

ಮಂಡ್ಯ: ವಾರಾಣಸಿಯಲ್ಲಿ ಗಂಗಾನದಿಗೆ ಮಾಡಲಾಗುವ ಗಂಗಾ ಆರತಿಯ ಮಾದರಿಯಲ್ಲಿ ಕಾವೇರಿ ನದಿಗೆ ಆರತಿ ಕಾರ್ಯಕ್ರಮ ಆಯೋಜಿಸಲು ಸೋಮವಾರ ಕೆಆರ್‌ಎಸ್‌ನಲ್ಲಿ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಘೋಷಣೆ ಮಾಡಿದ್ದಾರೆ. ಅದರಂತೆ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಅಧ್ಯಕ್ಷತೆಯಲ್ಲಿ ಅಧ್ಯಯನ ಸಮಿತಿ ರಚಿಸಿ ಆದೇಶ ಹೊರಡಿಸಿದ್ದಾರೆ. ಇದರೊಂದಿಗೆ ವಿಧಾನ ಪರಿಷತ್ ಸದಸ್ಯ ದಿನೇಶ್ ಗೂಳಿಗೌಡ ಮನವಿಗೆ ಸ್ಪಂದನೆ ಸಿಕ್ಕಿದೆ.
ದೇಶದ ಪವಿತ್ರ ನದಿಗಳಲ್ಲಿ ಕಾವೇರಿ ಕೂಡ ಒಂದು. ಭಾಗಮಂಡಲದಲ್ಲಿ ಉದಯವಾಗಿ ತಮಿಳುನಾಡ್ನಿ ಮಾಯಿಲಾಡುತುರೈ ಜಿಲ್ಲೆಯ ಪುಂಪುರಃ ಎಂಬಲ್ಲಿ ಬಂಗಾಳಕೊಲ್ಲಿ ಸೇರುತ್ತದೆ. ನದಿಯು ರಾಜ್ಯದ ಲಕ್ಷಾಂತರ ಹೆಕ್ಟೇರ್ ಪ್ರದೇಶದಲ್ಲಿ ವ್ಯವಸಾಯ ಮಾಡಲು ಅನುಕೂಲವಾಗುತ್ತಿದೆ. ಕಾವೇರಿಯಿಂದ ಬೆಂಗಳೂರು, ಮೈಸೂರು, ಮಂಡ್ಯ, ಬೆಂಗಳೂರು ಗ್ರಾಮಾಂತರ ಸೇರಿ ಸುತ್ತಮುತ್ತಲಿನ ಜಿಲ್ಲೆಗಳ ಕೋಟ್ಯಂತರ ಜನರಿಗೆ ಕುಡಿಯುವ ನೀರು ಕೂಡ ಸಿಗುತ್ತಿದೆ. ಕಾವೇರಿ ಜಲಾನಯನ ಪ್ರದೇಶದಲ್ಲಿ 1657 ಕೆರೆಗಳಿವೆ. ಅದರ ಜತೆಗೆ ತಮಿಳುನಾಡು, ಕೇರಳ ಹಾಗೂ ಪಾಂಡಿಚೇರಿ ರಾಜ್ಯಗಳಿಗೂ ಅನುಕೂಲವಾಗಿದೆ. ಉತ್ತರ ಪ್ರದೇಶದ ವಾರಣಾಸಿಯ ಪಕ್ಕ ಕಾಶಿಯ ವಿಶ್ವನಾಥ ದೇವಾಲಯದ ಪಕ್ಕ ಗಂಗಾ ಆರತಿ ಮಾಡಲಾಗುತ್ತದೆ. ಅದೇ ಮಾದರಿಯಲ್ಲಿ ನಮ್ಮ ಪವಿತ್ರ ಕಾವೇರಿ ನದಿಗೂ ಆರತಿ ಮಾಡಬೇಕು ಎಂದು ಎಂಎಲ್‌ಸಿ ಮನವಿ ಮಾಡಿದರು. ಇದಕ್ಕೆ ಸ್ಪಂದಿಸಿದ ಡಿಸಿಎಂ, ಕೂಡಲೇ ಒಪ್ಪಿಗೆ ಸೂಚಿಸಿದ್ದರು.
ಸಮಿತಿ ರಚಿಸಿ ಆದೇಶ: ಕೃಷಿ ಸಚಿವ ಎನ್.ಚಲುವರಾಯಸ್ವಾಮಿ, ಜಲಸಂಪನ್ಮೂಲ ಇಲಾಖೆ ಸರ್ಕಾರ ಅಪರ ಮುಖ್ಯ ಕಾರ್ಯದರ್ಶಿ ಮತ್ತು ಕಾವೇರಿ ನೀರಾವರಿ ನಿಗಮದ ವ್ಯವಸ್ಥಾಪಕ ನಿರ್ದೇಶಕರಿಗೆ ಆದೇಶಿಸಿರುವ ಡಿಸಿಎಂ, ಕಾವೇರಿ ಆರತಿ ಸಂಬಂಧ ಸೂಕ್ತ ಅಧ್ಯಯನ ನಡೆಸಲು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಅಧ್ಯಕ್ಷತೆಯಲ್ಲಿ ಮೈಸೂರು, ಮಂಡ್ಯ ಹಾಗೂ ಕೊಡಗು ಜಿಲ್ಲೆಯ ಜನಪ್ರತಿನಿಧಿಗಳನ್ನು ಒಳಗೊಂಡಂತೆ ಧಾರ್ಮಿಕ ದತ್ತಿ ಇಲಾಖೆ, ಜಲಸಂಪನ್ಮೂಲ ಇಲಾಖೆ, ಪ್ರವಾಸೋದ್ಯಮ ಇಲಾಖೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಉನ್ನತ ಅಧಿಕಾರಿಗಳೊಂದಿಗೆ ವಿವಿಧ ಧಾರ್ಮಿಕ ಸ್ಥಳಕ್ಕೆ ಭೇಟಿ ನೀಡಿ ಅಧ್ಯಯನ ನಡೆಸಿ ಒಂದು ತಿಂಗಳೊಳಗೆ ವರದಿ ಸಲ್ಲಿಸಬೇಕು. ಮಾತ್ರವಲ್ಲದೆ ಸಮಿತಿ ರಚನೆ ಹಾಗೂ ಪ್ರವಾಸ ಮತ್ತು ಇತರೆ ಖರ್ಚು ವೆಚ್ಚವನ್ನು ಕಾವೇರಿ ನೀರಾವರಿ ನಿಗಮ ಭರಿಸಬೇಕೆಂದು ಸೂಚಿಸಿದ್ದಾರೆ.