

ಕುಶಾಲನಗರ: ಕೊಡಗು ಪ್ರಾಕೃತಿಕ ಸೌಂದರ್ಯದಿಂದ ಪ್ರವಾಸಿಗರ ಸ್ವರ್ಗ, ಕರ್ನಾಟಕದ ಕಾಶ್ಮೀರ ಎಂದು ಖ್ಯಾತಿ ಪಡೆದಿದೆ. ನಗರ ಜೀವನದಿಂದ ವಿರಾಮವನ್ನು ಬಯಸುವ ಪ್ರವಾಸಿಗರಿಗೆ ಕೊಡಗು ಜಿಲ್ಲೆ ನೆಚ್ಚಿನ ತಾಣವಾಗಿದೆ.
ಆದರೆ ಇಂತಹ ಪ್ರಕೃತಿ ಸೌಂದರ್ಯವನ್ನು ಹೊಂದಿರುವ ಜಿಲ್ಲೆಯಲ್ಲಿ ಹುಟ್ಟಿದ ಪವಿತ್ರ ಕಾವೇರಿ ನದಿ ಸಂಕಷ್ಟಕ್ಕೆ ಸಿಲುಕಿ ಲಕ್ಷಾಂತರ ಜನರ ಆತಂಕಕ್ಕೆ ಕಾರಣವಾಗಿದೆ. ನದಿ ತನ್ನೊಡಲನ್ನು ಖಾಲಿ ಮಾಡಿಕೊಂಡು ತಿಂಗಳೇ ಕಳೆದಿದೆ. ಈ ದುಸ್ಥಿತಿಗೆ ಕಾರಣ ಹುಡುಕುತ್ತಾ ಹೋದರೆ ಸಿಗುವ ಉತ್ತರ, ಪ್ರಕೃತಿ ಮೇಲಿನ ಮಾನವನ ದೌರ್ಜನ್ಯ, ಮರಗಳ ಹನನ. ನದಿಯ ಪಾವಿತ್ರ್ಯಕ್ಕೆ ಧಕ್ಕೆಯಾಗುವ ರೀತಿಯಲ್ಲಿ ತ್ಯಾಜ್ಯ ನೀರು ಬಿಡುತ್ತಿರುವುದು, ನದಿ ಪಾತ್ರದ ಕಾಫಿ ತೋಟಗಳಿಗೆ ಮತ್ತು ವಾಣಿಜ್ಯ ಬೆಳೆಗಳಿಗೆ ಯಥೇಚ್ಛವಾಗಿ ನೀರು ಹಾಯಿಸುತ್ತಿರುವುದೇ ಕಾರಣ ಎಂದು ವಿಚಾರವಂತರು ಹೇಳುತ್ತಾರೆ.
ಜಿಲ್ಲೆಗೆ ಭೇಟಿ ನೀಡುವ ಪ್ರವಾಸಿಗರಿಗೆ ಇಲ್ಲಿಯ ಪಕೃತಿ ಸೌಂದರ್ಯ, ಪರಂಪರೆ ಸಾರುವ ಮಾಹಿತಿ ಕೊರತೆಯಿಂದ ಮತ್ತು ಸ್ಥಳೀಯರ ಅಸಡ್ಡೆಯಿಂದ ಎಲ್ಲೆಂದರಲ್ಲಿ ಕಸ ಎಸೆಯುವುದು, ಮದ್ಯ ಸೇವನೆ ಮಾಡಿ ಅದರ ತ್ಯಾಜ್ಯದಿಂದ ಹಸಿರು ಸಂಪತ್ತು ಹಾಳಾಗುತ್ತಿದೆ.
ಇತ್ತೀಚೆಗೆ ಮದ್ರಾಸ್ ಹೈಕೋರ್ಟ್ ಸಮಸ್ಯೆಯ ಗಂಭೀರತೆಯನ್ನು ಅರಿತು, ನೀಲಗಿರಿಯ ಜೀವಗೋಳವನ್ನು ರಕ್ಷಿಸಲು ಜನಪ್ರಿಯ ಪ್ರವಾಸಿ ತಾಣಗಳಾದ ಊಟಿ ಮತ್ತು ಕೊಡೈಕೆನಾಲ್‌ಗೆ ವಾಹನ ಪ್ರವೇಶವನ್ನು ನಿಯಂತ್ರಿಸಲು ಆದೇಶಿಸಿದೆ. ಇದನ್ನು ಸಾಧಿಸಲು ನ್ಯಾಯಾಲಯವು ಇ-ಪಾಸ್‌ಗಳನ್ನು ನೀಡುವುದನ್ನು ಕಡ್ಡಾಯಗೊಳಿಸಿದೆ. ಅದೇ ಮಾದರಿಯಲ್ಲಿ ಕೊಡಗಿಗೂ ಮಾಡಿದರೆ ಇಲ್ಲಿನ ಸಮಸ್ಯೆ ಸ್ವಲ್ಪ ಮಟ್ಟಿಗೆ ಸರಿಯಾಗುವ ವಿಶ್ವಾಸವಿದೆ.
ಪ್ರಾಯೋಗಿಕವಾಗಿ ಇ-ಪಾಸ್ ಹೊಂದಿರುವ ವಾಹನಗಳಿಗೆ ಮಾತ್ರ ಪ್ರವೇಶಿಸಲು ನ್ಯಾಯಾಲಯ ಸರ್ಕಾರಕ್ಕೆ ಸೂಚನೆ ನೀಡಿತ್ತು. ಆದರೆ ಪ್ರಸಕ್ತ ವರ್ಷ ಅಂತಹ ಪಾಸ್‌ಗಳನ್ನು ಮಿತಿಯಿಲ್ಲದೆ ನೀಡಬಹುದು ಎಂದು ಸ್ಪಷ್ಟಪಡಿಸಿದೆ. ಸ್ಥಳೀಯ ನಿವಾಸಿಗಳ ವಾಹನಗಳು, ಹಾಗೆಯೇ ಅಗತ್ಯ ಸರಕುಗಳು ಮತ್ತು ಕೃಷಿ ಉತ್ಪನ್ನಗಳನ್ನು ಸಾಗಿಸುವ ವಾಣಿಜ್ಯ ವಾಹನಗಳು ಈ ಅವಶ್ಯಕತೆಗೆ ವಿನಾಯಿತಿಯಾಗಿರುತ್ತವೆ.
ಕೊಡಗು ಜಿಲ್ಲೆಯ ಭವ್ಯ ಪರಂಪರೆಯ ಮಾಹಿತಿ ಇರುವ ನಾಮಫಲಕಗಳನ್ನು ಹೆದ್ದಾರಿ ಪಕ್ಕದಲ್ಲಿ, ಪ್ರವಾಸಿ ತಾಣಗಳಲ್ಲಿ ಅಳವಡಿಸಿ ಪ್ರವಾಸಿಗರಿಗೆ ಜಾಗೃತಿ ಮೂಡಿಸಬೇಕು. ಸ್ಥಳೀಯ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಟಾಸ್ಕ್‌ಫೋರ್ಸ್ ರಚನೆ ಮಾಡಿ ಅಸಡ್ಡೆ ತೋರುವ ಪ್ರವಾಸಿಗರಿಗೆ ದಂಡ ವಿಧಿಸಬೇಕು. ದಂಡ ಕಟ್ಟಿದವರ ಮಾಹಿತಿಯನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುವ ಮೂಲಕ ವ್ಯಾಪಕ ಪ್ರಚಾರ ನೀಡಿ ಅರಿವು ಮೂಡಿಸಿದರೆ ಎಲ್ಲರೂ ಜಾಗೃತರಾಗುತ್ತಾರೆ. ಜತೆಗೆ ಕೊಡಗಿನ ನಿವಾಸಿಗಳು ಪ್ರವಾಸಿಗರೊಂದಿಗೆ ಸೌಜನ್ಯವಾಗಿ ತಪ್ಪಿನ ಅರಿವು ಮೂಡಿಸಲು ಮುಂದಾಗಬೇಕು.