ಹಿಂದು ಸಂಸ್ಕೃತಿ ಟೀಕಿಸುವುದನ್ನು ಬುದ್ಧಿಜೀವಿಗಳು ಬಿಡಲಿ: ಬಿಜೆಪಿ ಮಾಜಿ ನಗರಾಧ್ಯಕ್ಷ ಎಚ್.ಆರ್.ಅರವಿಂದ್ ಹೇಳಿಕೆ

31_10_Mdy_03(Kavyamela)
Published on

ಮಂಡ್ಯ: ನಾಡಿನ ಕೆಲ ಬುದ್ಧಿಜೀವಿಗಳು ಎನಿಸಿಕೊಂಡವರು ಹಿಂದು ಧರ್ಮ ಹಾಗೂ ಸಂಸ್ಕೃತಿಯನ್ನು ಟೀಕಿಸುವುದನ್ನು ಬಿಡಲಿ ಎಂದು ಬಿಜೆಪಿ ಮಾಜಿ ನಗರಾಧ್ಯಕ್ಷ ಎಚ್.ಆರ್.ಅರವಿಂದ್ ಹೇಳಿದರು.

ನಗರದ ಗಾಂಧಿಭವನದಲ್ಲಿ ಕಸ್ತೂರಿ ಸಿರಿಗನ್ನಡ ವೇದಿಕೆಯಿಂದ ಸ್ವಾತಂತ್ರೃ ಅಮೃತಮಹೋತ್ಸವದ ಅಂಗವಾಗಿ ಆಯೋಜಿಸಿದ್ದ ಕವನ ಸಂಕಲನ ಬಿಡುಗಡೆ ಹಾಗೂ 27ನೇ ರಾಜ್ಯಮಟ್ಟದ ಕವಿ ಕಾವ್ಯಮೇಳ, ಸಾಧಕರಿಗೆ ಅಭಿನಂದನೆ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

ಹಿಂದುಧರ್ಮ, ಸಂಸ್ಕೃತಿ, ಆಚರಣೆಗಳ ಪಾಲನೆಯೊಂದಿಗೆ ಹುಟ್ಟಿ ಬೆಳೆದ ಕೆಲ ಬುದ್ದಿಜೀವಿಗಳು ಧರ್ಮ-ಧರ್ಮಗಳ ನಡುವೆ ಎತ್ತಿಕಟ್ಟುವ ಕೆಲಸವನ್ನು ಬಿಡಬೇಕು. ಎಲ್ಲ ಧರ್ಮ ಮತ್ತು ಸಂಸ್ಕೃತಿಗಳನ್ನು ಟೀಕಿಸುವ ಸೌಜನ್ಯ ಬೆಳೆಸಿಕೊಳ್ಳದ ಮೇಲೆ ಒಂದು ಧರ್ಮವನ್ನು ಟೀಕಿಸುವುದು ಸಮಂಜಸವಲ್ಲ ಎಂದು ಕಿಡಿಕಾರಿದ ಅವರು, ಸಾಹಿತಿಗಳು ಸಾಹಿತ್ಯದ ಮೂಲಕ ಸಮಾಜದ ಅಂಕುಡೊಂಕುಗಳನ್ನು ತಿದ್ದಬೇಕು, ಧರ್ಮ-ಧರ್ಮಗಳನ್ನು ಬೆಸೆಯಬೇಕು. ಅದು ಬಿಟ್ಟು ತಾನು ಜನ್ಮತಾಳಿದ ಧರ್ಮದ ಆಚರಣೆಯನ್ನು ಹೀಯಾಳಿಸುವುದು ಸೂಕ್ತವಲ್ಲ. ಆತ ನೈಜ ಬುದ್ಧಿಜೀವಿಯಾಗಲು ಸಾಧ್ಯವಿಲ್ಲ ಎಂದು ತಿಳಿಸಿದರು.

ಸಮ್ಮೇಳನಾಧ್ಯಕ್ಷತೆಯನ್ನು ಸಾಹಿತಿ ಜ್ಯೋತಿಸಿದ್ದಪ್ಪ ದೊಡ್ಡಲಿಂಗಣ್ಣ ವಹಿಸಿದ್ದರು. ದನಗೂರು ವೀರಸಿಂಹಾಸನ ಮಠಾಧಿಪತಿ ಮುಮ್ಮಡಿ ಷಡಕ್ಷರ ದೇಶಿಕೇಂದ್ರ ಶಿವಾಚಾರ್ಯ ಸ್ವಾಮಿ, ಜ್ಯೋತಿಷಿ ಶಿವಪ್ರಸಾದ್‌ಗುರು, ಮನ್‌ಮುಲ್ ನಿರ್ದೇಶಕ ಯು.ಸಿ.ಶಿವಕುಮಾರ್, ವೇದಿಕೆ ಅಧ್ಯಕ್ಷ ಪೋತೇರ ಮಹದೇವು, ವಕೀಲ ಎಂ.ಗುರುಪ್ರಸಾದ್ ಇತರರಿದ್ದರು.

ಇದೇ ವೇಳೆ ವಿವಿಧ ಜಿಲ್ಲೆಗಳಿಂದ ಆಗಮಿಸಿದ್ದ ಕವಿಗಳು ಸ್ವರಚಿತ ಕವನ ವಾಚಿಸಿದರು. ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುತ್ತಿರುವವರಿಗೆ ಕಸ್ತೂರಿ ಧ್ರುವತಾರೆ ಪ್ರಶಸ್ತಿ ನೀಡಿ ಅಭಿನಂದಿಸಲಾಯಿತು. ಕಾರ್ಯಕ್ರಮಕ್ಕೂ ಮುನ್ನ ದಿವಂಗತ ನಟ ಡಾ.ಪುನೀತ್‌ರಾಜ್‌ಕುಮಾರ್ ಅವರ ಭಾವಚಿತ್ರಕ್ಕೆ ಗಣ್ಯರು ಪುಷ್ಪನಮನ ಸಲ್ಲಿಸಿ ಸಂತಾಪ ಸೂಚಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net