3 ದಶಕದ ಬಳಿಕ ಕವಲಿ ಗಂಗಾಧರಪ್ಪ ಘರ್ ವಾಪಸಿ

30 ಎಸ್ಕೆಪಿ 1 photo 2 ಪಕ್ಷ ಸೇರ್ಪಡೆ
ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಸಮ್ಮುಖದಲ್ಲಿ ಶಿರಾಳಕೊಪ್ಪ ಬ್ಲಾಕ್ ಕಾಂಗ್ರಸ್ ಮಾಜಿ ಅಧ್ಯಕ್ಷ ಕವಲಿ ಗಂಗಾಧರಪ್ಪ ಬಿಜೆಪಿ ಸೇರ್ಪಡೆ. ಅಗಡಿ ಆಶೋಕ್, ತಡಗಣಿ ಮಂಜಣ್ಣ, ಸಣ್ಣ ಹನುಮಂತಪ್ಪ ಇದ್ದರು.
Published on

ಶಿಕಾರಿಪುರ: ಶಿರಾಳಕೊಪ್ಪ ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಕವಲಿ ಗಂಗಾಧರಪ್ಪ ಬರೋಬ್ಬರಿ 3 ದಶಕಗಳ ಬಳಿಕ ಸಂಸದ ಬಿ.ವೈ.ರಾಘವೇಂದ್ರ ಸಮ್ಮುಖದಲ್ಲಿ ಶುಕ್ರವಾರ ರಾತ್ರಿ ಮರಳಿ ಬಿಜೆಪಿ ಸೇರ್ಪಡೆಗೊಂಡಿದ್ದಾರೆ. ಇತ್ತೀಚೆಗಷ್ಟೇ ಅವರನ್ನು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಸಲಾಗಿತ್ತು. ವರಿಷ್ಠರ ಈ ನಡೆಯಿಂದ ಗಂಗಾಧರಪ್ಪ ಬೇಸರಗೊಂಡಿದ್ದರು ಎನ್ನಲಾಗಿದೆ.

33 ವರ್ಷಗಳಿಂದ ಕಾಂಗ್ರಸ್ ಪಕ್ಷದ ನಿಷ್ಠಾವಂತ ಕಾರ್ಯಕರ್ತರಾಗಿ, ಶಿರಾಳಕೊಪ್ಪ ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷರಾಗಿ, ಅಧ್ಯಕ್ಷರಾಗಿ ಕವಲಿ ಗಂಗಾಧರಪ್ಪ ಸೇವೆ ಸಲ್ಲಿಸಿದ್ದರು. ಸಾಧು ಲಿಂಗಾಯತ ಸಮಾಜಕ್ಕೆ ಸೇರಿದ ಅವರು ಈ ಭಾಗದಲ್ಲಿ ಕಾಂಗ್ರೆಸ್ ಪಕ್ಷ ಕಟ್ಟುವಲ್ಲಿ ತಮ್ಮದೇ ಆದಂತಹ ಪಾತ್ರ ವಹಿಸಿದ್ದರು. ಈ ಬಾರಿಯ ವಿಧಾನಸಭಾ ಚುನಾವಣೆ ವೇಳೆ ಗಂಗಾಧರಪ್ಪ ಸಹ ಟಿಕೆಟ್ ಆಕಾಂಕ್ಷಿಯಾಗಿದ್ದರು. ಇತ್ತೀಚಿನ ದಿಢೀರ್ ಬೆಳವಣಿಗೆಯಲ್ಲಿ ಶಿಕಾರಿಪುರ ಹಾಗೂ ಶಿರಾಳಕೊಪ್ಪ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರನ್ನು ಬದಲಿಸಿ ಹೊಸಬರನ್ನು ನೇಮಕ ಮಾಡಲಾಗಿತ್ತು. ಲೋಕಸಭಾ ಚುನಾವಣೆ ಹಿನ್ನೆಲೆಯ ದೃಷ್ಟಿಯಿಂದ ಪಕ್ಷ ಸಂಘಟನೆ ದೃಷ್ಟಿಯಿಂದ ಹೊಸಬರಿಗೆ ಅವಕಾಶ ನೀಡಲಾಗಿದೆ ಎಂದು ಕಾಂಗ್ರೆಸ್ ನಾಯಕರು ಹೇಳಿದ್ದರು.
ನಿಷ್ಠಾವಂತರಿಗೆ ಅವಮಾನ: ಮಧು ಬಂಗಾರಪ್ಪ ಸಚಿವರಾದ ಮೇಲೆ ಶಿಕಾರಿಪುರ ತಾಲೂಕಿನ ಕಾಂಗ್ರೆಸ್ ಮೇಲೆ ಸಹಜವಾಗಿಯೇ ಹಿಡಿತ ಸಾಧಿಸಿದ್ದಾರೆ. ಕೆಲವರನ್ನು ಎತ್ತಿಕಟ್ಟಿ ನಿಷ್ಠಾವಂತ ಕಾರ್ಯಕರ್ತರನ್ನು ಅವಮಾನ ಮಾಡುತ್ತಿದ್ದಾರೆ. ಅವರ ಸರ್ವಾಧಿಕಾರಿ ಧೋರಣೆಯಿಂದ ನಮಗೆ ಬೇಸರವಾಗಿದ್ದು, ಕಾಂಗ್ರೆಸ್ ತೊರೆದು ಬಿಜೆಪಿ ಸೇರ್ಪಡೆಯಾಗಿದ್ದೇನೆ. ನಾನು 1989ರಿಂದ ಕಾಂಗ್ರೆಸ್ ಕಾರ್ಯಕರ್ತನಾಗಿ ಕೆಲಸ ಮಾಡಿದ್ದೇನೆ. ಈ ಮೊದಲು ಬಿಜೆಪಿಯಲ್ಲಿದೇ ಇದ್ದವನು. ಈಗ ಮರಳಿ ಬೇಷರತ್ತಾಗಿ ಮಾತೃಪಕ್ಷಕ್ಕೆ ಹೋಗುತ್ತಿದ್ದೇನೆ. ತಾಲೂಕಿನಲ್ಲಿ ಬಿಜೆಪಿ ಸಂಘಟನೆಯಲ್ಲಿ ನನ್ನನ್ನು ತೊಡಗಿಸಿಕೊಳ್ಳುತ್ತೇನೆ ಎಂದು ಕವಲಿ ಗಂಗಾಧರಪ್ಪ ಪ್ರತಿಕ್ರಿಯಿಸಿದ್ದಾರೆ.
ಪಕ್ಷಕ್ಕೆ ಆನೆಬಲ: ಕವಲಿ ಗಂಗಾಧರಪ್ಪ ಮೊದಲು ನಮ್ಮ ಪಕ್ಷದಲ್ಲೇ ಇದ್ದವರು. ಈಗ ಮರಳಿ ಬಂದಿದ್ದಾರೆ. ಅವರ ಆಗಮನದಿಂದ ಪಕ್ಷಕ್ಕೆ ಹೆಚ್ಚಿನ ಬಲ ಬಂದಿದೆ. ತಾಲೂಕಿನಲ್ಲಿ ಪಕ್ಷ ಸಂಘಟನೆಯಲ್ಲಿ ಅವರೂ ತೊಡಗಿಸಿಕೊಂಡು, ಲೋಕಸಭಾ ಚುನಾವಣೆಯಲ್ಲಿ ಶಿರಾಳಕೊಪ್ಪ ಭಾಗದಲ್ಲಿ ಹೆಚ್ಚು ಮತಗಳು ಬರುವ ನಿಟ್ಟಿನಲ್ಲಿ ಕೆಲಸ ಮಾಡಲಿದ್ದಾರೆ. ಅವರ ಜತೆಗೆ ಸಾಕಷ್ಟು ಕಾರ್ಯಕರ್ತರು ಬಿಜೆಪಿ ಸೇರ್ಪಡೆ ಅಗಲಿದ್ದಾರೆ.ನಮ್ಮೆಲ್ಲರ ಗುರಿಯೊಂದೇ ನರೇಂದ್ರ ಮೋದಿ ಮತ್ತೆ ಪ್ರಧಾನಿ ಆಗಬೇಕು ಎನ್ನುವದು. ಇದು ಇಡೀ ದೇಶವಾಸಿಗಳ ಆಶಯವೂ ಆಗಿದೆ ಎಂದು ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಪ್ರತಿಕ್ರಿಯಿಸಿದ್ದಾರೆ. ಈ ವೇಳೆ ಅಗಡಿ ಆಶೋಕ್, ತಡಗಣಿ ಮಂಜಣ್ಣ, ಸಣ್ಣ ಹನುಮಂತಪ್ಪ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net