ಭಕ್ತರಿಗೆ ಒಲಿಯುವ ಕಾವಲು ಅಮ್ಮ

ark2
Published on

ರವಿ ಬೆಟ್ಟಸೋಗೆ ಅರಕಲಗೂಡು

ತಾಲೂಕಿನ ದೇವಾಲಯಗಳ ಊರು ರಾಮನಾಥಪುರದಲ್ಲಿ ಹಲವಾರು ಐತಿಹಾಸಿಕ ಸನ್ನಿಧಿಗಳು ಇವೆ. ಈ ಪೈಕಿ ಗ್ರಾಮದೇವತೆ ಶ್ರೀ ಕಾವಲು ಅಮ್ಮ ಅಪಾರ ಭಕ್ತರ ಆರಾಧ್ಯ ದೈವ. ಈ ದೇವತೆ ದರ್ಶನ ಮಾಡಿದರೆ ಸಕಲ ಕರ್ಮಗಳೂ ನಾಶವಾಗಿ ಫಲಗಳು ಕೈಗೊಡಿ ಬರುತ್ತವೆ ಎನ್ನುವ ಶ್ರದ್ಧೆ, ನಂಬಿಕೆ ಭಕ್ತರಲ್ಲಿದೆ.

ದಕ್ಷಿಣ ಕಾಶಿ ಖ್ಯಾತಿಯ ರಾಮನಾಥಪುರ ಸುಕ್ಷೇತ್ರದಲ್ಲಿ ಚತುರ್ಯುಗ ಮೂರ್ತಿ ಶ್ರೀ ರಾಮೇಶ್ವರ, ಅಗಸ್ತ್ಯೇಶ್ವರ, ಪಟ್ಟಾಭಿರಾಮ, ಶ್ರೀರಾಘವೇಂದ್ರ ಸ್ವಾಮಿಗಳ ಮೃತ್ತಿಕಾ ವೃಂದಾವನ ಶ್ರೀ ಪ್ರಸನ್ನ ಸುಬ್ರಹ್ಮಣ್ಯಸ್ವಾಮಿ ಸೇರಿದಂತೆ ಹಲವು ಐತಿಹಾಸಿಕ ಮಂದಿರಗಳಿವೆ. ಈ ದೇವಾಲಯಗಳ ಪೈಕಿ ಊರು ಕಾಯುವ ಗ್ರಾಮದೇವತೆ ಕಾವಲು ಅಮ್ಮ ದೇವರ ಮಹಿಮೆ ವಿಶೇಷವಾಗಿದೆ. ಗ್ರಾಮದೇವತೆ ದೇವಸ್ಥಾನಕ್ಕೆ ಐತಿಹಾಸಿಕ ದೇಗುಲಗಳಿಗೆ ಬರುವಷ್ಟೇ ಸಂಖ್ಯೆಯಲ್ಲಿ ಭಕ್ತರು ಕಾವಲು ಅಮ್ಮ ದೇವತೆಗೆ ಪೂಜೆ ಸಲ್ಲಿಸಲೂ ಆಗಮಿಸುತ್ತಾರೆ. ದೇವಿ ದರ್ಶನ ಪಡೆದು ಧನ್ಯತೆ ಮೆರೆಯುತ್ತಾರೆ. ಶತಮಾನದ ಹಿಂದೆ ದುಷ್ಟ ಶಕ್ತಿಗಳನ್ನು ನಿಗ್ರಹಿಸಿ ಊರಿನ ಜನರನ್ನು ಕಷ್ಟ ಕೋಟಲೆಗಳಿಂದ ರಕ್ಷಿಸಿದ ದುರ್ಗಿ, ಮಾತೆ ಎನ್ನುವ ಖ್ಯಾತಿಯೂ ಕಾವಲು ಅಮ್ಮನಿಗೆ ಇದೆ. ಗ್ರಾಮದೇವತೆ ಕಾವಲು ಅಮ್ಮ ದೇವಸ್ಥಾನದ ಮುಂಭಾಗ ಪೂರ್ವಕ್ಕೆ ಕನ್ನಂಬಾಡಿ ಅಮ್ಮ ಸನ್ನಿಧಿ ಇದೆ. ಕಾವಲು ಅಮ್ಮ ಮತ್ತು ಕನ್ನಂಬಾಡಿ ಅಮ್ಮ ದೇವತೆಗೆ ಪೂಜೆ ಸಲ್ಲಿಸಿದರೆ ಬದುಕಿನ ಸಂಕಷ್ಟಗಳನ್ನು ಕಳೆದುಕೊಂಡು ಧನ್ಯತೆ ಅನುಭವಿಸಬಹುದು. ಸುಖ ಜೀವನ ನಡೆಸಬಹುದು ಎನ್ನುತ್ತಾರೆ ನಂಬಿದ ಭಕ್ತಜನ. ಹಾಗಾಗಿಯೇ ಅಪಾರ ಭಕ್ತರು ದೇವಸ್ಥಾನದತ್ತ ಮುಖ ಮಾಡುತ್ತಾರೆ.

ಶ್ರೀ ಚಕ್ರ ಪ್ರತಿಷ್ಠಾಪನೆ: ಆದಿಗುರು ಶಂಕರಾಚಾರ್ಯರು ಸುಕ್ಷೇತ್ರಕ್ಕೆ ಭೇಟಿ ನೀಡಿದಾಗ ಮೊದಲಿಗೆ ಗ್ರಾಮದೇವತೆ ಶ್ರೀ ಕಾವಲು ಅಮ್ಮ ದೇವಿಗೆ ಪೂಜೆ ಸಲ್ಲಿಸಿದ್ದರಂತೆ. ತರುವಾಯ ಶತಮಾನಗಳ ಇತಿಹಾಸ ಹೊಂದಿರುವ ಐತಿಹಾಸಿಕ ರಾಮೇಶ್ವರ ದೇವಸ್ಥಾನದ ಇಂದ್ರಾಕ್ಷಿ ಮಂದಿರದ ಮುಂಭಾಗ ಶ್ರೀಚಕ್ರ ಪ್ರತಿಷ್ಠಾಪಿಸಿದರು ಎನ್ನುತ್ತಾರೆ ಹಿರಿಯರು.

ಸುಕ್ಷೇತ್ರದಲ್ಲಿ ಗ್ರಾಮದೇವತೆ ಕಾವಲು ಅಮ್ಮ ದೇವತೆ ಉದ್ಭವ ಮೂರ್ತಿಯಾಗಿ ನೆಲೆ ನಿಂತಿದ್ದಾಳೆ. ದೇವಸ್ಥಾನ ಮುಂಭಾಗ ದುರ್ಗಿ ಸ್ವರೂಪಿಣಿಯಾಗಿ 9 ದುರ್ಗಿಯರ ಮೂರ್ತಿಗಳಿವೆ. ಈ ದೇವಸ್ಥಾನದ ಮುಂಭಾಗವೇ ಕನ್ನಂಬಾಡಿ ಅಮ್ಮನ ಸನ್ನಿಧಿಯೂ ಇದೆ. ಗ್ರಾಮಸ್ಥರು ದೇವಸ್ಥಾನ ಅಭಿವೃದ್ಧಿ ಸಮಿತಿ ರಚಿಸಿಕೊಂಡು ಶಿಥಿಲವಾಗಿದ್ದ ಗುಡಿಯನ್ನು ಭಕ್ತರ ಸಹಕಾರದಿಂದ ದಶಕಗಳ ಹಿಂದೆಯೇ ಜೀರ್ಣೋದ್ಧಾರ ಮಾಡಿದ್ದಾರೆ. ದೇವಸ್ಥಾನದಲ್ಲಿ ನಿತ್ಯ ಪೂಜೆ ನಡೆಯುತ್ತದೆ. ಮಂಗಳವಾರ ಮತ್ತು ಶುಕ್ರವಾರ ವಿಶೇಷ ಪೂಜೆ, ಪುನಸ್ಕಾರಗಳು ನೆರವೇರುತ್ತವೆ. ಜೀವನದ ಕಷ್ಟ ಕೋಟಲೆಗಳ ಪರಿಹಾರಕ್ಕಾಗಿ ಮತ್ತು ಇಷ್ಟಾರ್ಥಗಳ ಈಡೇರಿಕೆಗಾಗಿ ಹರಕೆ ಹೊತ್ತ ಭಕ್ತರು ದೇವಸ್ಥಾನಕ್ಕೆ ಬಂದು ಪೂಜೆ ಸಮರ್ಪಿಸಿ, ಹರಕೆ ಸಲ್ಲಿಸಿ ಹೋಗುತ್ತಾರೆ. ಮಂಗಳವಾರ, ಶುಕ್ರವಾರ ಮಾತ್ರವಲ್ಲದೆ ಭಾನುವಾರ ಕೂಡ ಭಕ್ತರು ಹರಕೆ ಸಲ್ಲಿಸಲು ಭಕ್ತರು ನಾಡಿನ ವಿವಿಧ ಭಾಗಗಳಿಂದ ಬರುತ್ತಾರೆ.

 ಯುಗಾದಿ ಸಂದರ್ಭದಲ್ಲಿ ಅದ್ದೂರಿ ಹಬ್ಬ ಆಚರಣೆ: ಪ್ರತಿವರ್ಷ ಯುಗಾದಿ ಹಬ್ಬದಲ್ಲಿ ಗ್ರಾಮಸ್ಥರೆಲ್ಲರೂ ಒಗ್ಗೂಡಿ ಅದ್ದೂರಿಯಾಗಿ ದೇವಿಯ ಹಬ್ಬ ಆಚರಿಸುತ್ತಾರೆ. ಅಲಂಕೃತ ಮಂಟಪದಲ್ಲಿ ದೇವತಾ ಮೂರ್ತಿ ಪ್ರತಿಷ್ಠಾಪಿಸಿ ಉತ್ಸವ ನಡೆಸುತ್ತಾರೆ. ಭಕ್ತರಿಗೆ ಮಹಾ ಮಂಗಳಾರತಿ, ಪ್ರಸಾದ ವಿನಿಯೋಗ ನಡೆಯುತ್ತದೆ. ಐದು ವರ್ಷಕ್ಕೊಮ್ಮೆ ಗ್ರಾಮದೇವತೆ ಬಂಡಿಹಬ್ಬ ಆಚರಣೆಯೂ ವೈಭವೋಪೇತವಾಗಿ ನಡೆಯುತ್ತದೆ. ರಾಮನಾಥಪುರ ಮಾತ್ರವಲ್ಲದೇ ಶಿರಧನಹಳ್ಳಿ ಗ್ರಾಮದ ಭಕ್ತರು ಹಬ್ಬದ ಆಚರಣೆಯಲ್ಲಿ ಪಾಲ್ಗೊಳ್ಳುತ್ತಾರೆ. ಸಾವಿರಾರು ಜನರು ಅಮ್ಮನಿಗೆ ಪೂಜೆ ಸಲ್ಲಿಸಿ ಭಕ್ತಿ ಪರಾಕಾಷ್ಠೆ ಪ್ರದರ್ಶಿಸುತ್ತಾರೆ.

ರಾಮೇಶ್ವರ, ಅಗಸ್ತ್ಯೇಶ್ವರ ರಥೋತ್ಸವ ಹಾಗೂ ಪ್ರಸನ್ನ ಸುಬ್ರಹ್ಮಣ್ಯಸ್ವಾಮಿ ಜಾತ್ರಾ ಮಹೋತ್ಸವ ಹಾಗೂ ರಥೋತ್ಸವ ವೇಳೆ ಗ್ರಾಮದೇವತೆ ದೇವಸ್ಥಾನದಲ್ಲೂ ವಿಶೇಷ ಪೂಜಾದಿಗಳು ನೆರವೇರುತ್ತವೆ.

ದೇವಸ್ಥಾನ ಮುಂಭಾಗ ವಿಶಾಲ ಆವರಣದಲ್ಲಿ ಅರಳಿ ಮತ್ತು ಕಣಗಲು ಮರವಿದೆ. ಶಾಸಕ ಎ. ಮಂಜು ಊಟದ ಸಭಾಂಗಣ ನಿರ್ಮಿಸಿಕೊಟ್ಟಿದ್ದಾರೆ. ಸ್ಥಳೀಯ ಗ್ರಾಮ ಪಂಚಾಯಿತಿ ವತಿಯಿಂದ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಲಾಗಿದೆ. ಸುಕ್ಷೇತ್ರವು ಕಾವೇರಿ ನದಿ ದಂಡೆ ಮೇಲಿರುವ ಹಲವು ಐತಿಹಾಸಿಕ ದೇವಾಲಯಗಳು ಮಳೆಗಾಲದಲ್ಲಿ ಮುಳುಗುತ್ತವೆ. ಆದರೆ ಊರು ಹೊರ ಭಾಗದಲ್ಲಿ ನೆಲೆ ನಿಂತಿರುವ ಶಕ್ತಿದೇವತೆ ಕಾವಲು ಅಮ್ಮ ದೇವಸ್ಥಾನ ಮಾತ್ರ ಕಾವೇರಿ ನದಿಯ ಯಾವುದೇ ಪ್ರತಾಪಕ್ಕೂ ಒಳಗಾಗುವುದಿಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net