

ಕವಲೂರು: ಅಂಧ, ಅನಾಥರು, ದೀನ ದಲಿತರ ಬದುಕಿಗಾಗಿ ತುಲಾಭಾರ ಕಾರ್ಯಕ್ರಮ ನಡೆಯುತ್ತಿದೆ ಎಂದು ಹೂವಿನಹಡಗಲಿ ಹಿರೇಶಾಂತವೀರ ಸ್ವಾಮೀಜಿ ತಿಳಿಸಿದರು.
ಗ್ರಾಮದ ಹಾಲೇಶ್ವರ ಭಜನೆ ಹಾಗೂ ಯುವಕ ಮಂಡಳಿಯಿಂದ ಭಜನಾ ಮುಕ್ತಾಯ ಸಮಾರಂಭ ಅಂಗವಾಗಿ ಹಮ್ಮಿಕೊಂಡಿದ್ದ ಕುಂಭಾಭಿಷೇಕ, ತುಲಾಭಾರ ಕಾರ್ಯಕ್ರಮದಲ್ಲಿ ಗುರುವಾರ ಮಾತನಾಡಿದರು. ಸಾವಿರಾರು ಅಂಧರು ವೀರೇಶ್ವರ ಪುಣ್ಯಾಶ್ರಮದಲ್ಲಿ ನೆಲೆ ಪಡೆದಿದ್ದಾರೆ. ಅವರ ಬದುಕು ರೂಪಿಸುವುದು ಅವಶ್ಯ ಎಂದರು.
ಸಾಹಿತಿ ವೀಣಾ ಪಾಟೀಲ ಮಾತನಾಡಿ, ಹೆಣ್ಣು ಕುಟುಂಬದ ಕಣ್ಣು. ಮನೆತನದ ನಡವಳಿ ಮುಂದುವರಿಸಿಕೊಂಡು ಹೋಗುವ, ಹಣವನ್ನು ಆಹಾರವಾಗಿ ಪರಿವರ್ತಿಸುವವಳು. ಸಾಮಾಜಿಕ, ಧಾರ್ಮಿಕ, ಸಾಂಸ್ಕೃತಿಕ ಹೀಗೆ ಎಲ್ಲ ಕಾರ್ಯದಲ್ಲಿ ಭಾಗವಹಿಸಿ ಎಲ್ಲರ ಏಳಿಗೆಗೆ ಶ್ರಮಿಸುವ ಹೆಣ್ಣುಮಕ್ಕಳಿಗೆ ಶಿಕ್ಷಣ ಕೊಡುವುದು ಪಾಲಕರ ಕರ್ತವ್ಯ ಎಂದರು.
ಅಡ್ನೂರ ಅಭಿನವ ಪಂಚಾಕ್ಷರ ಶಿವಾಚಾರ್ಯರು ಮಾತನಾಡಿದರು. ಕಲ್ಲಯ್ಯಜ್ಜನವರಿಗೆ ತುಲಾಭಾರ ಹಾಗೂ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ನಡೆಯಿತು. ಭೂದಾನಿ ಪ್ರದೀಪಗೌಡ ಮಾಲಿಪಾಟೀಲ, ಗಾಯಕಿ ನಯನಾ, ಗ್ರಾಮದ ಮುಖಂಡರು, ಮಹಿಳೆಯರು ಇದ್ದರು.