

ತರೀಕೆರೆ: ತಾಲೂಕಿನ ಎಂ.ಸಿ.ಹಳ್ಳಿ ಗ್ರಾಮದ ಭದ್ರಗಿರಿ ಶ್ರೀ ಶಿವ ಸುಬ್ರಹ್ಮಣ್ಯಸ್ವಾಮಿ ದೇಗುಲದಲ್ಲಿ ಭಾನುವಾರ ಪಂಗುನಿ ಉತ್ತೀರ ತೀರ್ಥ ಕಾವಡಿ ಜಾತ್ರಾ ಮಹೋತ್ಸವ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ಜರುಗಿತು.
ಪ್ರಾತಃಕಾಲ ದೇಗುಲದ ಪ್ರಧಾನ ಅರ್ಚಕ ಮರುಗೇಶ್ ಸ್ವಾಮಿ ನೇತೃತ್ವದಲ್ಲಿ ದೇವರಿಗೆ ಹಾಲು, ತುಪ್ಪ, ಮೊಸರು, ಎಳೆನೀರು, ಜೇನುತುಪ್ಪ ಸೇರಿ ಸುಗಂಧ ದ್ರವ್ಯಗಳಿಂದ ಅಭಿಷೇಕ ನೆರವೇರಿಸಿ ವಿಶೇಷ ಪೂಜೆ ಸಲ್ಲಿಸಲಾಯಿತು.
ಬೆಳಗ್ಗೆ 6ರಿಂದ ಮಧ್ಯಾಹ್ನ 1ರವರೆಗೆ ತಮಿಳುನಾಡು, ತಾಮ್ರಭರಣಿ, ಕೂಡಲಿ, ಲಕ್ಕವಳ್ಳಿ, ಶಾಂತಿನಗರ, ಕೃಷ್ಣಾಪುರ, ಕಲ್ಲತ್ತಿಗಿರಿ, ಬಳ್ಳಾವರ ಮತ್ತಿತರ ಕಡೆಗಳಿಂದ ತೀರ್ಥ ಕಾವಡಿ ಹೊತ್ತು ಬಂದ 1,200ಕ್ಕೂ ಹೆಚ್ಚು ಭಕ್ತರು ಶ್ರೀ ಶಿವ ಸುಬ್ರಹ್ಮಣ್ಯಸ್ವಾಮಿಗೆ ಪುಣ್ಯ ತೀರ್ಥದ ಅಭಿಷೇಕ ಮಾಡುವ ಮೂಲಕ ಧನ್ಯತಾ ಭಾವ ಮೆರೆದರು.
ಮಧ್ಯಾಹ್ನ 1ಕ್ಕೆ ದೇಗುಲದಲ್ಲಿ ವಳ್ಳಿ ದೇವಯಾನಿ ಸಮೇತ ಪ್ರತಿಷ್ಠಾಪನೆಯಾಗಿರುವ ಶ್ರೀ ಶಿವ ಸುಬ್ರಹ್ಮಣ್ಯಸ್ವಾಮಿಯ ಮೂಲ ದೇವರಿಗೆ ಬಂಗಾರದ ಕವಚ ಅಲಂಕರಿಸಿ, ಮಹಾ ಮಂಗಳಾರತಿ ನೆರವೇರಿಸಲಾಯಿತು.
ಸೇಲಂ, ಕೊಯಮುತ್ತೂರು, ಕಾಂಗೇಯಂ, ತಿರುಪೂರ್, ಕರೂರ್, ಚಿಕ್ಕಮಗಳೂರು, ಶಿವಮೊಗ್ಗ, ಲಿಂಗದಹಳ್ಳಿ, ತರೀಕೆರೆ, ಭದ್ರಾವತಿ, ಲಕ್ಕವಳ್ಳಿ, ಎಂ.ಸಿ.ಹಳ್ಳಿ, ತಮಿಳುನಾಡು, ಬಳ್ಳಾವರ, ಕೃಷ್ಣಾಪುರ ಸೇರಿ ವಿವಿಧೆಡೆಯಿಂದ ಆಗಮಿಸಿದ್ದ ಸಹಸ್ರಾರು ಭಕ್ತರು ದೇವರ ದರ್ಶನ ಪಡೆದು ತೀರ್ಥ ಪ್ರಸಾದ ಸ್ವೀಕರಿಸಿದರು. ಪಂಗುನಿ ಉತ್ತೀರ ತೀರ್ಥ ಕಾವಡಿ ಜಾತ್ರಾ ಮಹೋತ್ಸಕ್ಕೆ ಆಗಮಿಸಿದ್ದ ಸರ್ವ ಭಕ್ತರಿಗೆ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು.
ದೇಗುಲ ಆಡಳಿತ ಮಂಡಳಿ ಅಧ್ಯಕ್ಷ ಎ.ಚಂದ್ರಘೋಷನ್, ಪ್ರಮುಖರಾದ ಬೊಮ್ಮರಾಜನ್, ತಿರುಮೂರ್ತಿ, ಸೋಮು, ಮಂಜುನಾಥ್, ವೇಲು, ಮೂರ್ತಿ, ಡಾ.ವಿಕ್ರಂ ಮತ್ತಿತರರಿದ್ದರು.