

ಎಸ್.ಲಿಂಗರಾಜು ಮಂಗಲ ಹನೂರು
ತಾಲೂಕಿನ ಮಲೆಮಹದೇಶ್ವರ ಬೆಟ್ಟದ ಮಾದಪ್ಪನ ದೇಗುಲದಲ್ಲಿ ಆಷಾಢ ಮಾಸದ ಪ್ರಥಮ ಏಕಾದಶಿ ಹಿನ್ನೆಲೆಯಲ್ಲಿ ಬೇಡಗಂಪಣ ಅರ್ಚಕರು 30 ಕಿ.ಮೀ ದೂರದ ಕಾಡಿನಿಂದ ಕಾಲ್ನಡಿಗೆಯಲ್ಲಿ ಕಾವೇರಿ ನೀರನ್ನು ತಂದು ಭಾನುವಾರ ಸಾಲೂರು ಬೃಹನ್ಮಠದ ಪೀಠಾಧಿಪತಿ ಡಾ. ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ಸಮ್ಮುಖದಲ್ಲಿ ಮಾದಪ್ಪನಿಗೆ ಜಲಾಭಿಷೇಕ ನೆರವೇರಿಸಿದರು.
ಏಕಾದಶಿ ಪ್ರಯುಕ್ತ ಸ್ವಾಮಿಗೆ ಸಂಪ್ರದಾಯದಂತೆ ಜಲಾಭಿಷೇಕ ನೆರವೇರಿಸಲು ಶನಿವಾರ ಬೇಡಗಂಪಣ ಅರ್ಚಕರು ಕಾವೇರಿ ವನ್ಯಜೀವಿ ವ್ಯಾಪ್ತಿಯ ಗೋಪಿನಾಥಂ ಬಳಿಯ ಕೋಟೆಯೂರಿನ ಕಾವೇರಿ ನದಿ ತೀರಕ್ಕೆ ಕಾಲ್ನಡಿಗೆಯಲ್ಲಿ ತೆರಳಿ ಅಲ್ಲಿಯೇ ಬೀಡು ಬಿಟ್ಟಿದ್ದರು. ಭಾನುವಾರ ಬೆಳಗ್ಗೆ 7 ಗಂಟೆಯಲ್ಲಿ ಉಪವಾಸವಿದ್ದ ಬೇಡಗಂಪಣ ಅರ್ಚಕರು ಕಾವೇರಿ ಮಾತೆಗೆ ಪೂಜೆ ಸಲ್ಲಿಸಿ ಸ್ವಾಮಿಯ ಮಜ್ಜನಕ್ಕೆ ಬಿಂದಿಗೆಯಲ್ಲಿ ನೀರನ್ನು ತುಂಬಿಟ್ಟರು. ಬಳಿಕ ಬಿಂದಿಗೆಯ ಬಾಯಿಗೆ ಬಟ್ಟೆ ಕಟ್ಟಿ ಫಲ-ತಾಂಬೂಲಗಳಿಂದ ಅರ್ಪಿಸಿ ಧಾರ್ಮಿಕ ಕೈಂಕರ್ಯದೊಂದಿಗೆ ವಿಶೇಷ ಪೂಜೆ ನೆರವೇರಿಲಾಯಿತು. ಅರಣ್ಯ ಪ್ರದೇಶದ ಹಾದಿಯಲ್ಲಿ ಸುಮಾರು 30 ಕಿ.ಮೀ ಕಾಲ್ನಡಿಗೆಯಲ್ಲಿ ಕ್ರಮಿಸಿದ ಅರ್ಚಕರು ಸಂಜೆ 4ಕ್ಕೆ ಮ.ಬೆಟ್ಟಕ್ಕೆ ತಲುಪಿದರು.
ವಿಶೇಷ ಪೂಜೆ, ಸ್ವಾಗತ: ಕಾಡಿನಿಂದ ಕಾಲ್ನಡಿಗೆಯಲ್ಲಿ ಕರೆತಂದ ಕಾವೇರಮ್ಮನಿಗೆ ಮ.ಬೆಟ್ಟದಲ್ಲಿ ಶ್ರೀ ಮಲೆಮಹದೇಶ್ವರ ಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ ಹಾಗೂ ದೇಗುಲದ ಆಗಮಿಕರು, ಬೇಡಗಂಪಣ ಅರ್ಚಕರು ವಿಶೇಷ ಪೂಜೆ ಸಲ್ಲಿಸಿ, ಸ್ವಾಗತಿಸಿ ಬರಮಾಡಿಕೊಂಡರು. ಬಳಿಕ ಅಂತರಗಂಗೆಯ ಕಲ್ಯಾಣಿಯ ಬಳಿ ಸಾಲೂರು ಬೃಹನ್ಮಠದ ಪೀಠಾಧಿಪತಿ ಡಾ. ಶ್ರೀ ಶಾಂತ ಮಲ್ಲಿಕಾರ್ಜುನ ಸ್ವಾಮೀಜಿ ಅವರ ಸಮ್ಮುಖದಲ್ಲಿ ಮಜ್ಜನದ ಬಿಂದಿಗೆ ಇಟ್ಟು ವಿಶೇಷ ಪೂಜೆ ನೆರವೇರಿಸಲಾಯಿತು. ದೇಗುಲದಿಂದ ಸತ್ತಿಗೆ, ಸೂರಿಪಾನಿ, ನಗಾರಿ, ಜಾಗಟೆ ಹಾಗೂ ಮಂಗಳವಾದ್ಯದೊಂದಿಗೆ ತೆರಳಿದ ದೇಗುಲದ ಸರದಿ ಅರ್ಚಕರು ಕಾವೇರಮ್ಮನನ್ನು ದೇಗುಲಕ್ಕೆ ಕರೆತಂದು ದೀವಟಿಗೆ ಸೇವೆಯೊಂದಿಗೆ ದೊಡ್ಡ ಸತ್ತಿಗೆ, ಚಿಕ್ಕಸತ್ತಿಗೆ ಹಾಗೂ ನಂದಿ ಕಂಬಗಳ ಸಮೇತ ದೇಗುಲದ ಸುತ್ತ ಪ್ರದಕ್ಷಿಣೆ ಹಾಕಲಾಯಿತು. ಈ ವೇಳೆ ಭಕ್ತರು ಜಯಘೋಷ ಮೊಳಗಿಸಿದರು.
ಏಕಕಾಲದಲ್ಲಿ ಪೂಜೆ: ಕಾಡಿನಿಂದ ತಂದ ಕಾವೇರಿ ನೀರನ್ನು ಮಹದೇಶ್ವರ ಸ್ವಾಮಿಯ ಗರ್ಭಗುಡಿಯ ಮುಖ್ಯದ್ವಾರದಲ್ಲಿ ಇರಿಸಿ ಡಾ. ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ಅವರ ಸಾನ್ನಿಧ್ಯದಲ್ಲಿ ಸಂಜೆ ಏಕಕಾಲದಲ್ಲಿ ಮುದ್ದು ಮಾಯ್ಕರನಿಗೆ ಹಾಗೂ ಕಾವೇರಿ ಮಾತೆಗೆ ವಿಶೇಷ ಪೂಜೆ ಸಲ್ಲಿಸಲಾಯಿತು. ಬಳಿಕ ಆಗಮಿಕರ ವೇದ, ಮಂತ್ರ ಘೋಷದ ನಡುವೆ ಬೇಡಗಂಪಣ ಅರ್ಚಕರು ಮಹದೇಶ್ವರ ಸ್ವಾಮಿಗೆ ರುದ್ರಾಭಿಷೇಕದೊಂದಿಗೆ ತ್ರಿಕಾಲ ಪೂಜೆ ನೆರವೇರಿಸಿ ಸಂಪ್ರದಾಯಿಕವಾಗಿ ಮಾದಪ್ಪನಿಗೆ ಕಾವೇರಿ ನೀರಿನ ಅಭಿಷೇಕ ನೆರವೇರಿಸಲಾಯಿತು. ಬಳಿಕ ಸ್ವಾಮಿಯ ವಿವಿಧ ಪುಷ್ಪಗಳಿಂದ ಸಿಂಗರಿಸಿ ಭಕ್ತರಿಗೆ ದೇವರ ದರ್ಶನಕ್ಕೆ ಅವಕಾಶ ನೀಡಲಾಯಿತು.
ಪುರಾಣ ಕಥೆ: ಮ.ಬೆಟ್ಟದ ಮಾದಪ್ಪನ ದೇಗುಲದಲ್ಲಿ ಏಕಾದಶಿ ದಿನ ಕಾವೇರಿ ನೀರನ್ನು ತಂದು ಸ್ವಾಮಿಗೆ ಜಲಾಭಿಷೇಕ ನೆರವೇರಿಸುವ ಸಂಪ್ರದಾಯದ ಹಿಂದೆ ಪುರಾಣ ಕಥೆಯೊಂದು ಅಡಗಿದೆ. ಹಿರಿಯರು ಹೇಳುವ ಪ್ರಕಾರ ಶ್ರೀ ಕ್ಷೇತ್ರಕ್ಕೆ ಕಾವೇರಿ ನೀರನ್ನು ತರಲು ಮಹದೇಶ್ವರರು ನಿರ್ಧರಿಸುತ್ತಾರೆ. ಹರಿಯುವ ನೀರನ್ನು ತಡೆದು ನಿಲ್ಲಿಸಲು ರಾಕ್ಷಸನೊಬ್ಬನಿಗೆ ಸೂಚನೆ ನೀಡುತ್ತಾರೆ. ಆದರೆ ಇದು ರಾಕ್ಷಸನಿಗೆ ಸಾಧ್ಯವಾಗದೇ ಇದ್ದಾಗ ಮಹದೇಶ್ವರರು ಅವನನ್ನು ಎರಡು ಭಾಗ ಮಾಡಿ ನದಿಯ ಎರಡೂ ದಡಕ್ಕೆ ಎಸೆಯುತ್ತಾರೆ. ಈ ಕಾರಣಕ್ಕಾಗಿಯೇ ಅಲ್ಲಿನ ಗುಡ್ಡಕ್ಕೆ ರಾಕ್ಷಸನ ಗುಡ್ಡ ಎಂದು ಕರೆಯುತ್ತಾರೆ. ಬಳಿಕ ಶ್ರೀ ಮಹದೇಶ್ವರರು ಕಾವೇರಿ ನೀರನ್ನು ತರಿಸಿ ಅಭಿಷೇಕ ಮಾಡಿಸಿಕೊಳ್ಳುವುದಾಗಿ ಸವಾಲು ಹಾಕಿದರು ಎನ್ನಲಾಗಿದೆ. ಅದರಂತೆಯೇ ಬೇಡಗಂಪಣ ಅರ್ಚಕರು ಏಕಾದಶಿ ದಿನ ಕಾವೇರಿ ನೀರನ್ನು ತಂದು ಸ್ವಾಮಿಗೆ ಜಲಾಭಿಷೇಕ ನೆರವೇರಿಸುವುದು ಸಂಪ್ರದಾಯ.