

ಅಳವಂಡಿ: ಸಮೀಪದ ಕವಲೂರು ಸರ್ಕಾರಿ ಮಾದರಿಯ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಗುರುವಾರ ಕೊಠಡಿಯ ಛಾವಣಿ ಸಿಮೆಂಟ್ ಚೂರುಗಳು ಬಿದ್ದು, ಏಳು ಮಕ್ಕಳಿಗೆ ಗಾಯಗಳಾಗಿವೆ. ಮೂರನೇ ತರಗತಿ ಕೊಠಡಿಯಲ್ಲಿ ಏಕಾಏಕಿ ಛಾವಣಿಯ ಸಿಮೆಂಟ್ ಚೂರುಗಳು ಮಕ್ಕಳ ಮೇಲೆ ಉದುರಿವೆ. ನಾಲ್ಕು ಮಕ್ಕಳಿಗೆ ತರಚಿದ ಹಾಗೂ ಇನ್ನು ಮೂವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ತಕ್ಷಣ ಮುಖ್ಯ ಶಿಕ್ಷಕ ಯಲ್ಲಪ್ಪ ನಡುವಿನಮನಿ, ಎಸ್ಡಿಎಂಸಿ ಅಧ್ಯಕ್ಷ ಭೀಮಣ್ಣ ಬಾರಕೇರ ಹಾಗೂ ಮುಖಂಡ ಹೊನಕೇರಪ್ಪ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಿದ್ದಾರೆ. ಯಾರಿಗೂ ಗಂಭೀರ ಗಾಯಗಳಾಗದೆ ಅಪಾಯದಿಂದ ಪಾರಾಗಿದ್ದಾರೆ.