

ಕವಲೂರು: ಮಾನಸಿಕ ನೆಮ್ಮದಿ ಮತ್ತು ಒತ್ತಡ ನಿವಾರಣೆಗೆ ಕ್ರೀಡೆ ಸಹಕಾರಿಯಾಗಿದೆ ಎಂದು ಕುರುಬರ ಸಂಘದ ತಾಲೂಕು ಉಪಾಧ್ಯಕ್ಷ ಭರಮಪ್ಪ ನಗರ ತಿಳಿಸಿದರು.
ಗ್ರಾಮದಲ್ಲಿ ಶ್ರೀ ದುರ್ಗಾ ಪರಮೇಶ್ವರಿ ಜಾತ್ರೆ ಅಂಗವಾಗಿ ಹಾವಳಿ ಬಾಯ್ಸ ಸ್ಪೋರ್ಟ್ಸ್ ಕ್ಲಬ್‌ನಿಂದ ಗುರುವಾರ ಆಯೋಜಿಸಿದ್ದ ಮುಕ್ತ ಸ್ಟಂಪರ್ ಬಾಲ್ ಕ್ರಿಕೆಟ್ ಟೂರ್ನಮೆಂಟ್‌ಗೆ ಚಾಲನೆ ನೀಡಿ ಮಾತನಾಡಿದರು.
ಇತ್ತೀಚಿನ ವರ್ಷಗಳಲ್ಲಿ ಬಹುಪಾಲು ಯುವಕರು ದೈಹಿಕ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವುದು ಕಡಿಮೆಯಾಗಿದೆ. ಪಠ್ಯದ ಜತೆಗೆ ಕ್ರೀಡೆ, ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಭಾಗವಹಿಸಬೇಕು. ದೈಹಿಕ ಚಟುವಟಿಕೆ ದೇಹಕ್ಕೆ ತಾಕತ್ತು ನೀಡಿದರೆ, ಸಾಂಸ್ಕೃತಿಕ ಚಟುವಟಿಕೆ ಮನಸ್ಸನ್ನು ಉಲ್ಲಾಸಗೊಳಿಸುತ್ತದೆ. ಇಂಥ ಕ್ರೀಡಾ ಚಟುವಟಿಕೆಗಳನ್ನು ಹೆಚ್ಚು ಹೆಚ್ಚು ಆಯೋಜಿಸಬೇಕು ಎಂದರು.
ಎಸ್‌ಡಿಎಂಸಿ ಅಧ್ಯಕ್ಷ ಮಹಾಂತೇಶ ಸಿಂದೋಗಿಮಠ ಮಾತನಾಡಿ, ಸಾಮಾಜಿಕ ಮಾಧ್ಯಮಗಳು ಬಂದಮೇಲೆ ಯುವಕರು ಕಲೆ, ಸಂಸ್ಕೃತಿ ಮರೆತು ಮೊಬೈಲ್‌ನಲ್ಲೇ ಕಾಲಹರಣ ಮಾಡುತ್ತಿದ್ದಾರೆ. ಮೊಬೈಲ್ ಬಳಕೆ ಕಡಿಮೆ ಮಾಡಿ ಕ್ರೀಡೆ, ಕಲೆ ಮತ್ತು ಸಂಸ್ಕೃತಿ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಬೇಕೆಂದು ಸಲಹೆ ನೀಡಿದರು.
ಪ್ರಮುಖರಾದ ಮುತ್ತಣ್ಣ ಬಿಸರಳ್ಳಿ, ನಾಗರಾಜ ಕಗ್ಗಲ್, ಭೀಮಣ್ಣ ಸಿದ್ನೆಕೊಪ್ಪ, ಹನುಮಂತ, ನೂರಸಾಬ, ಪ್ರದೀಪ ಸಜ್ಜೇದಮಠ, ವಿರೂಪಾಕ್ಷಪ್ಪ, ಹನುಮಂತ ದೊಡ್ಡಮನಿ, ಬಾಳಪ್ಪ ನಾಯಕ, ಬದ್ರುದ್ದೀನ್, ತೋಟಪ್ಪ ಶಿಂಟ್ರ, ಹೊನ್ನಪ್ಪಗೌಡ, ಮಾರುತಿ ಇತರರಿದ್ದರು.