ಬೃಂದಾವನದಲ್ಲಿ ಕಾವೇರಿ ಮಾತೆ ರಥೋತ್ಸವ

18-10-25--krs1 (2)
ಕೃಷ್ಣರಾಜ ಸಾಗರದ ಬೃಂದಾವನದಲ್ಲಿರುವ ಕಾವೇರಿಮಾತೆಯ ಸನ್ನಿಧಿಯಲ್ಲಿ ಕಾವೇರಿ ಮಾತೆ ರಥೋತ್ಸವ ನಡೆಯಿತು.
Published on

ಕೆ.ಆರ್.ಸಾಗರ : ಕೃಷ್ಣರಾಜಸಾಗರದ ಬೃಂದಾವನದಲ್ಲಿರುವ ಶ್ರೀ ಕಾವೇರಿಮಾತೆಯ ಸನ್ನಿಧಿಯಲ್ಲಿ ಶನಿವಾರ ರಥೋತ್ಸವ ನಡೆಯಿತು.

ತಲಕಾವೇರಿಯಲ್ಲಿ ಕಾವೇರಿ ತೀರ್ಥೋದ್ಭವ ನಡೆದ ಮಾರನೇ ದಿನವಾದ ಶನಿವಾರ ಕೆ.ಆರ್.ಸಾಗರದ ಬೃಂದಾವನದಲ್ಲಿನರುವ ಶ್ರೀ ಕಾವೇರಿ ಮಾತೆಗೆ ವಿಶೇಷ ಪೂಜೆ ಸಲ್ಲಿಸಲಾಯಿತು. ಅರ್ಚಕ ಪ್ರಸನ್ನ ಅವರ ಮನೆಯಿಂದ ಕಾವೇರಿ ಮಾತೆ ಉತ್ಸವ ಮೂರ್ತಿಯನ್ನು ಕೆ.ಆರ್.ಸಾಗರ ಗ್ರಾಮದ ಪ್ರಮುಖ ಬೀದಿಗಳಲ್ಲಿ ನಾದಸ್ವರದ ಮೂಲಕ ಮೆರವಣಿಗೆ ಸಮೇತ ಬೃಂದಾವನದ ಕಾವೇರಿಮಾತೆಯ ಸನ್ನಿಧಿಗೆ ತರಲಾಯಿತು. ಅಣೆಕಟ್ಟೆಯ ದಕ್ಷಿಣ ದ್ವಾರದಲ್ಲಿ ಕಾವೇರಿ ನೀರಾವರಿ ನಿಗಮದ ಸಿಬ್ಬಂದಿ ಪೂಜೆ ಸಲ್ಲಿಸಿ ಕಾವೇರಿ ಮಾತೆಯ ಉತ್ಸವ ಮೂರ್ತಿಯನ್ನು ಆಹ್ವಾನಿಸಿದರು. ನಂತರ ಹಲವು ರೀತಿಯ ಅಭಿಷೇಕ ಸೇರಿದಂತೆ ಪಂಚಾಮೃತ ಅಭಿಷೇಕ ಸಲ್ಲಿಸಿ ವಿವಿಧ ಹೂಗಳಿಂದ ಅಲಂಕರಿಸಿ ಪೂಜೆ ಸಲ್ಲಿಸಲಾಯಿತು. ನವಗ್ರಹ ಮತ್ತು ಗಣಪತಿ ಹೋಮ ನಡೆಸಿ ಮಹಾಮಂಗಾಳಾರತಿ ಮಾಡಿದ ನಂತರ ಮಧ್ಯಾಹ್ನ 11.30 ರಿಂದ 12.45 ರ ನಡುವೆ ಸಂದ ಶುಭ ಧನುರ್ ಲಗ್ನದಲ್ಲಿ ಕಾವೇರಿ ಮಾತೆಯ ಉತ್ಸವ ಮೂರ್ತಿಯನ್ನು ರಥದಲ್ಲಿರಿಸಿ ಮೂರು ಭಾರಿ ರಥೋತ್ಸವ ನಡೆಸಲಾಯಿತು. ನಂತರ ಮಹಾಮಂಗಳಾರತಿ ಕಾರ್ಯಕ್ರಮ ನಡೆದು ನೂರಾರು ಭಕ್ತರಿಗೆ ಪ್ರಸಾದ ವಿನಿಯೋಗ ನಡೆಯಿತು.

ಕೆ.ಆರ್.ಸಾಗರ ಗ್ರಾ.ಪಂ. ಸದಸ್ಯ ದೇವರಾಜ್, ಕೆ.ಆರ್.ಸಾಗರ ಕಾವೇರಿ ನೀರಾವರಿ ನಿಗಮದ ಕಾರ್ಯಪಾಲಕ ಇಂಜಿನಿಯರ್ ಜಯಂತ್, ಕೆ.ಆರ್.ಸಾಗರ ಗ್ರಾ.ಪಂ. ಅಧ್ಯಕ್ಷೆ ಜಯಂತಿ, ಇಂಜಿನಿಯರ್‌ಗಳಾದ ಫಾರೂಕ್ ಅಬು, ಶಿವಪ್ರಸಾದ್, ಲೋಹಿತ್, ಶಿವಕುಮಾರ, ಲೋಹಿತ್ ಕುಮಾರ್, ಅಭಿಲಾಷ್, ಸಹನಾ, ಪುನೀತ್, ತಾಂತ್ರಿಕ ಸಹಾಯಕಿ ರಶ್ಮಿ, ಲೆಕ್ಕ ಅಧೀಕ್ಷಕ ಶ್ರೀನಿವಾಸ್, ಕೆ.ಆರ್.ಸಾಗರ ಸರ್ಕಾರಿ ನೌಕರರ ಸಂಘದ ನಾಗೇಶ್, ಕೆಎಸ್‌ಐಎಸ್ ಅಧಿಕಾರಿ ರಮೇಶ್, ನಿಗಮದ ಸಿಬ್ಬಂದಿ, ಗ್ರಾಮಸ್ಥರು ಇತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net