ಮೈಸೂರು ಕುವೆಂಪು ಅಧ್ಯಯನ ಸಂಶೋಧನಾ ಸಹಾಯಕಿ ಕೆ.ಎಲ್.ದಿವ್ಯಾ ಅಭಿನಂದನಾ ನುಡಿಯಾಡಿದರು. ಕವಿ ಮ.ರಾಮಕೃಷ್ಣ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕರ್ನಾಟಕ ಸಂಘದ ಅಧ್ಯಕ್ಷ ಪ್ರೊ.ಬಿ.ಜಯಪ್ರಕಾಶಗೌಡ, ಸಾಹಿತಿ ಡಾ.ರಾಗೌ, ದೇವಿಕಾ ಭಾಗವಹಿಸಿದ್ದರು. ಇದೇ ವೇಳೆ ಕವಯಿತ್ರಿ ಎಚ್.ಆರ್.ಸುಜಾತಾ ಅವರಿಗೆ 15 ಸಾವಿರ ರೂ ನಗದಿನ ಜತೆಗೆ ಕವಿತಾ ಸ್ಮಾರಕ ಪ್ರಶಸ್ತಿ ಪ್ರದಾನ ಮಾಡಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net