ಸಂಶೋಧನೆಗೆ ಕವಿವಿ-ಗೋರಬಾಳ್​ ಪ್ರತಿಷ್ಠಾನ ಒಪ್ಪಂದ

26 vikram 1
Published on

ವಿಜಯವಾಣಿ ಸುದ್ದಿಜಾಲ ಧಾರವಾಡ

ಬದಲಾದ ಪರಿಸ್ಥಿತಿಯಲ್ಲಿ ವಿಶ್ವ ವಿದ್ಯಾಲಯಗಳ ಜತೆಗೆ ಖಾಸಗಿ ಸಂಸ್ಥೆಗಳು, ಉದ್ಯಮಗಳು, ಕಾರ್ಪೊರೇಟ್​ ಕಂಪನಿಗಳು ಮತ್ತು ಸಂಘ ಸಂಸ್ಥೆಗಳು ಶೈಕ್ಷಣಿಕ ಚಟುವಟಿಕೆಗಳಿಗೆ ಪೂರಕವಾಗಿ ಕೈ ಜೋಡಿಸುವುದು ಇಂದಿ ದಿನಗಳಲ್ಲಿ ಅಗತ್ಯವಾಗಿದೆ ಎಂದು ಕರ್ನಾಟಕ ವಿಶ್ವ ವಿದ್ಯಾಲಯದ ಕುಲಪತಿ ಪ್ರೊ. ಜಯಶ್ರೀ. ಎಸ್​ ಅಭಿಪ್ರಾಯಪಟ್ಟರು.

ನಗರದ ಕರ್ನಾಟಕ ವಿಶ್ವ ವಿದ್ಯಾಲಯದ ಸಿಂಡಿಕೇಟ್​ ಸಭಾಂಗಣದಲ್ಲಿ ವಿದ್ಯಾರ್ಥಿಗಳ ಶೈಕ್ಷಣಿಕ ಚಟುವಟಿಕೆಗಳಿಗೆ ಪೂರಕವಾಗಿ ಕವಿವಿ ರಸಾಯನಶಾಸ್ತ್ರ ವಿಭಾಗ ಹಾಗೂ ಬೆಂಗಳೂರಿನ ಡಾ. ಎಂ.ಆರ್​.ಗೋರಬಾಳ್​ ಪ್ರತಿಷ್ಠಾನ ಜತೆಗೆ ಒಪ್ಪಂದ ಮಾಡಿಕೊಂಡು ಮಾತನಾಡಿದರು.

ವಿದ್ಯಾರ್ಥಿಗಳಲ್ಲಿ ಕ್ರಿಯಾಶೀಲತೆ, ಅನ್ವೇಷಣೆಗೆ ಪೂರಕವಾಗಿ ಉತ್ತೇಜನ ನೀಡಲು ಶಿಷ್ಯವೇತನ ಹೆಚ್ಚು ಮಹತ್ವ ಪಡೆದಿದೆ ಎಂದ ಅವರು, ಪ್ರಸ್ತುತ ಕಾರ್ಪೊರೇಟ್​ ಸಂಸ್ಥೆ, ಉದ್ಯಮ ಮತ್ತು ಸಂಘ ಸಂಸ್ಥೆಗಳು ಶಿಕ್ಷಣ ಸಂಸ್ಥೆ ಮತ್ತು ವಿವಿಗಳ ಜತೆಗೆ ಸಹಾಯ ಸಹಕಾರ ಇಂದಿನ ಅಗತ್ಯವಾಗಿದೆ. ಸಂಘ ಸಂಸ್ಥೆಗಳು, ಉದ್ಯಮಿಗಳು ಮತ್ತು ಸಂಘ ಸಂಸ್ಥೆಗಳು ಸಮಾಜಕ್ಕೆ ಕೊಡುಗೆ ನೀಡುವ ಉದ್ದೇಶ ಹೊಂದಿದ್ದರೆ ಸಮಾಜದಲ್ಲಿ ಬದಲಾವಣೆ ಸಾಧ್ಯ ಎಂದರು.

ಕವಿವಿ ಕುಲಸಚಿವ ಡಾ. ಎ. ಚೆನ್ನಪ್ಪ ಮಾತನಾಡಿ, ಸಮಾಜದ ಬಲವರ್ಧನೆಗೆ ಮತ್ತು ಶಿಕ್ಷಣ ಸಂಸ್ಥೆಗಳ ಸಬಲೀಕರಣಕ್ಕೆ ಕಾರ್ಪೊರೇಟ್​ ಸಾಮಾಜಿಕ ಜವಾಬ್ದಾರಿ ಯೋಜನೆ ಅಡಿ ಉದ್ಯಮಿಗಳು, ಕಾರ್ಪೊರೇಟ್​ ಕಂಪನಿಗಳು ಮತ್ತು ಸಂಘ ಸಂಸ್ಥೆಗಳು ವಿವಿಗಳು ಕೈ ಜೋಡಿಸಬೇಕು ಎಂದರು.

ಪ್ರತಿಷ್ಠಾನದ ಅಧ್ಯಕ್ಷ ರಮೇಶ ಗೋರಬಾಳ ಮಾತನಾಡಿ, ನನ್ನ ತಂದೆ ಎಂ.ಆರ್​.ಗೋರಬಾಳ ಈ ವಿವಿಯಲ್ಲಿ ಕಲಿತು ಇಲ್ಲಿಯೇ ಸೇವೆ ಮಾಡಿದ್ದಾರೆ. ಹೀಗಾಗಿ ವಿವಿಗೆ ಕೊಡುಗೆ ನೀಡುವ ಉದ್ದೇಶದಿಂದ ಪ್ರತಿಷ್ಠಾನ ವತಿಯಿಂದ ಸಂಶೋಧನಾ ನಿರತ ವಿದ್ಯಾರ್ಥಿಗಳಿಗೆ ಶಿಷ್ಯವೇತನ ನೀಡುವುದು, ಅಂತರಾಷ್ಟ್ರೀಯ ಉಪನ್ಯಾಸ ಆಯೋಜಿಸಲು ಸಹಾಯಧನ, ರಸಾಯನಶಾಸ್ತ್ರ ವಿಭಾಗದ ಉತ್ತಮ ಸಂಶೋಧನಾ ಪ್ರೌಢ ಪ್ರಬಂಧಕ್ಕೆ ಸ್ನಾತಕೋತ್ತರ ವಿದ್ಯಾರ್ಥಿಗೆ ನಗದು ಪ್ರಶಸ್ತಿ ನೀಡುವುದೇ ಒಪ್ಪಂದ ಉದ್ದೇಶ ಎಂದರು.

ಕರ್ನಾಟಕ ವಿಶ್ವ ವಿದ್ಯಾಲಯದ ರಸಾಯನಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ. ರವೀಂದ್ರ ಕಾಂಬಳೆ, ಡಿ.ಎಸ್​. ಪಾಟೀಲ, ಪ್ರಾಧ್ಯಾಪಕರಾದ ಪ್ರೊ.ಆರ್​.ಬಿ.ಚೌಗಲೆ, ಪ್ರೊ. ಎಲ್​.ಎ. ಶಾಸ್ತ್ರಿ, ಪ್ರೊ. ಸುಜಾತ, ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net