ಕವಿಗಳು ವಾಸ್ತವದ ಅರಿವು ಭವಿಷ್ಯದ ಚಿಂತನೆಯ ಕವಿತೆಗಳನ್ನು ರಚಿಸಿ ಸಮಾಜವನ್ನು ಎಚ್ಚರಿಸಬೇಕು: ಪ್ರೊ. ವಿಷ್ಣುಕಾಂತ ಚಟಪಲ್ಲಿ

25GDG06
Published on

ವಿಜಯವಾಣಿ ಸುದ್ದಿಜಾಲ ಗದಗ
ಗ್ರಾಮೀಣ ವಿಶ್ವವಿದ್ಯಾಲಯವು ರೈತರಿಗೆ ಕೃಷಿಯಲ್ಲಿ ಸಿಗಬೇಕಾದ ಎಲ್ಲ ಮಾರ್ಗದರ್ಶನಗಳನ್ನು ರೈತರಿಗೆ ನೀಡುತ್ತಿದೆ. ಇಲ್ಲಿ ಗ್ರಾಮೀಣ ಬದುಕಿನ ಕನ್ನಡಿಯಾಗಿ ರೈತರ ಬದುಕಿಗೆ ಅವಶ್ಯವಾಗಿ ಬೇಕಾಗಿರುವ ಎಲ್ಲ ಪ್ರಯತ್ನಗಳನ್ನು ಮಾಡಲಾಗುತ್ತಿದೆ ಎಂದು ಗ್ರಾಮೀಣಾಭಿವೃದ್ಧಿ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ವಿಷ್ಣುಕಾಂತ ಚಟಪಲ್ಲಿ ಹೇಳಿದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಸಾಮಾಜಿಕ ಸಾಂಸತಿಕ ವೇದಿಕೆಯಿಂದ ಇತ್ತಿಚೆಗೆ ವಿಶ್ವವಿದ್ಯಾಲಯದಲ್ಲಿ ಏರ್ಪಡಿಸಿದ್ದ ದಸರಾ ಕವಿಗೋಷ್ಠಿ ಉದ್ಘಾಟಿಸಿ ಮಾತನಾಡಿದ ಅವರು, ರೈತರು ಕೂಲಿಕಾಮಿರ್ಕರು ಸಾಮಾನ್ಯ ಜನರೆಲ್ಲರೂ ಬಂದಿರುವ ಈ ವಿಶ್ವವಿದ್ಯಾಲಯಕ್ಕೆ ಕವಿಗಳು ಬಂದಿರಲಿಲ್ಲ. ಈ ಕೊರತೆಯನ್ನು ಸಾಹಿತ್ಯ ಪರಿಷತ್ತು ನೀಗಿಸಿದೆ. ಮುಂಬರುವ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವನ್ನು ನಾವು ನೀವೆಲ್ಲರೂ ಸೇರಿ ತಾಯಿ ಭುವನೇಶ್ವರಿಯ ಕನ್ನಡ ತೇರನೆಳೆಯೋಣ ಎಂದು ಚಟಪಲ್ಲಿ ಹೇಳಿದರು.
ಕವಿ ಬಸವರಾಜ ಸಂಶಿ ಮಾತನಾಡಿ, ಕವಿ ಕಲಾವಿದರು ಸಾಹಿತಿಗಳ ಮೇಲೆ ದೊಡ್ಡ ಜವಾಬ್ದಾರಿ ಇದೆ. ಇವರಿಂದ ಸಮಾಜವನ್ನು ತಿದ್ದುವ, ಒಳಿತಿನೆಡೆಗೆ ಕೊಂಡೊಯ್ಯುವ ಕಾರ್ಯವಾಗಬೇಕಿದೆ. ಪ್ರಾಚಿನ ಸಾಹಿತ್ಯ ರಾಜಾಶ್ರಯದಲ್ಲಿತ್ತು. ಆದರೆ ಈಗ ನಾವು ಪ್ರಜಾಪ್ರಬುತ್ವ ವ್ಯವಸ್ಥೆಯಲ್ಲಿದ್ದೇವೆ. ವಿಚಾರ ಅಭಿವ್ಯಕ್ತಿ ಮುಕ್ತವಾಗಿರಲು ನಮ್ಮ ಸಂವಿಧಾನ ನಮಗೆ ಹಕ್ಕು ಕೊಟ್ಟಿದೆ. ವಾಸ್ತವದ ಅರಿವು, ಭವಿಷ್ಯದ ಚಿಂತನೆಯನ್ನಿರಿಸಿಕೊಂಡು ಸಾಹಿತ್ಯವನ್ನು ರಚನೆ ಮಾಡಿ ಸಮಾಜವನ್ನು ತಿದ್ದುವ, ತಪ್ಪೆಸಗಿದವರನ್ನು ತಿವಿಯುವ ಕಾರ್ಯವನ್ನು ಕವಿತೆಗಳು ಮಾಡಬೇಕು ಎಂದರು.
ಜಿಲ್ಲಾ ಕಸಾಪ ಅಧ್ಯ ವಿವೇಕಾನಂದಗೌಡ ಪಾಟೀಲ ಮಾತನಾಡಿ, ಕವಿಗೋಷ್ಠಿಯಲ್ಲಿ ಭಾಗವಹಿಸುವುದರಿಂದ ಕವನವನ್ನು ಹೇಗೆ ವಾಚಿಸಬೇಕೆಂಬ ತಂತ್ರ ತಿಳಿಯುವುದಲ್ಲದೆ, ಶಬ್ದ ಸಂಪತ್ತನ್ನು ಬಳಸುವ ಕಲೆ ಸಿದ್ಧಿಸುತ್ತದೆ ಎಂದರು.
ಕವಿಗೋಷ್ಠಿಯಲ್ಲಿ ಪ್ರೊ. ಬಸವರಾಜ ಲಕ್ಕಣ್ಣವರ, ಡಾ. ಚಂದ್ರಪ್ಪ ಬಾರಂಗಿ, ಬಸವರಾಜ ನೆಲಜೇರಿ, ಕೊಟ್ರೇಶ ಜವಳಿ, ಎಂ. ಡಿ. ಮಾದರ. ಎಸ್​.ಕೆ.ಆಡಿನ, ಎಸ್​. ವಿ. ಕಾಕೋಳ, ಮಂಜುನಾಥ ವಾಲ್ಮೀಕಿ, ಶರಣಪ್ಪ ಪೂಜಾರ, ಸ್ನೇಹಾ ಮಾಲಿಗೌಡ್ರ ಹಲವರು ಕವನ ವಾಚನ ಮಾಡಿದರು.
ಯು. ಎಸ್​. ಕಣವಿ, ನಿರ್ಮಲಾ ತಡವಾಡೆ, ಆನಂದ ಹಡಪದ, ಎಂ. ಎಸ್​. ಅಸುಂಡಿ, ಡಾ. ಶಂಕರ ಬಾರಿಕೇರ, ಸಿ. ಎಂ. ಮಾರನಬಸರಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net