

ಮಡಿಕೇರಿ:
ಬಿಸಿಲಿನ ಬೇಗೆ ಕಾವೇರಿ ತವರು ಕೊಡಗನ್ನೂ ಬಿಟ್ಟಿಲ್ಲ. ಜೀವನದಿ ಕಾವೇರಿ ಬಹುತೇಕ ಬರಿದಾಗಿದೆ. ಕಾವೇರಿ ಕಣಿವೆಯ ಪ್ರಮುಖ ಅಣೆಕಟ್ಟೆ ಹಾರಂಗಿಯಲ್ಲಿ ನೀರಿನ ಸಂಗ್ರಹ ಪ್ರಮಾಣ ಕುಸಿದಿದೆ. ಚಿಕ್ಲಿಹೊಳೆ ಜಲಾಶಯ ಬಯಲಿನಂತೆ ಕಂಡು ಬರುತ್ತಿದೆ. ಕೆಲವೆಡೆ ಕುಡಿಯುವ ನೀರಿನ ಸಮಸ್ಯೆ ದೊಡ್ಡ ಮಟ್ಟದಲ್ಲಿ ಎದುರಾಗುವ ಆತಂಕ ಕಂಡು ಬಂದಿದೆ. ಕುಶಾಲನಗರ ತಾಲೂಕಿನಲ್ಲಿ ಕೆಲವು ಗ್ರಾ.ಪಂ.ಗಳಲ್ಲಿ ಟ್ಯಾಂಕರ್ ಮೂಲಕ ಕುಡಿಯುವ ನೀರು ಪೂರೈಸಲಾಗುತ್ತಿದೆ.
ರಾಜ್ಯವನ್ನು ಹಸಿರಾಗಿಡುವ ಕಾವೇರಿಯೇ ಈ ಬಾರಿ ಬೇಸಿಗೆಗಿಂತಲೂ ಮೊದಲು ಬರಡಾಗುತ್ತಿರುವುದು ಆತಂಕಕ್ಕೆ ಕಾರಣವಾಗಿದೆ. ನದಿಯ ಜನ್ಮ ಸ್ಥಳ ತಲಕಾವೇರಿಯಿಂದ ಕೇವಲ ೭ ಕಿಮೀ ದೂರದ ಭಾಗಮಂಡಲದಲ್ಲಿ ಕಾವೇರಿ ನದಿ ಪಾತ್ರ ಬಹುತೇಕ ಖಾಲಿಯಾಗಿದ್ದು, ನೀರಿನ ಜಾಗದಲ್ಲಿ ಮರಳು ಕಾಣಿಸಿಕೊಳ್ಳುತ್ತಿದೆ. ತ್ರಿವೇಣಿ ಸಂಗಮ ಖಾಲಿ ಖಾಲಿಯಾಗಿದೆ. ಪಿಂಡ ಪ್ರದಾನದಂತಹ ಧಾರ್ಮಿಕ ಕಾರ್ಯಗಳಿಗೂ ಇದರಿಂದ ಅಡ್ಡಿಯಾಗಿದೆ. ಪರಿಸ್ಥಿತಿ ಹೀಗೆಯೇ ಮುಂದುವರಿದರೆ ಕಾವೇರಿಯ ಉಗಮ ಸ್ಥಾನದಲ್ಲೇ ಕುಡಿಯುವ ನೀರಿಗೆ ಸಮಸ್ಯೆ ಆಗುವ ಆತಂಕ ಎದುರಾಗಿದೆ.
ಜಿಲ್ಲೆಯಲ್ಲಿ ಎಲ್ಲೂ ಗಂಭೀರ ಪ್ರಮಾಣದಲ್ಲಿ ನೀರಿನ ಸಮಸ್ಯೆ ಎದುರಾಗಿಲ್ಲ ಎಂದು ಜಿಲ್ಲಾಡಳಿತ ಸ್ಪಷ್ಟಪಡಿಸಿದೆ. ಆದರೂ ಸೂಕ್ತ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಕುಶಾಲನಗರ ಮತ್ತು ಮಡಿಕೇರಿಗೆ ನೀರು ಸರಬರಾಜಿನ ಪ್ರಮುಖ ಮೂಲಗಳಲ್ಲಿ ನೀರಿನ ಮಟ್ಟವನ್ನು ಪ್ರತಿದಿನವೂ ಗಮನಿಸಿಲಾಗುತ್ತಿದ್ದು, ನಿಗದಿತ ಮಟ್ಟದಲ್ಲಿ ನೀರು ಕಾಪಾಡಿಕೊಳ್ಳುವಂತೆ ಸೂಚನೆ ನೀಡಲಾಗಿದೆ. ಕಳೆದ ವರ್ಷ ಕೂಟುಹೊಳೆಯಲ್ಲಿ ಹೆಚ್ಚುವರಿ ಸೇರಿದಂತೆ ಎಲ್ಲಾ ನೀರಿನ ಪಂಪ್‌ಗಳು ಒಮ್ಮಿಂದೊಮ್ಮೆಲೆ ಕೈ ಕೊಟ್ಟ ಪರಿಣಾಮ ಮಡಿಕೇರಿಗೆ ಕುಡಿಯುವ ನೀರಿನ ಪೂರೈಕೆಯಲ್ಲಿ ಸಮಸ್ಯೆ ಆಗಿ ನಗರಸಭೆ ಮುಜುಗರ ಎದುರಿಸುವಂತಾಗಿತ್ತು. ಹಾಗಾಗಿ ಈ ಬಾರಿ ಎಲ್ಲಾ ರೀತಿಯ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಂಡಿದ್ದು ಪಂಪ್‌ಗಳು ಸುಸ್ಥಿಯಲ್ಲಿ ಇಡುವಂತೆ ನೋಡಿಕೊಳ್ಳಲಾಗುತ್ತಿದೆ.
ಸಂಭಾವ್ಯ ಬರ ರೀತಿಯ ಸನ್ನಿವೇಶ ಎದುರಿಸಲು ಜಿಲ್ಲಾಧಿಕಾರಿ ಪಿಡಿ ಖಾತೆಯಲ್ಲಿ ನಿಗದಿತ ಮೊತ್ತದ ಹಣ ಕಾದಿರಿಸಲಾಗಿದೆ. ನೀರಿನ ಸಮಸ್ಯೆ ಗಮನಕ್ಕೆ ಬಂದ ಒಂದು ಗಂಟೆ ಒಳಗೆ ಅದನ್ನು ಪರಿಹರಿಸಲು ಅಗತ್ಯವಿರುವ ಎಲ್ಲಾ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ಟ್ಯಾಂಕರ್‌ಗಳ ಟೆಂಡರ್ ಪ್ರಕ್ರಿಯೆ ಮುಗಿದು ವರ್ಕ್ ಆರ್ಡರ್ ಕೂಡ ಕೊಡಲಾಗಿದೆ. ಅಗತ್ಯ ಬಿದ್ದರೆ ಬಳಸಿಕೊಳ್ಳಲು ಖಾಸಗಿ ಬೋರ್‌ವೆಲ್‌ಗಳನ್ನೂ ಗುರುತಿಸಲಾಗಿದೆ. ಆಗಾಗ್ಗೆ ಅಧಿಕಾರಿಗಳ ಸಭೆ ನಡೆಸಿ ಪರಿಸ್ಥಿತಿಯ ಪರಮಾರ್ಶೆಯನ್ನೂ ನಡೆಸಲಾಗುತ್ತಿದೆ.
ಈ ವರ್ಷ ವಾಡಿಕೆಯ ಮಳೆ ಆಗದ ಕಾರಣ ಜಲಮೂಲಗಳು ಬತ್ತಿ ಹೋಗಿವೆ. ಇದರಿಂದಾಗಿ ನದಿಗಳಲ್ಲಿ ನೀರಿನ ಹರಿವು ಕ್ಷೀಣಿಸಿದೆ. ಅಂತರ್ಜಲದ ಮಟ್ಟವೂ ಕುಸಿದಿದೆ. ಇದು ಕೃಷಿ ಮೇಲೆ ಮಾತ್ರ ಪರಿಣಾಮ ಬೀರದೆ, ಜನ, ಜಾನುವಾರುಗಳ ಕುಡಿಯುವ ನೀರಿಗೂ ಸಮಸ್ಯೆ ಉಂಟು ಮಾಡುವ ಸಾಧ್ಯತೆ ಇದೆ. ಈ ಬಗ್ಗೆ ವಿಜಯವಾಣಿ ಓದುಗರು ಹಂಚಿಕೊಂಡ ಅಭಿಪ್ರಾಯಗಳು ಇಲ್ಲಿದೆ.
ಕೊಡಗಿನಲ್ಲಿ ಈ ಬಾರಿ ಸರಿಯಾಗಿ ಮಳೆ ಬರುತ್ತಿಲ್ಲ. ಇದರಿಂದ ನೀರಿನ ಸಮಸ್ಯೆ ಆಗುತ್ತಿದೆ. ಮರ ಗಿಡಗಳನ್ನು ಹೆಚ್ಚು ಬೆಳೆಸುವ ನಿಟ್ಟಿನಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಬೇಕು. ಮರಗಿಡಗಳನ್ನು ಕಡಿಯುವುದರಿಂದ ಮಳೆ ಸರಿಯಾಗಿ ಬರುತಿಲ್ಲ. ಇದರಿಂದಾಗಿ ಕಾವೇರಿ ತವರಿನಲ್ಲಿ ನೀರಿನ ಸಮಸ್ಯೆ ಹೆಚ್ಚಾಗಿದೆ. ಸಾರ್ವಜನಿಕರು ಕುಡಿಯುವ ನೀರನ್ನು ಸಮರ್ಪಕವಾಗಿ ಬಳಕೆ ಮಾಡಿಕೊಳ್ಳಬೇಕು. ನೀರನ್ನು ಪೋಲು ಮಾಡಬಾರದು. ಮನೆಯ ನಲ್ಲಿಗಳನ್ನು ತೆರೆದಿಡಬಾರದು.
ಕಿರಣ್, ಗ್ರಾಮ ಪಂಚಾಯಿತಿ ಸದಸ್ಯ, ಆಲೂರು ಸಿದ್ದಾಪುರ
ಕೊಡಗಿನಲ್ಲಿ ಕುಡಿಯುವ ನೀರಿಗೆ ತೊಂದರೆ ಆಗಿರುವುದು ದುರಂತ. ಕಾವೇರಿ ತವರು ಬರಿದಾಗಲು ಮನುಷ್ಯ ಪ್ರಕೃತಿಯ ಮೇಲೆ ನಿರಂತರ ದೌರ್ಜನ್ಯವೆಸಗುತ್ತಿರುವುದು ಒಂದು ಕಾರಣ. ಮಳೆ ನೀರನ್ನು ಸಂಗ್ರಹ ಮಾಡಿಕೊಳ್ಳುವ ತೊಟ್ಟಿ ನಿರ್ಮಾಣ ಮಾಡಿಕೊಳ್ಳಬೇಕು. ಮುಂದಿನ ದಿನಗಳಲ್ಲಿ ಈ ರೀತಿ ಮುಂದುವರೆದರೆ ತುಂಬಾ ಕಷ್ಟ ಎದುರಿಸಬೇಕಾಗುತ್ತದೆ.
ದಿವ್ಯಾ, ಗ್ರಂಥ ಪಾಲಕಿ, ದುಂಡಳ್ಳಿ
ಆಸ್ತಾನ ಹಾಡಿಯ ಕುಡಿಯುವ ನೀರಿನ ಸಮಸ್ಯೆ ವಿಜಯವಾಣಿ ಪತ್ರಿಕೆಯಲ್ಲಿ ಪ್ರಕಟವಾದ ನಂತರ ಕೊಳವೆ ಬಾವಿ, ವಿದ್ಯುತ್ ಸಂಪರ್ಕ ಕೆಲಸ ಸಂಪೂರ್ಣ ಮುಗಿದಿದ್ದು ಇನ್ನು ಪೈಪ್ ಲೈನ್ ಆಗಬೇಕಿದೆ. ಒಟ್ಟು ೬೦೦ಮೀ. ಫೈಪ್ ಲೈನ್ ಕೆಲಸ ಅದರೆ ೨೯ ಮನೆಗಳಿಗೆ ನೀರಿನ ವ್ಯವಸ್ಥೆ ಕಲ್ಪಿಸಬಹುದು. ಐಟಿಡಿಪಿ ಇಲಾಖೆಯಿಂದ ಪತ್ರ ಬಂದಿದ್ದು ಆಸ್ತಾನ ಹಾಡಿಗೆ ಶಾಶ್ವತ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಿ ವರದಿ ಸಲ್ಲಿಸುವಂತೆ ಸೂಚಿಸಿದೆ. ಇನ್ನು ಗ್ರಾಮ ಪಂಚಾಯಿತಿ ಕ್ರಮ ಕೈಗೊಳ್ಳಬೇಕಿದೆ.
ಜೆ. ಬಿ. ಕುಂಞಣ್ಣ, ಆಸ್ಥಾನ ಹಾಡಿ ನಿವಾಸಿ
ಎಲ್ಲಾ ಪಂಚಾಯಿತಿಗಳಲ್ಲಿ ನೀರಿನ ಸಮಸ್ಯೆ ಇದೆ. ನಮ್ಮಲ್ಲಿ ಸ್ವಲ್ಪ ಹೆಚ್ಚು ಇದೆ. ಅಂತರ್ಜಲ ಕುಸಿತದಿಂದಾಗಿ ಕುಡಿಯುವ ನೀರಿನ ತೊಂದರೆ ಉಂಟಾಗಿದೆ. ಹಾರಂಗಿ ಜಲಾಶಯದ ಪಕ್ಕದಲ್ಲೇ ಇರುವ ಹಾರಂಗಿ ವಾರ್ಡ್‌ನಲ್ಲೇ ನೀರಿನ ಸಮಸ್ಯೆ ಕಂಡು ಬಂದಿದೆ. ಬಹುತೇಕರು ನೀರಿನ ದುರ್ಬಳಕೆ ಮಾಡುತ್ತಿದ್ದಾರೆ. ಕುಡಿಯುವ ನೀರನ್ನು ಹೂವಿನ ಗಿಡಗಳಿಗೆ ಬಳಸುತ್ತಿದ್ದಾರೆ. ನೀರಿನ ಸದ್ಬಳಕೆ ಸಾರ್ವಜನಿಕರಲ್ಲಿ ಅರಿವು ಮೂಡಿಸಲಾಗುತ್ತಿದೆ. ನೀರಿನ ತುರ್ತು ಅಗತ್ಯ ಇರುವ ಪ್ರದೇಶಗಳಿಗೆ ಟ್ಯಾಂಕರ್ ಮೂಲಕ ನೀರು ಪೂರೈಸಲಾಗುತ್ತಿದೆ.
ಭಾಸ್ಕರ್ ನಾಯಕ್ ಡಿ., ಅಧ್ಯಕ್ಷ, ಕೂಡುಮಂಗಳೂರು ಗ್ರಾ.ಪಂ.
ಬಿಸಿಲಿನ ತಾಪ ಹೆಚ್ಚಾಗಿದೆ. ಕೆರೆ ಕೊಳ್ಳಗಳಲ್ಲಿ ನೀರು ಬತ್ತುತ್ತಿದೆ. ಈಗಾಗಲೇ ದನಕರುಗಳಿಗೆ ನೀರಿನ ಸಮಸ್ಯೆ ಎದುರಾಗಿದೆ. ಪಟ್ಟಣ ಸೇರಿದಂತೆ ಗ್ರಾಮೀಣ ಭಾಗದಲ್ಲಿ ಕುಡಿಯುವ ನೀರಿಗೆ ಮುಂದಿನ ದಿನಗಳಲ್ಲಿ ಸಮಸ್ಯೆಯಾಗಲಿದೆ. ಗ್ರಾಮ ಪಂಚಾಯಿತಿಗಳು ನೀರು ಸರಬರಾಜಿಗೆ ಕ್ರಮ ಕೈಗೊಳ್ಳಬೇಕು. ಟ್ಯಾಂಕರ್‌ನಲ್ಲಿ ನೀರು ಸರಬರಾಜಿಗೆ ಸಿದ್ಧತೆ ಮಾಡಿಕೊಳ್ಳಬೇಕಿದೆ.
ಶರ್ಮಿಳಾ ರಮೇಶ್, ಗೃಹಿಣಿ, ಸೋಮವಾರಪೇಟೆ
ಸದ್ಯದ ಮಟ್ಟಿಗೆ ಕೊಡಗಿನಲ್ಲಿ ನೀರಿನ ಸಮಸ್ಯೆ ಆಗಿಲ್ಲ. ಆದರೂ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಇದಕ್ಕಾಗಿ ಜಿಲ್ಲಾಧಿಕಾರಿ ಪಿಡಿ ಖಾತೆಯಲ್ಲಿ ಅಗತ್ಯ ಹಣ ಇದೆ. ಈಗಾಗಲೇ ಹಲವು ಸುತ್ತಿನಲ್ಲಿ ಅಧಿಕಾರಿಗಳ ಸಭೆ ನಡೆಸಲಾಗಿದೆ. ನೀರಿನ ಸಮಸ್ಯೆ ಬಗ್ಗೆ ಮಾಹಿತಿ ದೊರೆತ ೧ ಗಂಟೆ ಒಳಗೆ ಸಮಸ್ಯೆ ಪರಿಹರಿಸಲಾಗುವುದು. ಟ್ಯಾಂಕರ್‌ಗಳ ವ್ಯವಸ್ಥೆಗಾಗಿ ಟೆಂಡರ್ ಕರೆದು ವರ್ಕ್ ಆರ್ಡರ್ ಕೂಡ ಕೊಡಲಾಗಿದೆ. ಅಗತ್ಯ ಬಿದ್ದರೆ ಬಳಸಿಕೊಳ್ಳಲು ಖಾಸಗಿ ಬೋರ್‌ವೆಲ್‌ಗಳನ್ನೂ ಗುರುತಿಸಲಾಗಿದೆ. ಎಲ್ಲವನ್ನೂ ಪಾರದರ್ಶನ ವ್ಯವಸ್ಥೆಯಡಿ ನಿರ್ವಹಿಸಲಾಗುತ್ತಿದೆ. ಕುಶಾಲನಗರ ಮತ್ತು ಮಡಿಕೇರಿಗೆ ನೀರು ಪೂರೈಕೆಯ ಮೂಲಗಳಲ್ಲಿ ನಿಗದಿತ ಮಟ್ಟದಲ್ಲಿ ನೀರು ಉಳಿಸಿಕೊಳ್ಳಲು ಸೂಚಿಸಲಾಗಿದೆ. ನೀರೆತ್ತುವ ಮೋಟಾರ್‌ಗಳು ಸುಸ್ಥಿತಿಯಲ್ಲಿ ಇಟ್ಟುಕೊಳ್ಳುವಂತೆಯೂ ಹೇಳಲಾಗಿದ್ದು, ಎಲ್ಲಾ ಪ್ರಕ್ರಿಯೆಗಳನ್ನು ಗಂಭೀರವಾಗಿ ಗಮನಿಸಲಾಗುತ್ತಿದೆ.
ವೆಂಕಟ್ ರಾಜಾ, ಕೊಡಗು ಜಿಲ್ಲಾಧಿಕಾರಿ
ಮುಂಗಾರಿನಲ್ಲೂ ಮಳೆ ಕೊರತೆಯಾಗಿತ್ತು. ಈಗ ಬಿಸಿಲಿಗೆ ಧಗೆ ಹೆಚ್ಚಾಗಿದೆ. ಅಂತರ್ಜಲ ಮಟ್ಟ ಕುಸಿಯುತ್ತಿದೆ. ಬೋರ್ವೆಲ್‌ಗಳಲ್ಲಿ ನೀರು ತುಂಬಾ ಕಡಿಮೆಯಾಗಿದೆ. ಗ್ರಾಮೀಣ ಕೆರೆಗಳಲ್ಲಿ ಬತ್ತಿವೆ. ಕೃಷಿ ಭೂಮಿಗೆ ನೀರು ಇಲ್ಲದೆ ಸಮಸ್ಯೆಯಾಗಿದೆ. ಕೆಲವೇ ದಿನಗಳಲ್ಲಿ ಗ್ರಾಮೀಣ ಭಾಗಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ತಲೆದೋರಲಿದೆ. ಈಗಾಲೇ ಪಂಚಾಯಿತಿಯವರು ಸಿದ್ಧತೆ ಮಾಡಿಕೊಳ್ಳಬೇಕು. ಮುಂದಿನ ಸಾಲಿನಲ್ಲಿ ಎಲ್ಲಾ ಗ್ರಾಮಗಳಲ್ಲಿ ಕೆರೆಗಳ ಹೂಳೆತ್ತುವ ಮೂಲಕ ಮಳೆಗಾಲದಲ್ಲಿ ನೀರು ಸಂಗ್ರಹವಾಗುವಂತೆ ನೋಡಿಕೊಳ್ಳಬೇಕು.
ವೀರಭದ್ರಪ್ಪ, ಕೃಷಿಕ, ಬಾಣಾವಾರ ಗ್ರಾಮ, ಸೋಮವಾರಪೇಟೆ
ಕೊಡಗಿನಲ್ಲಿ ಕುಡಿಯುವ ನೀರಿಗೆ ತೊಂದರೆ ಆಗಿರುವುದು ದುರಂತ. ಕೊಡಗಿನಲ್ಲಿ ಮಳೆ ಆಗಿ ಕಾವೇರಿ ಉಕ್ಕಿ ಹರಿದರೆ ರಾಜ್ಯ ಹಾಗೂ ಪಕ್ಕದ ರಾಜ್ಯಗಳು ತಮ್ಮಲ್ಲಿ ನೀರಿಗೆ ತೊಂದರೆ ಇಲ್ಲ ಎಂದು ಖುಷಿ ಪಡುತ್ತದೆ. ಆದರೆ ಈ ಬಾರಿ ಕಾವೇರಿ ನಾಡಿಗೆ ಕೆಲವೆಡೆ ನೀರಿನ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡುವ ಹಂತಕ್ಕೆ ಕೊಡಗು ಬಂದಿದೆ. ಇದು ದುರಂತ. ಇದಕ್ಕೆ ಕಾರಣ ಏನು ಎಂದು ತಜ್ಞರ ಮೂಲಕ ಪರಿಶೀಲನೆ ಮಾಡಿ ಕ್ರಮ ಕೈಗೊಳ್ಳುವುದು ಉತ್ತಮ. ಇಲ್ಲವಾದಲ್ಲಿ ಮುಂದಿನ ದಿನದಲ್ಲಿ ಇನ್ನಷ್ಟೂ ತೊಂದರೆ ಎದುರಿಸುವಂತಾಗುತ್ತದೆ. ಸಾರ್ವಜನಿಕರು ಕುಡಿಯುವ ನೀರನ್ನು ಪೋಲು ಮಾಡಬಾರದು.
ರುಮಾನ ಜಬೀರ್, ಸಾಹಿತಿ, ಕೊಡ್ಲಿಪೇಟೆ
೨೦೨೩ರ ಮುಂಗಾರು ಮತ್ತು ಹಿಂಗಾರು ಮಳೆ ಕೊರತೆಯಿಂದ ಪ್ರತಿ ವರ್ಷದಂತೆ ಜಲ ಬರಲೇ ಇಲ್ಲ. ಮಳೆ ನೀರು ಸಂಗ್ರಹವಾಗಿದ್ದ ಕೆರೆ, ತೋಡು ಬತ್ತಿ ಹೋಗಿವೆ. ಅಂತರ್ಜಲ ಮಟ್ಟ ಕುಸಿದಿದೆ. ಕುಡಿಯುವ ನೀರಿಗೆ ಜನ, ಜಾನುವಾರು ಬರ ಎದುರಿಸುವಂತಾಗಿದೆ. ದಿನೇ ದಿನೇ ತಾಪಮಾನ ಹೆಚ್ಚಾಗುತ್ತಿದೆ. ನೀರಿನ ಮಿತ ಬಳಕೆ ಆಗಬೇಕು. ಮುಂದಿನ ೩ ತಿಂಗಳು ಈ ರೀತಿಯ ಪ್ರಾಕೃತಿಕ ವಿಕೋಪದಿಂದ ಜನ ಬವಣೆ ಪಡುವ ಸಾಧ್ಯತೆ ಇದೆ. ಮಳೆ ಬಂದು ಭೂಮಿ ತಂಪಾದರೆ ಮಾತ್ರ ಜೀವರಾಶಿಗೆ ಶ್ರೀ ರಕ್ಷೆ.
ಚೌರೀರಿ ಉದಯ, ನಿವೃತ್ತ ಶಿಕ್ಷಕ, ಹೊದ್ದೂರು ಗ್ರಾಮ
ಆಧುನಿಕ ಜನ ಜೀವನ ಹಾಗೂ ನೀರಿನ ಅಸಮರ್ಪಕ ಬಳಕೆ ಜತೆಗೆ ನೀರಿನ ಮೂಲವನ್ನು ಮಲೀನ ಮಾಡಿ ನದಿ ಮೂಲಗಳಿಗೆ ತ್ಯಾಜ್ಯ ನೀರು ಸೇರತ್ತಿದೆ. ಕೃಷಿ ಸಂಪೂರ್ಣ ನಿರ್ಲಕ್ಷ್ಯಕ್ಕೆ ಒಳಗಾಗಿದ್ದು ಕೃಷಿ ಭೂಮಿ ಲೇಔಟ್‌ಗಳಾಗಿ ಬದಲಾಗುತ್ತಿದೆ. ಮಳೆ ನೀರಿನ ಬಳಕೆ ಹಾಗೂ ಇಂಗು ಗುಂಡಿಗಳ ನಿರ್ಮಾಣವಾದರೆ ಮಾತ್ರ ಮುಂದೆ ಎದುರಾಗುವ ಸಮಸ್ಯೆಗೆ ಸ್ವಲ್ಪ ಪರಿಹಾರ ಕಂಡುಕೊಳ್ಳಬಹುದಾಗಿದೆ. ಇಲ್ಲದೆ ಹೋದರೆ ಕೊಡಗಿಗೆ ಜಲ ಕ್ಷಾಮ ತಪ್ಪಿದ್ದಲ್ಲ.
ಬಿ.ಎಸ್. ಭಗವಾನ್, ರೈತ ಬೆಟೋಳಿ, ವಿರಾಜಪೇಟೆ