ಕವಾಡಿಗರಹಟ್ಟಿ ಪ್ರಕರಣ ಸಿಬಿಐಗೆ ವಹಿಸಿ

HARIRAM
Published on

ಚಿತ್ರದುರ್ಗ: ಕವಾಡಿಗರಹಟ್ಟಿ ಪ್ರಕರಣವನ್ನು ಉನ್ನತ ತನಿಖೆಗಾಗಿ ರಾಜ್ಯ ಸರ್ಕಾರ ಸಿಬಿಐಗೆ ವಹಿಸಬೇಕು ಎಂದು ಭಾರತೀಯ ಪರಿವರ್ತನಾ ಸಂಘದ ರಾಜ್ಯ ಅಧ್ಯಕ್ಷ ಹರಿರಾಮ್ ಆಗ್ರಹಿಸಿದರು.

ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಪ್ರಕರಣ ಸಂಬಂಧ ಡಿಸಿ ಅವರು ಸ್ಪಷ್ಟ ಕಾರಣ ನೀಡುತ್ತಿಲ್ಲ. ನೀರಿನೊಳಗೆ ವಿಷ ಬೆರೆಸಿದ್ದಾರೆಂದು ಈ ಭಾಗದ ಹಲವರು ಶಂಕೆ ವ್ಯಕ್ತಪಡಿಸಿದ್ದಾರೆ. ಆದರೆ, ಅಧಿಕಾರಿಗಳಿಂದ ಕಾಲರಾ ಎಂಬುದಾಗಿ ಹೇಳಿಕೆಗಳು ಕೇಳಿಬರುತ್ತಿದೆ ಎಂದು ದೂರಿದರು.

ಪ್ರಕರಣ ಸಂಬಂಧ ಈವರೆಗೂ ಎಫ್‌ಐಆರ್ ದಾಖಲಿಸಿಲ್ಲ, ಯಾರನ್ನೂ ಬಂಧಿಸಿಲ್ಲ. ಘಟನೆ ಬಳಿಕ ಈ ಭಾಗದ ನೀರಗಂಟಿ, ನಗರಸಭೆ ಸದಸ್ಯ ಕಾಣೆಯಾಗಿದ್ದು, ಅವರಿಬ್ಬರ ಮೇಲೆ ಅನುಮಾನಗಳು ಹೆಚ್ಚಾಗುತ್ತಿವೆ. ಸಾವು-ನೋವು ಸಂಭವಿಸಿದ್ದರೂ ಸಮಾಜ ಕಲ್ಯಾಣ ಸಚಿವರು ಭೇಟಿ ನೀಡಿಲ್ಲ. ಅಗತ್ಯ ಮೂಲಸೌಕರ್ಯ ನೀಡುವಲ್ಲಿ ಸರ್ಕಾರ ವಿಫಲವಾಗಿದೆ ಎಂದು ಆರೋಪಿಸಿದರು.

ಎಸ್‌ಡಿಪಿಐ ರಾಜ್ಯ ಪ್ರಧಾನ ಕಾರ್ಯದರ್ಶಿ ಭಾಸ್ಕರ್ ಪ್ರಸಾದ್ ಮಾತನಾಡಿ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಎಲ್ಲರೂ ಸಮಾನರೆಂಬ ಮಾತು ಹೇಳಿಕೆಗೆ ಸೀಮಿತವಾಗಿದೆ. ತಾರತಮ್ಯ ಮಾತ್ರ ನಿರಂತರವಾಗಿ ಮುಂದುವರಿದಿದ್ದು, ಈ ಧೋರಣೆ ಬದಲಾಗಬೇಕು. ಮೃತ ಕುಟುಂಬಕ್ಕೆ ತಲಾ 25 ಲಕ್ಷ ರೂ. ಪರಿಹಾರ, ಸರ್ಕಾರಿ ನೌಕರಿ ನೀಡುವ ಮೂಲಕ ಆರ್ಥಿಕ ಶಕ್ತಿ ತುಂಬಬೇಕು ಎಂದು ಒತ್ತಾಯಿಸಿದರು.

ಪ್ರಕರಣ ಸಂಬಂಧ ಸಂಘಟನೆಯಿಂದ ಆ. 22ರಂದು ಜಿಲ್ಲಾಧಿಕಾರಿ ಕಚೇರಿ ಮುಂದೆ ಒಂದು ದಿನ ಧರಣಿ ನಡೆಸಲಾಗುವುದು. ನ್ಯಾಯಯುತ ಬೇಡಿಕೆ 25ರೊಳಗೆ ಈಡೇರದಿದ್ದರೆ ಚಿತ್ರದುರ್ಗದಿಂದ ವಿಧಾನಸೌಧ ಚಲೋ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದರು.

ಕರ್ನಾಟಕ ಭೀಮಾ ಸೇನೆಯ ಅಧ್ಯಕ್ಷ ಶಂಕರ್ ರಾಮಲಿಂಗಯ್ಯ, ಮಹಾನಾಯಕ ದಲಿತ ಸೇನೆ ಅಧ್ಯಕ್ಷ ಮಂಜುನಾಥ್ ಎ.ತಾಳಿಕೆರೆ, ಕಾರ್ಯಾಧ್ಯಕ್ಷ ಶ್ರೀನಿವಾಸ್, ಪ್ರಧಾನ ಕಾರ್ಯದರ್ಶಿ ಹೊಳಿಯಪ್ಪ ಸಖ್ಯಾ, ಮುಖಂಡರಾದ ಮಹೇಶ್, ಬಸವರಾಜು, ಜಗದೀಶ್, ಯಲಪ್ಪ, ಮನು ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net