

ಕವಲೂರು: ಲೋಕ ಕಲ್ಯಾಣ ಹಾಗೂ ಮನುಕುಲದ ಉದ್ಧಾರಕ್ಕಾಗಿ ಭಗೀರಥ ಮಹರ್ಷಿ ಕಠಿಣ ತಪಸ್ಸು ಮಾಡಿ ದೇವಗಂಗೆಯನ್ನು ಧರೆಗಿಳಿಸಿದ ಮಹಾತ್ಮ ಎಂದು ಜಿಲ್ಲಾ ಪರಿಷತ್ ಮಾಜಿ ಸದಸ್ಯ ಶರಣಪ್ಪ ಸಿದ್ನೆಕೊಪ್ಪ ಹೇಳಿದರು.
ಗ್ರಾಮದಲ್ಲಿ ಭಗೀರಥ ಸೇವಾ ಸಮಿತಿ ಹಾಗೂ ಗ್ರಾಮಸ್ಥರು ಜಯಂತಿ ನಿಮಿತ್ತ ಶನಿವಾರ ಆಯೋಜಿಸಿದ್ದ ಭಗೀರಥ ಮಹರ್ಷಿ ಭಾವಚಿತ್ರ ಮೆರವಣಿಗೆಗೆ ಚಾಲನೆ ನೀಡಿ ಮಾತನಾಡಿದರು.
ಭಗೀರಥ ಮಹರ್ಷಿ ಘೋರ ತಪಸ್ಸು ಮಾಡಿ ಗಂಗೆಯನ್ನು ಧರೆಗಿಳಿಸಿ, ಲೋಕ ಪಾವನಗೊಳಿಸಿದ್ದಾರೆ. ಯುವಕರು ಸಹ ಛಲದಿಂದ ವಿದ್ಯಾಭ್ಯಾಸ ಮಾಡಿ ಗುರಿ ತಲುಪಿ ಸಮಾಜಕ್ಕೆ ಹೆಸರು ತರಬೇಕು.
ಮಹರ್ಷಿ ಆದರ್ಶ ಗುಣಗಳನ್ನು ಸರ್ವರೂ ಅಳವಡಿಸಿಕೊಳ್ಳಬೇಕು. ಪಾಲಕರು ಮಕ್ಕಳ ಶಿಕ್ಷಣಕ್ಕೆ ಒತ್ತು ನೀಡುವ ಮೂಲಕ ಸಮಾಜದ ಅಭಿವೃದ್ಧಿಯತ್ತ ಗಮನಹರಿಸಬೇಕು ಎಂದರು.
ಅಲಂಕೃತ ತೆರೆದ ವಾಹನದಲ್ಲಿ ಭಗೀರಥ ಮಹರ್ಷಿ ಭಾವಚಿತ್ರವಿರಿಸಿ ಗ್ರಾಮದ ಮಾರುತೇಶ್ವರ ದೇವಸ್ಥಾನದಿಂದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಲಾಯಿತು. ಮಹಿಳೆಯರ ಕಳಸ, ಕುಂಭ ಹಾಗೂ ವಾದ್ಯ ಮೇಳಗಳು ಪಾಲ್ಗೊಂಡಿದ್ದವು. ನಂತರ ದಾಸೋಹ ಸೇವೆ ನಡೆಯಿತು.
ಪ್ರಮುಖರಾದ ಲಕ್ಷ್ಮಣ ಗುಡಿ, ಹನುಮಂತ ಹೊಸಮನಿ, ಹೊನಕೇರಪ್ಪ ಮುಕ್ಕಣ್ಣವರ, ಮಹಾಂತೇಶ ಸಿಂದೋಗಿಮಠ, ತಿಮ್ಮಣ್ಣ ಸಿದ್ನೆಕೊಪ್ಪ, ಸಿದ್ದಪ್ಪ ಗಿಣಿಗೇರಿ, ಯಂಕಪ್ಪ ಹಿಟ್ನಾಳ, ಮುತ್ತಣ್ಣ ಬಿಸರಳ್ಳಿ, ದೇವಪ್ಪ ಸಿದ್ನೆಕೊಪ್ಪ, ನಿಂಗಪ್ಪ ಎಮ್ಮಿ, ನಾಗಪ್ಪ ಹಳ್ಳಿ, ರಮೇಶ ಹಂದ್ರಾಳ, ಶಿವಪುತ್ರಪ್ಪ ಮೇವುಂಡಿ, ಸಿದ್ದಣ್ಣ ಯರಾಶಿ, ರಾಮಣ್ಣ ಗುಡಿಹಿಂದಲ, ಶಿವಪ್ಪ ಇತರರಿದ್ದರು.