ಅಭ್ಯರ್ಥಿಗಳ ಭವಿಷ್ಯ ಹೈಕೋರ್ಟ್ ಅಂಗಳದಲ್ಲಿ

CDN 29-1
Published on

ಪ್ರಭಾಕರ ಗೂಳಿಪಾಟೀಲ ಚಡಚಣ

ಸ್ಥಳೀಯ ಪಪಂನ 2ನೇ ಅವಧಿಯ ಅಧ್ಯಕ್ಷ- ಉಪಾಧ್ಯಕ್ಷ ಸ್ಥಾನಕ್ಕೆ ನ. 6ರಂದು ಚುನಾವಣೆ ನಡೆಯಲಿದೆ ಎಂದು ಚುನಾವಣಾಧಿಕಾರಿ ಹಾಗೂ ಚಡಚಣ ತಹಸೀಲ್ದಾರ್ ಸುರೇಶ ಚವಲರ ತಿಳಿಸಿದ್ದಾರೆ.

ಅಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆ ಹಾಗೂ ಉಪಾಧ್ಯಕ್ಷ ಸ್ಥಾನ ಹಿಂದುಳಿದ ವರ್ಗ-ಅ ಮಹಿಳೆಗೆ ಮೀಸಲಾತಿ ನಿಗದಿಗೊಳಿಸಿ ಸರ್ಕಾರ ಅಧಿಸೂಚನೆ ಹೊರಡಿಸಿದ್ದು, ನ. 6ರ ಬೆಳಗ್ಗೆ 10 ರಿಂದ 11 ಗಂಟೆಯವರೆಗೆ ನಾಮಪತ್ರ ಸಲ್ಲಿಸಲು ಅವಕಾಶವಿದೆ. ಮಧ್ಯಾಹ್ನ 1 ಗಂಟೆಗೆ ನಾಮಪತ್ರಗಳ ಪರಿಶೀಲನೆ. ನಂತರ ಅವಶ್ಯವಿದ್ದಲ್ಲಿ ಚುನಾವಣೆ ನಡೆಸಲಾಗುವುದೆಂದು ತಹಸೀಲ್ದಾರ ಚವಲರ ಅವರು ಪ.ಪಂ. ಸದಸ್ಯರಿಗೆ ನೀಡಿರುವ ತಿಳಿವಳಿಕೆ ಪತ್ರದಲ್ಲಿ ತಿಳಿಸಿದ್ದಾರೆ.

ಪಪಂನಲ್ಲಿ ಒಟ್ಟು 16 ಸದಸ್ಯರಿದ್ದು, ವಾರ್ಡ್ ನಂ. 4ರ ಸದಸ್ಯ ಸದಾಶಿವ ಪಾಟೀಲ ಅವರು ಇತ್ತೀಚೆಗೆ ನಿಧನ ಹೊಂದಿದ ಹಿನ್ನೆಲೆಯಲ್ಲಿ ಆ ಸ್ಥಾನ ತೆರವಾಗಿ, ಸದ್ಯ ಪ.ಪಂ. 15 ಸದಸ್ಯರ ಬಲಾಬಲ ಹೊಂದಿದೆ. ಪಪಂನಲ್ಲಿ ಬಿಜೆಪಿ 10, ಕಾಂಗ್ರೆಸ್ 3 ಹಾಗೂ ಇಬ್ಬರು ಪಕ್ಷೇತರ ಸದಸ್ಯರಿದ್ದು, ಬಿಜೆಪಿ ಸ್ಪಷ್ಟ ಬಹುಮತ ಹೊಂದಿದೆ. ಅಧ್ಯಕ್ಷ- ಉಪಾಧ್ಯಕ್ಷ ಎರಡೂ ಸ್ಥಾನ ಮಹಿಳೆಯರಿಗೆ ಮೀಸಲಾಗಿದ್ದು, ಪಪಂ ನಲ್ಲಿ 6 ಮಹಿಳಾ ಸದಸ್ಯರಿದ್ದು ಅವರೆಲ್ಲರೂ ಬಿಜೆಪಿ ಸದಸ್ಯರಾಗಿರುವುದರಿಂದ ಬಿಜೆಪಿ ಪಪಂನ ಚುಕ್ಕಾಣಿ ಹಿಡಿಯುವುದರಲ್ಲಿ ಯಾವುದೇ ಸಂಶಯವಿಲ್ಲ.
ಪಪಂನ ಅಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆಗೆ ಮೀಸಲಾಗಿದ್ದು, ಪಪಂ ನ ಆರೂ ಮಹಿಳಾ ಸದಸ್ಯರು ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಲು ಅರ್ಹರಿದ್ದರೂ ವಾರ್ಡ್ ನಂ. 8ರ ಸದಸ್ಯೆ ಕವಿತಾ ಬಾಬುರಾಯ ಬಿರಾದಾರ ಹಾಗೂ ವಾರ್ಡ್ ನಂ. 13ರ ಸದಸ್ಯೆ ಬಾಳವ್ವ ಪೀರಪ್ಪ ಅಗಸರ ಅವರು ಮಾತ್ರ ಪ್ರಭಲ ಆಕಾಂಕ್ಷಿಗಳಾಗಿದ್ದಾರೆ.

ಉಪಾಧ್ಯಕ್ಷ ಸ್ಥಾನ ಹಿಂದುಳಿದ ವರ್ಗ-ಅ ಮಹಿಳೆಗೆ ಮೀಸಲಾಗಿದ್ದು, ವಾರ್ಡ್ ನಂ. 2ರ ಶರಣವ್ವ ಶಿವಪ್ಪ ಕಟ್ಟಿ ಹಾಗೂ ವಾರ್ಡ್ ನಂ. 14ರ ಸಾವಿತ್ರಿ ಕುಬೇರ ಸಿಂಧೆ ಅವರು ಈ ಮೀಸಲಾತಿಯಡಿ ಆಯ್ಕೆಯಾಗಿದ್ದು, ಇಬ್ಬರೂ ಉಪಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಲು ಪೈಪೋಟಿ ನಡೆಸಿದ್ದಾರೆ.
ಇನ್ನು ರಾಜ್ಯ ಸರ್ಕಾರ ಈ ಹಿಂದೆ ಎರಡು ಬಾರಿ ಮೀಸಲಾತಿ ಕುರಿತು ಹೊರಡಿಸಿದ ರಾಜ್ಯ ಪತ್ರದಲ್ಲಿ ಅಧ್ಯಕ್ಷ ಸ್ಥಾನ ಎಸ್‌ಸಿ ಮಹಿಳೆಗೆ ಮೀಸಲಾಗಿತ್ತು. ಆದರೆ, ಇತ್ತೀಚೆಗೆ ಅಕ್ಟೋಬರ್ 8ರಂದು ಹೊರಡಿಸಿದ ಹೊಸ ಅಧಿಸೂಚನೆಯಲ್ಲಿ ಅಧ್ಯಕ್ಷ ಸಾಮಾನ್ಯ ಮಹಿಳೆಗೆ ಮೀಸಲಾಗಿದ್ದರಿಂದ ಪಪಂನ ಏಕೈಕ ಎಸ್‌ಸಿ ಮಹಿಳಾ ಸದಸ್ಯೆಯಾಗಿರುವ ವಾರ್ಡ್ ನಂ.7ರ ಸದಸ್ಯೆ ಸುರೇಖಾ ಧರ್ಮಣ್ಣ ಬನಸೋಡೆ ಅವರು ಸರ್ಕಾರದ ಅಧಿಸೂಚನೆಯನ್ನು ಪ್ರಶ್ನಿಸಿ ಹಾಗೂ ಈ ಮೊದಲಿನ ಎರಡೂ ಅಧಿಸೂಚನೆಯಂತೆ ಅಧ್ಯಕ್ಷ ಸ್ಥಾನ ಎಸ್‌ಸಿ ಮಹಿಳೆಗೆ ನಿಗದಿಗೊಳಿಸಬೇಕೆಂದು ಕೋರಿ ಕಲಬುರಗಿಯ ಹೈಕೋರ್ಟ್ ವಿಭಾಗೀಯ ಪೀಠಕ್ಕೆ ತಕರಾರು ಅರ್ಜಿ ಸಲ್ಲಿಸಿದ್ದರು.

ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಪೀಠವು ಅಕ್ಟೋಬರ್ 20ರಂದು ಚಡಚಣ ಪಪಂ ಅಧ್ಯಕ್ಷ- ಉಪಾಧ್ಯಕ್ಷ ಚುನಾವಣೆಗೆ ತಡೆಯಾಜ್ಞೆ ನೀಡಿ ಆದೇಶ ಹೊರಡಿಸಿತು. ಅಧಿಸೂಚನೆಗೆ ತಡೆ ನೀಡಿ ಹೊರಡಿಸಿದ ಮಧ್ಯಂತರ ಆದೇಶವನ್ನು ಅಕ್ಟೋಬರ್ 23ರಂದು ಹಿಂಪಡೆದ ನ್ಯಾಯಪೀಠವು ನ. 10ರೊಳಗಾಗಿ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಯಲಿ. ಆದರೆ, ಅರ್ಜಿದಾರ ಸದಸ್ಯೆ ಸುರೇಖಾ ಬನಸೋಡೆ ಅವರು ಪ್ರಶ್ನಿಸಿರುವ ಚುನಾವಣಾ ತಕರಾರು ಅರ್ಜಿಯ ಅಂತಿಮ ಲಿತಾಂಶಕ್ಕೆ ಚುನಾವಣೆಗಳು ಒಳಪಡಲಿದೆ ಎಂದು ಆದೇಶ ನೀಡಿರುವುದು ಈಗ ಸ್ಪರ್ಧಿಸಲು ತುದಿಗಾಲಲ್ಲಿ ನಿಂತಿರುವ ಅಭ್ಯರ್ಥಿಗಳಿಗೆ ನೀರಿಳಿಯದ ಗಂಟಲೋಳ್ ಕಡುಬು ತುರುಕಿದಂತಾಗಿದೆ ಎಂದರೆ ತಪ್ಪಾಗಲಾರದು.

ಈ ಕುರಿತು ಚಡಚಣ ಬಿಜೆಪಿ ಮಂಡಲ ಅಧ್ಯಕ್ಷ ರಾಮ ಅವಟಿ ‘ವಿಜಯವಾಣಿ’ಯೊಂದಿಗೆ ಮಾತನಾಡಿ, ಪಪಂನಲ್ಲಿ ಬಿಜೆಪಿ ಸ್ಪಷ್ಟ ಬಹುಮತ ಹೊಂದಿದ್ದು, ಚುನಾವಣೆಯ ಕುರಿತು ಹೈಕಮಾಂಡ್ ಗಮನಕ್ಕೆ ತರಲಾಗಿದೆ. ಕೆಲವೇ ದಿನಗಳಲ್ಲಿ ಹೈಕಮಾಂಡ್ ಕೂಡ ಪಕ್ಷದ ಸದಸ್ಯರ ಸಭೆ ಕರೆಯಲಿದ್ದು, ಪಕ್ಷ ಸೂಚಿಸುವ ಅಭ್ಯರ್ಥಿಗಳಿಗೆ ಮತ ಹಾಕುವಂತೆ ಎಲ್ಲ ಸದಸ್ಯರಿಗೆ ವಿಪ್ ಜಾರಿಗೊಳಿಸಲಾಗುವುದು ಎಂದು ಹೇಳಿದರು. ಒಟ್ಟಾರೆ ಸದ್ಯ ಚೆಂಡು ಹೈಕಮಾಂಡ್ ಅಂಗಳದಲ್ಲಿದ್ದು, ಅವರು ಯಾರಿಗೆ ಕೃಪೆ ತೋರಿಸುತ್ತಾರೋ ಅವರು ಪಪಂನ ಚುಕ್ಕಾಣಿ ಹಿಡಿಯುವುದು ನಿಶ್ಚಿತ.

StartFragment

EndFragment

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net