ಕಾವೇರಿ ನದಿ ಉಳಿಸಲು ಜನಾಂದೋಲನವಾಗಲಿ: ಶಾಸಕ ರವಿಕುಮಾರ್ ಗಣಿಗ ಅಭಿಮತ

Kaveri Tirthodbhava Puja Mandya
Published on

ಮಂಡ್ಯ: ಕಾವೇರಿ ನದಿಯನ್ನು ಉಳಿಸಿಕೊಳ್ಳಲು ಹಾಗೂ ಜಲಾನಯನ ಪ್ರದೇಶದಲ್ಲಿ ಗಿಡ ಮರ ಬೆಳೆಸಲು ಜನಾಂದೋಲನ ಆಗಲೇಬೇಕು ಎಂದು ಶಾಸಕ ರವಿಕುಮಾರ್ ಗಣಿಗ ಅಭಿಪ್ರಾಯಪಟ್ಟರು.
ನಗರದ ಜಿಲ್ಲಾಧಿಕಾರಿ ಕಚೇರಿ ಎದುರಿನ ಕಾವೇರಿ ವನದಲ್ಲಿ ಸಂಜೆ ನಾಲ್ವಡಿ ಕೃಷ್ಣರಾಜ ಒಡೆಯರ್ ಟ್ರಸ್ಟ್‌ನಿಂದ ಕಾವೇರಿ ತೀರ್ಥೋದ್ಭವದ ಅಂಗವಾಗಿ ಆಯೋಜಿಸಿದ್ದ ಕಾವೇರಿ ಮಾತೆಗೆ ಪೂಜೆ ಸಲ್ಲಿಸಲು ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಆಂದೋಲನ ನೇತೃತ್ವವನ್ನು ಯಾರಾದರೂ ವಹಿಸಲಿ. ನಮ್ಮ ಹಿರಿಯರು ಕಾವೇರಿ ಉಳಿಸಿದ್ದಕ್ಕೆ, ಇಂದು ನಾವು ನೀರು ಬಳಸುತ್ತಿದ್ದೇವೆ.ನಾವು ಉಳಿಸಿದರೆ ಮುಂದಿನ ಜನಾಂಗಕ್ಕೆ ದೊರೆಯುತ್ತದೆ. ಆದ್ದರಿಂದ ದೊಡ್ಡ ಮಟ್ಟದಲ್ಲಿ ಜನಾಂದೋಲನ ಆರಂಭಿಸಬೇಕಾದ ಅಗತ್ಯವಿದೆ. ಇದರ ಜತೆಗೆ ಕಸ್ತೂರಿ ರಂಗನ್ ವರದಿ ಜಾರಿಗೊಳಿಸಿ ನದಿಯನ್ನು ಉಳಿಸಿಕೊಳ್ಳಬೇಕು ಎಂದರು.
ಅಪರ ಜಿಲ್ಲಾಧಿಕಾರಿ ಡಾ.ಎಚ್.ಎಲ್.ನಾಗರಾಜು ಮಾತನಾಡಿ, ನೀರು ದೇವರು ಕೊಟ್ಟ ವರ. ಇಂತಹ ನೀರಿನ ದುರುಪಯೋಗವಾಗುತ್ತಿದೆ. ಕಾವೇರಿ ಜಲಾನಯನ ಪ್ರದೇಶದ ನಾಲೆಗೆ ಕಸ ಹಾಕಿ ನೀರನ್ನು ಮಲಿನಗೊಳಿಸುತ್ತಿದ್ದೇವೆ. ಇದರಿಂದ ಭೂತ-ವರ್ತಮಾನ-ಭವಿಷ್ಯದಲ್ಲಿ ಏನೇನು ಪರಿಣಾಮಗಳಾಗುತ್ತವೆಂದು ಜನತೆಯನ್ನು ಎಚ್ಚರಿಸಬೇಕು. ಜಲ ಸಂಪನ್ಮೂಲಗಳನ್ನು ಚೆನ್ನಾಗಿ ಇಟ್ಟುಕೊಳ್ಳಬೇಕು. ಮದ್ದೂರು ಭಾಗದಲ್ಲಿ ಹಲವು ಕಡೆ ಕಟ್ಟಿದ್ದ ಚೆಕ್ ಡ್ಯಾಂಗಳನ್ನು ಹೊಡೆದು ಹಾಕಿದ್ದಾರೆ. ಶಿಂಷಾದ ಒಡಲನ್ನು ಬಗೆದು ಮರಳನ್ನು ತೆಗೆದು ಬರಡಾಗಿಸಿದ್ದಾರೆ. ಕಾವೇರಿಯಂತೆ ಶಿಂಷಾ ನದಿಯು ತುಂಬಾ ಪ್ರಮುಖವಾದುದು ಎಂದರು.
ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ನಾಡೋಜ ಡಾ.ಮಹೇಶ ಜೋಶಿ, ಅಧ್ಯಕ್ಷ ತಗ್ಗಹಳ್ಳಿ ವೆಂಕಟೇಶ್ ಮಾತನಾಡಿದರು. ಜಿಲ್ಲಾ ಪಂಚಾಯಿತಿ ಸಿಇಒ ಶೇಖ್ ತನ್ವೀರ್ ಆಸಿಫ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ, ಕಾರ್ಯಪಾಲಕ ಇಂಜಿನಿಯರ್ ನಂಜುಂಡೇಗೌಡ, ಜಿಲ್ಲಾ ಕಸಾಪ ಸಂಚಾಲಕಿ ಡಾ.ಮೀರಾ ಶಿವಲಿಂಗಯ್ಯ, ಮೈಷುಗರ್ ಅಧ್ಯಕ್ಷ ಸಿ.ಡಿ.ಗಂಗಾಧರ, ಎಎಸ್ಪಿ-2 ಗಂಗಾಧರಸ್ವಾಮಿ, ತೋಟಗಾರಿಕಾ ಇಲಾಖೆ ಉಪ ನಿರ್ದೇಶಕಿ ರೂಪಶ್ರೀ, ಜಿಪಂ ಮಾಜಿ ಸದಸ್ಯ ಎಚ್.ಎನ್.ಯೋಗೇಶ್ ಇತರರಿದ್ದರು. ಇದೇ ವೇಳೆ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಅಂತೆಯೇ ಅನ್ನದಾಸೋಹ ಆಯೋಜಿಸಲಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net