ಏ. 5ಕ್ಕೆ ನ್ಯಾಯಯುತ ನೀರಿನ ಹಕ್ಕಿಗಾಗಿ ಒಂದು ದಿನದ ಕಾರ್ಯಗಾರ

kaveri
Published on

ಕುಶಾಲನಗರ:

ಕಾವೇರಿ ನದಿ ರಕ್ಷಣಾ ಸಮಿತಿ ವತಿಯಿಂದ ಬೆಂಗಳೂರಿನಲ್ಲಿ ಏ. 5ರಂದು ನ್ಯಾಯಯುತ ನೀರಿನ ಹಕ್ಕಿಗಾಗಿ ಒಂದು ದಿನದ ಕಾರ್ಯಗಾರ ಹಾಗೂ ವಿಚಾರ ಸಂಕಿರಣ ಕಾರ್ಯಕ್ರಮ ನಡೆಯಲಿದೆ ಎಂದು ಸಮಿತಿಯ ಅಧ್ಯಕ್ಷ ಕೆ.ಟಿ. ಚಂದ್ರು ತಿಳಿಸಿದರು. ಕುಶಾಲನಗರದ ಗೌಡ ಯುವಕ ಸಂಘ ಸಭಾಂಗಣದಲ್ಲಿ ಗುರುವಾರ ಕಾರ್ಯಕ್ರಮದ ಆಹ್ವಾನ ಪತ್ರಿಕೆ ಬಿಡುಗಡೆ ಮಾಡಿ ಮಾತನಾಡಿದರು.

ಅಂದು ಬೆಂಗಳೂರಿನ ಕೆ.ಆರ್. ರಸ್ತೆಯ ಕುವೆಂಪು ಕಲಾಕ್ಷೇತ್ರದಲ್ಲಿ ನಡೆಯುವ ಕಾರ್ಯಗಾರವನ್ನು ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನದ ಪೀಠಾಧ್ಯಕ್ಷ ಡಾ. ನಿರ್ಮಲಾನಂದನಾಥ ಮಹಾ ಸ್ವಾಮೀಜಿ ಉದ್ಘಾಟಿಸಲಿದ್ದಾರೆ. ಸಿದ್ದಗಂಗಾ ಮಹಾಸಂಸ್ಥಾನ ಮಠಾಧೀಶÀ ಶ್ರೀ ಸಿದ್ದಲಿಂಗ ಮಹಾಸ್ವಾಮಿ ದಿವ್ಯ ಸಾನಿಧ್ಯ ವಹಿಸುವುದರೊಂದಿಗೆ ಮಾಜಿ ಪ್ರಧಾನಮಂತ್ರಿ ಎಚ್.ಡಿ. ದೇವೇಗೌಡ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ನಡೆಯಲಿದೆ ಎಂದರು.

ಈ ಸಂದರ್ಭ ಸಮಿತಿಯ ಉಪಾಧ್ಯಕ್ಷೆ ಯಶೋಧ ರಾಜಣ್ಣ ಪ್ರಾಸ್ತಾವಿಕವಾಗಿ ಮಾತನಾಡಿ ಸಮಿತಿಯ ಧ್ಯೇಯೋದ್ದೇಶಗಳ ಬಗ್ಗೆ ಮಾಹಿತಿ ಒದಗಿಸಿದರು. ಕಾವೇರಿ ನದಿ ಸ್ವಚ್ಛತಾ ಆಂದೋಲನದ ರಾಜ್ಯ ಸಂಚಾಲಕ ಎಂ. ಎನ್. ಚಂದ್ರಮೋಹನ್ ಈ ಸಂದರ್ಭ ಮಾತನಾಡಿ ಕಾವೇರಿ ನದಿ ನೀರಿನ ಹಕ್ಕಿಗಾಗಿ ಹೋರಾಡುವುದರ ಜತೆಗೆ ದಕ್ಷಿಣ ಭಾರತದ ಜೀವನಾಡಿಯಾದ ಕಾವೇರಿಯನ್ನು ಸಂರಕ್ಷಣೆ ಮಾಡುವ ಯೋಜನೆಗಳನ್ನು ರೂಪಿಸುವ ನಿಟ್ಟಿನಲ್ಲಿ ಸಮಿತಿ ಮೂಲಕ ಸÀರ್ಕಾರಗಳ ಗಮನ ಸೆಳೆಯುವಂತೆ ಮನವಿ ಮಾಡಿದರು.

ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷೆ ಕೆ.ಪಿ. ಚಂದ್ರಕಲಾ ಮಾತನಾಡಿ ಎಸ್.ಎಂ. ಕೃಷ್ಣ ಮುಖ್ಯಮಂತ್ರಿ ಆಗಿದ್ದ ಅವಧಿಯಲ್ಲಿ ತಲಕಾವೇರಿ ಮೂಲ ಕಾವೇರಿಯ ಉಳಿವು, ಅಭಿವೃದ್ಧಿಗಾಗಿ ಶ್ರಮಿಸಿದ ಬಗ್ಗೆ ಮಾಹಿತಿ ಒದಗಿಸಿದರು.

ಕಾವೇರಿ ನದಿ ರಕ್ಷಣಾ ಸಮಿತಿಯ ಕಾರ್ಯದರ್ಶಿ ಎಚ್.ಕೆ. ರಾಮು ಮಾತನಾಡಿ ರಾಜ್ಯದ ಎಂಟು ಜಿಲ್ಲೆಗಳಿಂದ ಈ ಕಾರ್ಯಗಾರದಲ್ಲಿ ಪ್ರತಿನಿಧಿಗಳು ಪಾಲ್ಗೊಳ್ಳಲಿದ್ದಾರೆ. ಬೆಂಗಳೂರಿನ ಕಾರ್ಯಕ್ರಮದಲ್ಲಿ ಕೊಡಗು ಜಿಲ್ಲೆಯಿಂದ ಅತ್ಯಧಿಕ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಮನವಿ ಮಾಡಿದರು.

ಗೌಡ ಯುವಕ ಸಂಘದ ಪ್ರಮುಖರಾದ ಎನ್.ಈ. ಶಿವಪ್ರಸಾದ್ ಮತ್ತು ಯುವಕ ಸಂಘದ ನಿರ್ದೇಶಕರು, ಗೌಡ ಸಮಾಜದ ವಿವಿಧ ಘಟಕಗಳ ಪ್ರಮುಖರು, ಸದಸ್ಯರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net