

ಕವಲೂರು: ಗ್ರಾಮದಲ್ಲಿ ದುರ್ಗಾದೇವಿ ದೇವಿ ಜಾತ್ರಾ ಮಹೋತ್ಸವ ಅಂಗವಾಗಿ ಭಾವೈಕ್ಯ ಹಾಗೂ ರಾಷ್ಟ್ರಪ್ರೇಮ ಸಾರುವ ಮಹಾರಥೋತ್ಸವ ಸಹಸ್ರಾರು ಭಕ್ತರ ಮಧ್ಯೆ ಸೋಮವಾರ ನಡೆಯಿತು.
ರಥೋತ್ಸವಕ್ಕೂ ಮೊದಲು ಧ್ವಜಾರೋಹಣವನ್ನು ಮೈನಹಳ್ಳಿ ಬಿಕನಳ್ಳಿಯ ಸಿದ್ದೇಶ್ವರ ಸ್ವಾಮೀಜಿ, ಅಳವಂಡಿಯ ಮರುಳಾರಾಧ್ಯ ಶಿವಾಚಾರ್ಯ ಸ್ವಾಮೀಜಿ, ಕುಕನೂರಿನ ಮಹಾದೇವ ಸ್ವಾಮೀಜಿ, ಗುಳೇದಗುಡ್ಡದ ಒಪ್ಪತೇಶ್ವರ ಸ್ವಾಮೀಜಿ, ಯಲಬುರ್ಗಾದ ಬಸವಲಿಂಗೇಶ್ವರ ಸ್ವಾಮೀಜಿ ನೇರವೇರಿಸಿ ಮಹಾರಥೋತ್ಸವಕ್ಕೆ ಚಾಲನೆ ನೀಡಿದರು.
ಅಳವಂಡಿಯ ಮರುಳಾರಾಧ್ಯ ಸ್ವಾಮೀಜಿ ಮಾತನಾಡಿ, ರಥೋತ್ಸವಕ್ಕೆ ವಿವಿಧ ಬಾವುಟಗಳನ್ನು ಹಾರಿಸಿ ರಥೋತ್ಸವ ನಡೆಸಿದರೆ, ಕವಲೂರು ಗ್ರಾಮದಲ್ಲಿ ರಾಷ್ಟ್ರ ಧ್ವಜವನ್ನು ಹಾರಿಸುವ ಮೂಲಕ ರಾಷ್ಟ್ರದ ಭಾವೈಕ್ಯತೆ ಹಾಗೂ ರಾಷ್ಟ್ರ ಪ್ರೇಮ ಸಾರಲಾಗುತ್ತದೆ. ಗ್ರಾಮದಲ್ಲಿ ದುರ್ಗಾದೇವಿ ಜಾತ್ರೆಯನ್ನು ಪ್ರತಿಯೊಬ್ಬರೂ ಸಾಮರಸ್ಯ, ಪ್ರೀತಿ, ವಿಶ್ವಾಸ, ಭಕ್ತಿಯಿಂದ ಜಾತ್ರೆಯನ್ನು ಮಾಡುತ್ತಾರೆ ಎಂದರು.
ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸದಸ್ಯ ಬಸವರಾಜ ಕ್ಯಾವಟರ್ ಮಾತನಾಡಿ, ಪ್ರತಿ ಸಮೂದಾಯದ ಜನ ಜಾತಿ ಮತ ಧರ್ಮ ಎನ್ನದೇ ಕಾರ್ಯವನ್ನು ಯಶಸ್ವಿಯಾಗಿ ನೇರವೆರಿಸುತ್ತಿರುವುದು ಸಂತೋಷದ ವಿಷಯವಾಗಿದೆ ಎಂದರು.
ಗುಳೇದಗುಡ್ಡದ ಒಪ್ಪತೇಶ್ವರ ಸ್ವಾಮೀಜಿ ಮಾತನಾಡಿ, ಬಹಳ ಶ್ರದ್ಧೆಯಿಂದ ಜಾತ್ರೆಯನ್ನು ಗ್ರಾಮೀಣ ಮಟ್ಟದಲ್ಲಿ ಅಂತ್ಯತ ವೈಶಿಷ್ಟ್ಯವಾಗಿ ಆಚರಿಸಲಾಗುತ್ತದೆ. ಕವಲೂರಿನಲ್ಲಿ ಯಾವುದೇ ಪ್ರಾಣಿ ಬಲಿ ನೀಡದೆ ದೇವಿಯ ಜಾತ್ರೆಯನ್ನು ಮಾಡಲಾಗುತ್ತದೆ ಎಂದರು.
ರಥೋತ್ಸವಕ್ಕೆ ಚಾಲನೆ ಸಿಗುತ್ತಿದ್ದಂತೆ, ಭಕ್ತರು ಉತ್ತತ್ತಿ, ಬಾಳೆಹಣ್ಣು ಎಸೆದು ಭಕ್ತಿ ಸಮರ್ಪಿಸಿದರು. ರಥೋತ್ಸವದ ಮುಂದೆ ವಿವಿಧ ವಾದ್ಯ ಮೇಳಗಳು ಗಮನ ಸೆಳೆದವು. ಪೊಲೀಸ್ ಇಲಾಖೆಯಿಂದ ಬಿಗಿ ಬಂದೋಬಸ್ತ್ ಒದಗಿಸಲಾಗಿತ್ತು. ಕಲಾವಿದ ಗವಿಸಿದ್ದಯ್ಯ ಹಳ್ಳಿಕೇರಿಮಠ ಅವರು ಜಾನಪದ ಹಾಡುವ ಮೂಲಕ ರಂಜಿಸಿದರು. ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಗೈದ ಸಾಧಕರನ್ನು ಸನ್ಮಾನಿಸಲಾಯಿತು. ಗ್ರಾಪಂ ಅಧ್ಯಕ್ಷೆ ಮಲ್ಲವ್ವ, ಸಿಪಿಐ ಚಂದ್ರು ಉಪ್ಪಾರ, ಪಿಎಸ್‌ಐ ಪ್ರಹ್ಲಾದ್ ನಾಯಕ, ಪಿಡಿಒ ಅನಿತಾ.ಕೆ, ಪ್ರಮುಖರಾದ ಪ್ರದೀಪಗೌಡ ಮಲಿಪಾಟೀಲ್, ಅಜಯಗೌಡ ಪಾಟೀಲ ಮೈನಹಳ್ಳಿ, ವೀರೇಶ ಸಜ್ಜನ, ಮರಿಶಾಂತವೀರಸ್ವಾಮಿ, ಅನ್ನಪೂರ್ಣ ಇತರರಿದ್ದರು.