

ಚಳ್ಳಕೆರೆ: ಕಾವಾಡಿಗರಹಟ್ಟಿ ಪ್ರಕರಣದಿಂದ ಎಚ್ಚೆತ್ತುಕೊಂಡಿರುವ ತಾಲೂಕು ಪಂಚಾಯಿತಿ ಅಧಿಕಾರಿಗಳು, ಪ್ರತಿ ಗ್ರಾಮಗಳಲ್ಲಿನ ಕುಡಿಯುವ ನೀರಿನ ನಿರ್ವಹಣೆ ಕಾರ್ಯದಲ್ಲಿ ಸ್ವಚ್ಛತೆ ಮತ್ತು ಹೆಚ್ಚಿನ ನಿಗಾ ವಹಿಸಲು ಮುಂದಾಗಿದ್ದಾರೆ.
ಈ ಹಿನ್ನೆಲೆಯಲ್ಲಿ ನನ್ನಿವಾಳ ಗ್ರಾಮ ಪಂಚಾಯಿತಿ ವ್ಯಾಪ್ತಿಯ 33 ಹಟ್ಟಿಗಳಲ್ಲಿನ 18ಕ್ಕೂ ಹೆಚ್ಚು ಕುಡಿಯುವ ನೀರಿನ ತೊಟ್ಟಿಗಳ ಸ್ವಚ್ಛಗೊಳಿಸುವ ಕಾರ್ಯಕ್ಕೆ ಶುಕ್ರವಾರ ಚಾಲನೆ ನೀಡಿದ್ದಾರೆ.
ಮೇಲಧಿಕಾರಿಗಳ ಅಣತಿಯಂತೆ ಕ್ಲೀನಿಂಗ್ ಕಾರ್ಯ ಕೈಗೊಳ್ಳಲಾಗಿದೆ. ಪಿಡಿಒ ಎನ್.ಪಾಲಯ್ಯ ಮಾತನಾಡಿ, ಕುಡಿಯುವ ನೀರಿನ ನಿರ್ವಹಣೆಯಲ್ಲಿ ಹೆಚ್ಚಿನ ನಿಗಾ ವಹಿಸಲಾಗಿದೆ.
ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ 18ಕ್ಕೂ ಹೆಚ್ಚು ಜನ ಮತ್ತು ಜಾನುವಾರುಗಳ ಕುಡಿಯುವ ನೀರಿನ ತೊಟ್ಟಿಗಳ ಸ್ವಚ್ಛತೆಗೆ ಆದ್ಯತೆ ನೀಡಲಾಗಿದೆ ಎಂದರು.
ಮಳೆಗಾಲದಲ್ಲಿ ವಿದ್ಯುತ್ ವ್ಯತ್ಯಯ ಮತ್ತು ನೀರಿನ ಸಂಪರ್ಕ ವ್ಯವಸ್ಥೆಯಲ್ಲಿ ಸಮಸ್ಯೆ ಕಾಣುತ್ತವೆ. ಇದರಿಂದ ಮುಂಜಾಗ್ರತ ಕ್ರಮವಾಗಿ ಯಾವುದೇ ತೊಂದರೆ ಆಗದ ರೀತಿ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.
ಸ್ಥಳೀಯರಾದ ರಾಜಣ್ಣ, ಶಿವಣ್ಣ, ದೊರೆ ನಾಗರಾಜ, ರಾಮಣ್ಣ ಇತರರಿದ್ದರು.