ಕವಿತೆಗಳ ಮೂಲಕ ಜಾಗೃತಗೊಳಿ

IMG_20231112_104844
Published on

ಕೆ.ಆರ್. ಪೇಟೆ: ಪ್ರಸ್ತುತ ತಲೆ ಎತ್ತುತ್ತಿರುವ ಹಿಂಸೆ, ಯುದ್ಧದ ಹೆಸರಿನ ಮಾರಣ ಹೋಮಗಳ ಬಗ್ಗೆ ಕವಿಗಳು ತಮ್ಮ ಕವಿತೆಗಳ ಮೂಲಕ ಜನರನ್ನು ಜಾಗೃತಗೊಳಿಸಬೇಕು ಎಂದು ಜಿಲ್ಲಾ ಯುವ ಬರಹಗಾರರ ಬಳಗದ ಸಂಸ್ಥಾಪಕ ಟಿ.ಸತೀಶ್ ಜವರೇಗೌಡ ಅಭಿಪ್ರಾಯಪಟ್ಟರು.
ಪುಸ್ತಕ ಹಬ್ಬದ ಅಂಗವಾಗಿ ಪರಿಚಯ ಪ್ರಕಾಶನ, ತಾಲೂಕು ಯುವ ಬರಹಗಾರರ ಬಳಗ, ಪ್ರಗತಿ ಶಿಕ್ಷಣ ಸಂಸ್ಥೆ ಹಾಗೂ ಕನ್ನಡ ಪರ ಸಂಘಟನೆಗಳ ವತಿಯಿಂದ ಕೆ.ಆರ್.ಪೇಟೆಯ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಭಾನುವಾರ ಆಯೋಜಿಸಿದ್ದ ಕವಿಗೋಷ್ಠಿ ಉದ್ಘಾಟಿಸಿ ಮಾತನಾಡಿದ ಅವರು, ಪ್ರಸ್ತುತ ಸನ್ನಿವೇಶದಲ್ಲಿ ಭಾರತವು ಸೇರಿದಂತೆ ಜಗತ್ತಿನ ನಾನಾ ದೇಶಗಳಲ್ಲಿ ಯುದ್ಧ, ಕೋಮುವಾದ, ಭ್ರಷ್ಟಾಚಾರ, ಜಾತಿವಾದದ ಸಂಸ್ಕೃತಿ ಹೆಚ್ಚುತ್ತಿದೆ. ಇದರ ಬಗ್ಗೆ ಜನರಿಗೆ ಅರಿವು ಮೂಡಿಸುವ ಹೊಣೆಗಾರಿಕೆ ಕವಿಗಳ ಮೇಲಿದೆ ಎಂದರು. ವಿಜ್ಞಾನ, ತಂತ್ರಜ್ಞಾನ, ಆವಿಷ್ಕಾರದಲ್ಲಿ ಮುಂದಿರುವ ನಾವು ಮಾನವೀಯತೆ, ಮನುಷ್ಯತ್ವ ಹಾಗೂ ಮನುಷ್ಯರ ನಡುವಿನ ಸಂಬಂಧಗಳ ಮೌಲ್ಯಗಳನ್ನು ಕಳೆದುಕೊಳ್ಳುತ್ತಿದ್ದೇವೆ. ತಂತ್ರಜ್ಞಾನದ ಮೊರೆಹೋಗಿ ಓದುವ ಸಂಸ್ಕೃತಿಯನ್ನು ಕಳೆದುಕೊಳ್ಳುತ್ತಿದ್ದೇವೆ. ಹಾಗಾಗಿ, ಓದುವವರ ಸಂಖ್ಯೆ ಹೆಚ್ಚಾಗಬೇಕು. ಮನುಷ್ಯ ಮನುಷ್ಯರನ್ನು ಪ್ರೀತಿಸುವ ಸಂಸ್ಕೃತಿ ಬೆಳೆಯಬೇಕು ಎಂದು ತಿಳಿಸಿದರು.
ವಿಶ್ರಾಂತ ಪ್ರಾಂಶುಪಾಲರಾದ ಕೆ.ಕಾಳೇಗೌಡ ಮಾತನಾಡಿ, ಕವಿತೆ ರಚಿಸಿವುದು, ಸಾಹಿತ್ಯ ಬರವಣಿಗೆ ಸುಲಭದ ಕೆಲಸವಲ್ಲ. ಇದಕ್ಕೆ ಏಕಾಗ್ರತೆ, ವಿಶಾಲವಾದ ಆಲೋಚನೆ ಇರಬೇಕು ಎಂದರು. ಪುಸ್ತಕ ಹಬ್ಬ ಉದ್ಘಾಟಿಸಿ ಮಾತನಾಡಿದ ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಹಾಗೂ ಶಿಕ್ಷಕ ಅಂಚಿ ಸಣ್ಣ ಸ್ವಾಮಿಗೌಡ ಮಾತನಾಡಿ, ಜನರು ಪುಸ್ತಕ ಖರೀದಿಸಿ ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು. ಹಾರ, ಶಾಲು ಹಾಕಿ ಗೌರವಿಸುವ ಬದಲು ಪುಸ್ತಕ ನೀಡಿಬೇಕು ಎಂದವರು ಸಲಹೆ ಮಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net