ಕಾವೇರಿ ಜಾತ್ರೆ ಸಂದರ್ಭ ತಲಕಾವೇರಿ ಕ್ಷೇತ್ರದಲ್ಲಿ ಹೊಸ ಪದ್ಧತಿ ಬೇಡ

IMG-20221014-WA0088
Published on

ವಿಜಯವಾಣಿ ಸುದ್ದಿಜಾಲ ಮಡಿಕೇರಿ
ಕಾವೇರಿ ಜಾತ್ರೆ ಸಂದರ್ಭ ತಲಕಾವೇರಿ ಕ್ಷೇತ್ರದಲ್ಲಿ ರೂಢಿಯಲ್ಲಿರುವ ಪದ್ಧತಿ ಮುಂದುವರಿಸಬೇಕು. ಹೊಸ ಪದ್ಧತಿಗೆ ಅವಕಾಶ ಕಲ್ಪಿಸಬಾರ ದೆಂದು ವಿವಿಧ ಗೌಡ ಸಮಾಜದ ಪ್ರಮುಖರು ಒತ್ತಾಯಿಸಿದ್ದಾರೆ.

ಕೆಲವು ವ್ಯಕ್ತಿಗಳು ಜಿಲ್ಲೆಯಲ್ಲಿ ಅಶಾಂತಿ ಸೃಷ್ಟಿಸುವ ಉದ್ದೇಶದಿಂದ ಕಾವೇರಿ ಜಾತ್ರೆ ವೇಳೆ ಹೊಸ- ಹೊಸ ಬೇಡಿಕೆ ಇಟ್ಟು ಗೊಂದಲ ಸೃಷ್ಟಿಸುತ್ತಿ
ದ್ದಾರೆಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಅಸಮಾಧಾನ ವ್ಯಕ್ತ ಪಡಿಸಿದರು.

ಕಾವೇರಿ ಹೆಸರಿನಲ್ಲಿ ಜಿಲ್ಲೆಯಲ್ಲಿ ಅಶಾಂತಿ ಮೂಡಿಸುವ ಹುನ್ನಾರ ನಡೆಯುತ್ತಿದೆ ಎಂದು ಕೊಡಗು ಗೌಡ ಸಮಾಜ ಅಧ್ಯಕ್ಷ ಪೇರಿಯನ ಜಯಾನಂದ, ಕುಶಾಲನಗರ ಗೌಡ ಸಮಾಜ ಅಧ್ಯಕ್ಷ ಕೂರನ ಪ್ರಕಾಶ್, ಕುಶಾಲನಗರ ಗೌಡ ಯುವ ಸಂಘ ಅಧ್ಯಕ್ಷ ಕೊಡಗನ ಹರ್ಷ, ಚೇರಳ ಗೌಡ ಸಮಾಜ ಪ್ರಧಾನ ಕಾರ್ಯದರ್ಶಿ ಪೇರಿಯನ ಉದಯ್, ಕುಶಾಲನಗರ ಗೌಡ ಸಮಾಜ ಪ್ರಮುಖರಾದ ಆನಂದ್ ಕರಂದಾಜ್ಲೆ, ಚಿಲ್ಲನ ಗಣಿಪ್ರಸಾದ್ ಅಸಮಾಧಾನ ವ್ಯಕ್ತ ಪಡಿಸಿದರು.

ಶತಮಾನಗಳಿಂದ ಕೈಗೊಳ್ಳುತ್ತಿರುವ ಪದ್ಧತಿ, ಸಾಂಪ್ರದಾಯಿಕ ಕಾರ್ಯಕ್ರಮ ಹಾಗೆಯೇ ಅನುಸರಿಸಲಾಗುತ್ತಿದೆ. ಪರಂಪರಾಗತ ಆಚರಣಾ ಕಾರ್ಯಕ್ರಮ ಹಿಂದಿನಂತೆಯೇ ಮುಂದುವರಿಯಬೇಕು. ಅನಗತ್ಯ ವಿಷಯಗಳನ್ನು ಆಚರಣಾ ಕ್ರಮದ ಮಧ್ಯ ತೂರಿ ಜಿಲ್ಲೆಯಲ್ಲಿ ಅಶಾಂತಿ ಮೂಡಿಸುವ ಹುನ್ನಾರಕ್ಕೆ ಅವಕಾಶ ನೀಡಬಾರದೆಂದು ಒತ್ತಾಯಿಸಿದರು.

ತೀರ್ಥರೂಪಿಣಿಯಾದ ಕಾವೇರಿ ತಾಯಿ ಈ ನಾಡಿನ ತಾಯಿ. ದೇಶದ ಕಾವೇರಿ ಭಕ್ತ ಗಣದ ದೈವಸ್ವರೂಪಿಣಿ. ಕೆಲವು ದಿನಗಳಿಂದ ಮಾಧ್ಯಮಗಳಲ್ಲಿ ಕಾವೇರಿ ಮಾತ್ರೆ ಹೆಸರನ್ನು ತಮ್ಮ ಸ್ವಾಥಕ್ಕೆ ಬಳಸಿಕೊಳ್ಳಲಾಗುತ್ತಿದೆ. ಕಾವೇರಿ ತುಲಾ ಸಂಕ್ರಮಣದಂದು ಅನಗತ್ಯವಾಗಿ ಆಚರಣೆಯಲ್ಲಿ ಇಲ್ಲದ ಪದ್ಧತಿ ಅಳವಡಿಸುವಂತೆ ಶಾಸಕರನ್ನು ಹಾಗೂ ಜಿಲ್ಲಾಡಳಿತವನ್ನು ಒತ್ತಾಯಿಸುತ್ತಿರುವುದು ಹಾಗೂ ಬೆದರಿಕೆ ಒಡ್ಡುತ್ತಿ
ರುವುದು ಖಂಡನೀಯ ಎಂದಿದ್ದಾರೆ.

ತೀರ್ಥೋದ್ಭವ ಸಂದರ್ಭ ಕಾವೇರಿ ಪೂಜಾ ಕುಂಡಿಕೆ ಸುತ್ತ ಜನಜಂಗುಳಿ ನಿಯಂತ್ರಣಕ್ಕೆ ಜಿಲ್ಲಾಡಳಿತ ಪೊಲೀಸರ ಸಹಕಾರದಿಂದ ಕೆಲವು ನಿಯಂತ್ರಣ ಕ್ರಮ ಕೈಗೊಳ್ಳುತ್ತಿದೆ. ಕೆಲವು ಸಂಘಟನೆ ಹಾಗೂ ಸಮಾಜಗಳು ನೀಡುತ್ತಿರುವ ಹೇಳಿಕೆಗಳು ಹಾಗೂ ಒತ್ತಡಗಳು ಕಾವೇರಿ ತೀರ್ಥೋದ್ಭವ ಸಂದರ್ಭ ಹಾಳುಗೆಡುವ ಪ್ರಯತ್ನ ಎಂದು ಆಕ್ಷೇಪ ವ್ಯಕ್ತ ಪಡಿಸಿದ್ದಾರೆ.

ತೀರ್ಥೋದ್ಭವ ಸಂದರ್ಭ ಕುಂಡಿಕೆ ಸುತ್ತ ಜಿಲ್ಲಾಡಳಿತ ಯಾವ ರೀತಿ ಜವಾಬ್ದಾರಿ ನಿರ್ವಹಿಸುವ ಕುಟುಂಬಗಳು ಹಾಗೂ ತಕ್ಕ ಮುಖ್ಯಸ್ಥರಿಗೆ ಮಾತ್ರ ಹಾಜರಿರಲು ಅವಕಾಶ ಕಲ್ಪಿಸವ ಪದ್ಧತಿ ಮಾತ್ರ ಮುಂದುವರಿಯಬೇಕು. ಅದನ್ನು ಮೀರಿ ಜಿಲ್ಲಾಡಳಿತ ಅನಗತ್ಯವಾದ ವ್ಯಕ್ತಿಗಳನ್ನು ಕೊಳದ ಪಕ್ಕದಲ್ಲಿ ನಿಲ್ಲಿಸುವ ಬೆದರಿಕೆ ಹಾಗೂ ಒತ್ತಾಯಕ್ಕೆ ಮಣಿದಲ್ಲಿ ನಾವು ಭಾಗಮಂಡಲ ಸುತ್ತಮುತ್ತಲಿನ ಹಬ್ಬದ ಕಟ್ಟುಪಾಡುಗಳನ್ನು ದೇವತಾ ನಿಯಮದಂತೆ ಪಾಲಿಸುತ್ತಿರುವ ೨೫ ಕುಟುಂಬಗಳ ಪಟ್ಟೆದಾರರಿಗೆ ಕುಂಡಿಕೆ ಸುತ್ತ ಸಾಂಪ್ರದಾಯಿಕ ಧಿರಿಸಿನಲ್ಲಿ ನಿಂತು ಕಾವೇರಿ ಯನ್ನು ಪ್ರಾರ್ಥಿಸಲು ಸಿದ್ಧತೆ ಮಾಡಿಕೊಳ್ಳುವ ಅನಿವಾರ್ಯತೆ ಸೃಷ್ಟಿಯಾಗುತ್ತದೆ. ಆದುದರಿಂದ ಯಾವುದೇ ಬೆದರಿಕೆಗೆ ಮಣಿಯದೆ ಜಿಲ್ಲಾಡಳಿತ ಕಾವೇರಿ ತೀರ್ಥೋದ್ಭವವನ್ನು ಯಥಾಸ್ಥಿತಿಯಲ್ಲಿ ಶಾಂತ ರೀತಿಯಲ್ಲಿ ನಡೆಯುವಂತೆ ಅನುವು ಮಾಡಿಕೊಡಬೇಕೆಂದು ಒತ್ತಾಯಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net