ಕಾವೇರಿ ತವರಿನಲ್ಲೂ ಬರಗಾಲದ ಬೇಗುದಿ

Kaveri is also suffering from drought
Published on

ಮಡಿಕೇರಿ
ಮಲೆನಾಡು ಜಿಲ್ಲೆ ಕೊಡಗಿಗೂ ಬರಗಾಲದ ಪರಿಣಾಮ ತೀವ್ರವಾಗಿ ತಟ್ಟಿದೆ. ಜಿಲ್ಲೆಯಲ್ಲಿ ಹುಟ್ಟಿ ಹರಿಯುವ ಕಾವೇರಿ ಸೇರಿದಂತೆ ಪ್ರಮುಖ ನದಿಗಳು ಬತ್ತಿಹೋಗಿದ್ದು, ಎಲ್ಲಾ ಕಡೆಗಳಲ್ಲೂ ನೀರಿನ ಹರಿವು ಬಹುತೇಕ ಸ್ತಬ್ಧ್ದವಾಗಿವೆ. ಜಿಲ್ಲೆಯ ಪ್ರಮುಖ ಪಟ್ಟಣಗಳು ಮತ್ತು ಹೆಚ್ಚಿನ ಗ್ರಾಮ ಪಂಚಾಯಿತಿ ವ್ಯಾಪ್ತಿಗಳಲ್ಲಿ ಕುಡಿಯುವ ನೀರಿಗಾಗಿ ನದಿ ನೀರನ್ನೇ ಅವಲಂಬಿಸಲಾಗಿದೆ. ನದಿಯಲ್ಲಿ ನೀರಿಲ್ಲದ ಕಾರಣ ಕಳೆದ ೨೦ ದಿನಗಳಿಂದ ಮನೆಗಳಿಗೆ ನದಿ ನೀರು ಪೂರೈಕೆ ಆಗುತ್ತಿಲ್ಲ. ಕೊಳವೆ ಬಾವಿಗಳಿಂದ ಟ್ಯಾಂಕರ್‌ಗಳಿಗೆ ತುಂಬಿಸಿಕೊಂಡು ಮನೆ ಮನೆಗಳಿಗೆ ತಲುಪಿಸಲಾಗುತ್ತಿದೆ.

ಉಳಿದೆಡೆಗೆ ಹೋಲಿಸಿದರೆ ಜಿಲ್ಲಾ ಕೇಂದ್ರ ಮಡಿಕೇರಿಯಲ್ಲಿ ಸದ್ಯದ ಮಟ್ಟಿಗೆ ಕುಡಿಯುವ ನೀರಿನ ಸಮಸ್ಯೆ ದೊಡ್ಡ ಮಟ್ಟಿಗೆ ಕಾಣಿಸಿಕೊಂಡಿಲ್ಲ. ಆದರೆ ಪರಿಸ್ಥಿತಿ ಈಗಿನಂತೆಯೇ ಮುಂದುವರಿದರೆ ಮಡಿಕೇರಿಯಲ್ಲೂ ಪರಿಸ್ಥಿತಿ ಬಿಗಡಾಯಿಸಲಿದೆ. ಈ ಬೆನ್ನಲ್ಲೇ ಪ್ರವಾಸಿ ಸೀಸನ್ ಶುರುವಾಗಿದ್ದು, ಶಾಲಾ ಮಕ್ಕಳಿಗೆ ಪರೀಕ್ಷೆ ಮುಗಿದು ರಜೆ ಆರಂಭವಾಗುತ್ತಿರುವಂತೆಯೇ ಪ್ರವಾಸಿಗರು ಇತ್ತ ಕಡೆ ಬರಲಾರಂಭಿಸಿದ್ದಾರೆ. ಪ್ರವಾಸೋದ್ಯಮಿಗಳ ಪ್ರಕಾರ ಕಳೆದ ವರ್ಷಕ್ಕೆ ಹೋಲಿಸಿದರೆ ಪ್ರವಾಸಿಗರ ಸಂಖ್ಯೆ ಕಡಿಮೆ ಇದ್ದರೂ ವಾರಾಂತ್ಯದಲ್ಲಿ ಹೆಚ್ಚಿನ ದಟ್ಟಣೆ ಕಂಡುಬರುತ್ತಿದೆ. ದಿನ ಕಳೆದಂತೆ ಈ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ.
೨೦೧೧ರ ಜನಗಣತಿ ಪ್ರಕಾರ ಕೊಡಗಿನ ಜನಸಂಖ್ಯೆ ೫.೫೫ ಲಕ್ಷ. ಆದರೆ ಫ್ಲೋಟಿಂಗ್ ಪಾಪ್ಯುಲೇಷನ್ ಅವಧಿಗೆ ಅನುಗುಣವಾಗಿ ಇದರ ೬-೭ ಪಟ್ಟು ಅಧಿಕ ಇರುತ್ತದೆ. ಪ್ರವಾಸಿ ಸೀಸನ್ ಆಗಿರುವ ಏಪ್ರಿಲ್, ಮೇ ತಿಂಗಳುಗಳಲ್ಲಿ ಈ ಪ್ರಮಾಣ ಇನ್ನೂ ಹೆಚ್ಚು ಇರುತ್ತದೆ. ಹಾಗಾಗಿ ಮೊದಲೇ ಕುಡಿಯುವ ನೀರಿನ ಸಮಸ್ಯೆ ಎದುರಿಸುತ್ತಿರುವ ಕೊಡಗಿಗೆ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಹರಿದು ಬರಲಾರಂಭಿಸಿದರೆ ಇಲ್ಲಿಯ ಪರಿಸ್ಥಿತಿ ಬಿಗಡಾಯಿಸಬಹುದು ಎನ್ನುವ ಆತಂಕ ಸ್ಥಳೀಯರನ್ನು ಕಾಡುತ್ತಿದೆ. ಹಾಗಾಗಿ ಈ ವರ್ಷದ ಮಟ್ಟಿಗೆ ಈ ಬಾರಿ ಪ್ರವಾಸಿಗರನ್ನು ಕೊಡಗಿಗೆ ನಿರ್ಬಂಧಿಸಬೇಕು ಎನ್ನುವ ಬೇಡಿಕೆ ಜಿಲ್ಲೆಯಲ್ಲಿ ಕೇಳಿ ಬರುತ್ತಿದೆ. ಈ ಬಗ್ಗೆ ಪರ ಮತ್ತು ವಿರುದ್ಧ ಅಭಿಪ್ರಾಯಗಳೂ ವ್ಯಕ್ತವಾಗುತ್ತಿದೆ. ಈ ಕುರಿತಂತೆ ವಿಜಯವಾಣಿ ಓದುಗರು ಹಂಚಿಕೊಂಡ ಅಭಿಪ್ರಾಯಗಳು ಇಲ್ಲಿವೆ.

ಪ್ರವಾಸಿಗರನ್ನು ಬಾರದಂತೆ ನಿರ್ಬಂಧಿಸುವುದು ಅಸಾಧ್ಯ. ಹೋಟೆಲ್, ರೆಸಾರ್ಟ್, ಹೋಮ್ ಸ್ಟೇ ಗಳು ನಿಂತಿರುವುದೇ ಪ್ರವಾಸಿಗರಿಂದ. ಮಾಲೀಕರು ಖರ್ಚು ವೆಚ್ಚಗಳನ್ನು ನೋಡಿಕೊಂಡು ತಮ್ಮ ದರದಲ್ಲಿ ಕೊಂಚ ಮಟ್ಟಿಗೆ ಏರಿಕೆ ಮಾಡಿಕೊಂಡು ವ್ಯವಹಾರ ನಡೆಸಿದರೆ ಒಳ್ಳೆಯದು. ಕೊಡಗು ಜಿಲ್ಲೆಯಲ್ಲಿ ಮುಂದಿನ ದಿನಗಳಲ್ಲಿ ಸಂಬಂಧಿಸಿದ ಇಲಾಖೆ ಮುಂಜಾಗ್ರತಾ ಕ್ರಮ ವಹಿಸಬೇಕು.
ಕೆ.ಎನ್. ನಾಗಪ್ರವೀಣ್, ಉದ್ಯಮಿ, ಕುಶಾಲನಗರ.

ಕೊಡಗು ಜಿಲ್ಲೆ ಪುಟ್ಟದಾದರೂ ಪ್ರಾಕೃತಿಕವಾಗಿ ಅತ್ಯಂತ ಶ್ರೀಮಂತ ಜಿಲ್ಲೆ ಎನ್ನುವುದರಲ್ಲಿ ಎರಡು ಮಾತಿಲ್ಲ. ಈಗ ಜನ ಪ್ರಕೃತಿಯ ಮೇಲೆ ನಿರಂತರವಾಗಿ ಮಾಡುತ್ತಿರುವ ಅನ್ಯಾಯದ ವಿರುದ್ಧ ಮುನಿದಿದ್ದಾಳೆ. ಆ ಮುನಿಸು ತಣಿಸಲು ಬೇಕಾದ ಕ್ರಮ ತೆಗೆದುಕೊಂಡು ಜಿಲ್ಲೆಯನ್ನು ಕಾಪಾಡಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ. ನೀರಿನ ನೆಪ ಇಟ್ಟುಕೊಂಡು ಜಿಲ್ಲೆಗೆ ಪ್ರವಾಸಿಗರನ್ನು ನಿರ್ಬಂಧ ಮಾಡಬೇಕೆನ್ನುವ ವಿಚಾರ ಒಪ್ಪುವುದು ಕಷ್ಟ. ಎಲ್ಲಾ ಮುಂಜಾಗ್ರತಾ ಕೆಲಸಗಳನ್ನು ಮುಂದಿನ ದಿನಗಳಲ್ಲಿ ಮಾಡುವ ಮೂಲಕ ಕೊಡಗು ಜಿಲ್ಲೆಯನ್ನು ಸಂರಕ್ಷಿಸುವಂತಾಗಲಿ.
ಬಿ.ಕೆ. ಕುಸುಮಾ ನಟೇಶ್ ಗೌಡ, ಸಮಾಜ ಸೇವಕಿ, ಕುಶಾಲನಗರ.

ಕೊಡಗು ಜಿಲ್ಲೆಯಲ್ಲಿ ಕಳೆದೆರಡು ವರ್ಷಗಳಲ್ಲಿ ಮಳೆಯ ಪ್ರಮಾಣ ಕುಸಿದಿದೆ. ಇದರಿಂದ ಗ್ರಾಮೀಣ ಪ್ರದೇಶಗಳಲ್ಲಿ ಕೂಡ ಕುಡಿಯುವ ನೀರಿನ ಸಮಸ್ಯೆ ತಲೆದೋರಿದೆ. ಸಮಸ್ಯೆ ಎದುರಾದ ಹಿನ್ನೆಲೆ ಟ್ಯಾಂಕರ್ ಮೂಲಕ ಮಾಲ್ದಾರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹುಂಡಿಯಲ್ಲಿ ಸಾರ್ವಜನಿಕರಿಗೆ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗುತ್ತಿದೆ. ಅದರೆ ಪ್ರವಾಸಿಗರನ್ನು ನಿಷೇಧ ಮಾಡುವುದರಿಂದ ಪ್ರವಾಸೋದ್ಯಮವನ್ನು ನಂಬಿರುವ ಹಲವು ಕುಟುಂಬಗಳ ಪರಿಸ್ಥಿತಿ ಕೇಳುವವರಿರುವುದಿಲ್ಲ. ಈ ನಿಟ್ಟಿನಲ್ಲಿ ಜಿಲ್ಲಾಡಳಿತ ನೀರಿನ ಸಂರಕ್ಷಣೆಯ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಬೇಕಿದೆ
ಸಮೀರ್, ಮಾಜಿ ಅಧ್ಯಕ್ಷ, ಮಾಲ್ದಾರೆ ಗ್ರಾಮ ಪಂಚಾಯಿತಿ

ಹೀಗೆ ಬಿಸಿಲು ಮುಂದುವರಿದರೆ ಸೋಮವಾರಪೇಟೆ ತಾಲೂಕಿನಲ್ಲೂ ಕುಡಿಯುವ ನೀರಿನ ಸಮಸ್ಯೆ ಆಗಿಲಿದೆ. ಈಗಾಗಲೇ ಗ್ರಾಮೀಣ ಭಾಗದಲ್ಲಿ ಬಹುತೇಕ ಕೆರೆ, ಕೊಳ್ಳಗಳು ಬತ್ತಿವೆ. ಸದ್ಯಕ್ಕೆ ಕೊಳವೆ ಬಾವಿಗಳು ನೀರು ಪೂರೈಸುತ್ತಿವೆ. ಮಳೆಯಾಗುವ ತನಕ ಜಿಲ್ಲೆಗೆ ಪ್ರವಾಸಿಗರು ಬರುವುದನ್ನು ತಡೆದರೆ, ನೀರಿನ ಪೋಲು ತಡೆಯಬಹುದು.
ವೀರಭದ್ರಪ್ಪ, ಕೃಷಿಕ, ಬಾಣಾವರ ಗ್ರಾಮ.

ಹವಾಮಾನ ಇಲಾಖೆಯ ಪ್ರಕಾರ ಕೊಡಗಿನಲ್ಲಿ ಇನ್ನು ಮೇ ತಿಂಗಳವರೆಗೆ ಮಳೆ ಬರುವುದು ಅನುಮಾನ. ಎಲ್ಲೆಡೆ ನೀರಿಗಾಗಿ ಹಾಹಾಕಾರ ಶುರುವಾಗಿದೆ. ಇದರ ಜೊತೆಗೆ ಹೆಚ್ಚಿನ ಪ್ರವಾಸಿಗರು ಕೊಡಗಿನೆಡೆ ಬರಲಾಂಬಿಸಿದರೆ, ಪರಿಸ್ಥಿತಿ ಇನ್ನೂ ಬಿಗಡಾಯಿಸಬಹುದು. ಸದ್ಯದ ಮಟ್ಟಿಗೆ ಪ್ರವಾಸಿಗರನ್ನು ಕೊಡಗಿಗೆ ಬಾರದಂತೆ ನಿರ್ಬಂಧಗೊಳಿಸುವುದು ಒಳಿತು.
ಅಜಿತ್ ನಾಣಯ್ಯ, ಕಾಫಿ ಬೆಳೆಗಾರ, ನಾಪೋಕ್ಲು

ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಜಿಲ್ಲೆಗೆ ಆಗಮಿಸುವ ಉದ್ದೇಶ ಮೋಜು ಮಸ್ತಿ. ಅದಕ್ಕಾಗಿ ಅವರು ನದಿ ಹಾಗೂ ಇನ್ನಿತರ ನೀರಿನ ಮೂಲಗಳಿಗೆ ಹೋಗುತ್ತಾರೆ. ಇದರೊಂದಿಗೆ ಪ್ರವಾಸಿಗರನ್ನು ಸೆಳೆಯಲು ರೆಸಾರ್ಟ್‌ಗಳಲ್ಲಿ ವಾಟರ್ ಡ್ಯಾನ್ಸ್ ಹಾಗೂ ಇನ್ನಿತರ ಜಲ ಕ್ರೀಡೆಯನ್ನು ಆಯೋಜಿಸುತ್ತಾರೆ ಇದರೊಂದಿಗೆ ಜಿಲ್ಲೆಗೆ ಪ್ರವಾಸ ಬಂದಾಗ ಪ್ರವಾಸಿಗರಿಗೂ ನೀರಿನ ಅವಶ್ಯಕತೆ ಇರುತ್ತದೆ. ಈಗಾಗಲೇ ಜಿಲ್ಲೆಯಲ್ಲಿ ನೀರಿನ ಅಭಾವವಿರುವುದರಿಂದ ಸದ್ಯದ ಮಟ್ಟಿಗೆ ಜಿಲ್ಲೆಯಲ್ಲಿ ಪ್ರವಾಸಿಗರನ್ನು ನಿರ್ಬಂಧಿಸುವುದು ಉತ್ತಮ.
ಎನ್.ಎಸ್. ಮಹೇಶ್, ವಿರಾಜಪೇಟೆ

ಕೊಡಗು ಆತಿಥ್ಯ ನೀಡುವುದರಲ್ಲಿ ಪ್ರಸಿದ್ಧಿ ಪಡೆದ ಜಿಲ್ಲೆ. ಆದರೆ ನಾವಿರುವ ಪ್ರಸ್ತುತ ಪರಿಸ್ಥಿತಿಯಲ್ಲಿ ಪ್ರವಾಸಿಗರನ್ನು ನಿರ್ಬಂಧಿಸುವುದು ಸೂಕ್ತ. ಕೊಡಗಿನಲ್ಲಿರುವರಿಗೆ ನೀರಿನ ಅಭಾವ ಕಾಡುತಿದ್ದು ಹೊರಗಿನಿಂದ ಬಂದವರು ನೀರನ್ನು ಬಳಸುವುದು, ಅದರೊಂದಿಗೆ ನೀರಿನಲ್ಲಿ ಮೋಜು ಮಾಸ್ತಿ ಮಾಡುವುದರಿಂದ ನೀರಿನ ಅಭಾವ ಹೆಚ್ಚಾಗುತ್ತದೆ. ಆದ್ದರಿಂದ ಕೊಡಗಿನಲ್ಲಿ ನೀರಿನ ಪರಿಸ್ಥಿತಿ ಸರಿದೂಗುವವರೆಗೂ ಪ್ರವಾಸಿಗರನ್ನು ನಿರ್ಬಂಧ ಮಾಡಿದರೆ ಸೂಕ್ತ. ಇಲ್ಲದೇ ಹೋದರೆ ಮುಂದಿನ ದಿನಗಳಲ್ಲಿ ಪ್ರತಿಯೊಂದು ಹಳ್ಳಿಗೂ ನೀರಿನ ಟ್ಯಾಂಕರ್ ವ್ಯವಸ್ಥೆ ಮಾಡಬೇಕಾಗಬಹುದು.
ಬಿ. ಎನ್. ಶಾರದಾ, ಗೃಹಿಣಿ, ಬೇಟೊಳಿ, ವಿರಾಜಪೇಟೆ

ಈ ವರ್ಷ ಕಾವೇರಿ ನಾಡು ಕೊಡಗಿನಲ್ಲಿ ಮಳೆ ಕಡಿಮೆ ಆಗಿರುವುದರಿಂದ ಕುಡಿಯುವ ನೀರಿಗೆ ತೊಂದರೆ ಆಗಿದೆ. ಇದೀಗ ಬಿಸಿಲಿನಲ್ಲಿ ಇದ್ದ ನೀರು ಸಹ ಬತ್ತುತ್ತಿದೆ. ನೀರು ಎಲ್ಲ ಜೀವರಾಶಿಗಳಿಗೂ ಅತ್ಯವಶ್ಯವಾಗಿದೆ. ಬಿಸಿಲಿನ ತಾಪಕ್ಕೆ ಎಷ್ಟು ನೀರು ಬಳಸಿದರೂ ಸಾಲದು. ಕೊಡಗಿನಲ್ಲಿರುವವರಿಗೆ ನೀರು ಸಾಲುತ್ತಿಲ್ಲ. ಇನ್ನು ಪ್ರವಾಸಿಗರಿಗೆ ನೀರು ಎಲ್ಲಿಂದ ಒದಗಿಸಬೇಕು ? ಹಾಗಾಗಿ ಈ ಬಾರಿ ಕೊಡಗಿಗೆ ಆಗಮಿಸುವ ಪ್ರವಾಸಿಗರಿಗೆ ಕಟ್ಟುನಿಟ್ಟಿನ ನಿರ್ಬಂಧ ಹೇರಬೇಕು.
ಸ್ವಾತಿ, ನಿವೃತ್ತ ಶಿಕ್ಷಕಿ, ಶನಿವಾರಸಂತೆ

ಕೊಡಗಿನಲ್ಲೂ ತಾಪಮಾನ ಸುಮಾರು ೩೮ ಡಿಗ್ರಿ ಸೆಲ್ಸಿಯಸ್ ದಾಟಿದ್ದು, ಪ್ರವಾಸಿಗರ ಸಂಖ್ಯೆ ಕಡಿಮೆ ಕಂಡು ಬರುತ್ತಿದೆ. ಚುನಾವಣೆ ಮುಗಿಯುವ ತನಕ ಬಹುಶಃ ಇದೇ ಸ್ಥಿತಿ ಮುಂದುವರಿಯಬಹುದು. ಬೇಸಿಗೆ ಕಾಲಕ್ಕೆ ಎಂದು ಪ್ರವಾಸಿತಾಣಗಳಲ್ಲಿ ಯಾವುದೇ ವಿಶೇಷ ವ್ಯವಸ್ಥೆ ಮಾಡಲಾಗಿಲ್ಲ. ಈಗಾಗಗಲೇ ಇರುವ ಮೂಲಭೂತ ಸವಲತ್ತುಗಳು ಉತ್ತಮ ಸ್ಥಿತಿಯಲ್ಲಿ ಇರುವಂತೆ ನೋಡಿಕೊಳ್ಳಲಾಗುತ್ತಿದೆ. ಜಿಲ್ಲೆಯಲ್ಲಿ ’ಪ್ರವಾಸೋದ್ಯಮ ರಜೆ’ ಘೋಷಣೆಯ ಬೇಡಿಕೆ ಮತ್ತು ಇದರ ಸಾಧ್ಯಾಸಾಧ್ಯತೆ ಬಗ್ಗೆ ಜಿಲ್ಲಾಧಿಕಾರಿ ಜತೆ ಚರ್ಚೆ ಮಾಡಲಾಗುವುದು.

ಅನಿತಾ ಭಾಸ್ಕರ್, ಉಪನಿರ್ದೇಶಕಿ, ಪ್ರವಾಸೋದ್ಯಮ ಇಲಾಖೆ, ಕೊಡಗು
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net