

ಬೆಂಗಳೂರು: ಗುಣಮಟ್ಟದ ಚಿಕಿತ್ಸೆ ಹಾಗೂ ಆರೈಕೆಗಾಗಿ ಆರೋಗ್ಯ ಕ್ಷೇತ್ರದಲ್ಲಿ ತಂತ್ರಜ್ಞಾನ ಬಳಕೆಯಿಂದ ಅನುಕೂವಾಗಲಿದೆ ಎಂದು ನಿವೃತ್ತ ನ್ಯಾ. ಎನ್. ಸಂತೋಷ ಹೆಗ್ಡೆ ಅಭಿಪ್ರಾಯಪಟ್ಟರು.
ನಗರದ ಖಾಸಗಿ ಹೊಟೇಲ್ನಲ್ಲಿ ಬುಧವಾರ ನಡೆದ ಕಾರ್ಯಕ್ರಮದಲ್ಲಿ ನಗರದ ಕಾವೇರಿ ಆಸ್ಪತ್ರೆಯಲ್ಲಿ ಆರಂಭವಾಗಿರುವ ದೇಶದ ಮೊದಲ ಕೃತಕ ಬುದ್ಧಿಮತ್ತೆ (ಎಐ) ಆಧಾರಿತ ಜೀವನಶೈಲಿ ರೋಗಗಳ ಚಿಕಿತ್ಸಾ ವಿಭಾಗ ಉದ್ಘಾಟಿಸಿ ಅವರು ಮಾತನಾಡಿದರು.
ದೇಶದಲ್ಲಿ ವೈಯಕ್ತಿಕ ಆರೋಗ್ಯ ಆರೈಕೆ, ಚಿಕಿತ್ಸೆ ಮತ್ತು ಪರಿಹಾರಗಳ ಅಗತ್ಯತೆ ಹೆಚ್ಚುತ್ತಿದ್ದು, ಇಂತಹ ಸಂದರ್ಭದಲ್ಲಿ ಕಾವೇರಿ ಆಸ್ಪತ್ರೆಯು ಎಐ ಆಧಾರಿತ ಜೀವನಶೈಲಿ ರೋಗಗಳು ವಿಭಾಗ ಆರಂಭಿಸಿರುವುದು ಆರೋಗ್ಯ ಕ್ಷೇತ್ರದಲ್ಲಿ ಮಹತ್ವದ ಹೆಜ್ಜೆಯಾಗಿದೆ. ಇದರಿಂದ ಆರೋಗ್ಯ ಸೇವೆಯಲ್ಲಿನ ಮತ್ತಷ್ಟು ಸುಧಾರಣೆಗೆ ಅನುಕೂಲವಾಗಲಿದೆ ಎಂದರು.
ಕಾವೇರಿ ಸಮೂಹ ಆಸ್ಪತ್ರೆಯ ಸಂಸ್ಥಾಪಕ ಡಾ. ಎಸ್. ಚಂದ್ರಕುಮಾರ್ ಮಾತನಾಡಿ, ಭಾರತೀಯ ವೈದ್ಯಕೀಯ ಸಂಶೋಧನಾ ಪರಿಷತ್ತು (ಐಸಿಎಂಆರ್)ನ ಇತ್ತೀಚಿನ ವರದಿ ಪ್ರಕಾರ, ಭಾರತದಲ್ಲಿ ಮಧುಮೇಹ, ಹೃದಯ ಸಮಸ್ಯೆ, ಶ್ವಾಸಕೋಶ ಸಮಸ್ಯೆಗಳು ಶೇ. 60 ಅಧಿಕ ಸಾವುಗಳಿಗೆ ಕಾರಣವಾಗುತ್ತಿವೆ. ರೋಗ ನಿಯಂತ್ರಣ, ಆರೈಕೆ ಸೇವಾ ವ್ಯವಸ್ಥೆಗಳ ಲಭ್ಯತೆ ಸೀಮಿತವಾಗಿದ್ದು, ಕೇವಲ ಶೇ. 10 ಮಂದಿ ಮಾತ್ರ ರೋಗ ಬರುವ ಮುನ್ನ ತಪಾಸಣೆ ಮಾಡಿಸಿಕೊಳ್ಳುತ್ತಿದ್ದಾರೆ ಅಥವಾ ಆರಂಭದಲ್ಲೇ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ನಿಟ್ಟಿನಲ್ಲಿ ಜನರಿಗೆ ಜೀವನಶೈಲಿ ಆಧಾರಿತ ಕಾಯಿಲೆಗಳ ತಪಾಸಣೆ ಮತ್ತು ಚಿಕಿತ್ಸೆಯ ಕುರಿತು ಅರಿವಿನ ಅಗತ್ಯವಿದ ಎಂದು ಹೇಳಿದರು.
ಕಾವೇರಿ ಆಸ್ಪತ್ರೆಯಲ್ಲಿ ಆರಂಭವಾಗಿರುವ ಎಐ ಆಧಾರಿತ ಹೊಸ ವಿಭಾಗದಲ್ಲಿ ಜೀವನಶೈಲಿ ಆಧಾರದ ಮೇಲೆ ಆರಂಭದ ಹಂತದಲ್ಲೇ ಸಮಗ್ರ ರೋಗ ಪತ್ತೆ ಮತ್ತು ಚಿಕಿತ್ಸೆ ಒದಗಿಸಲಾಗುವುದು. ಜೀವನ ಶೈಲಿಯಿಂದ ಯಾವ ರೀತಿಯ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳಬಹುದು, ಅವುಗಳನ್ನು ನಿಯಂತ್ರಿಸುವುದು ಮತ್ತು ಪುನಃ ಬಾರದಂತೆ ತಡೆಯುವುದು ಬಹು ಮುಖ್ಯವಾಗಿದೆ. ಇದಕ್ಕೆ ಪೂರಕವಾಗಿ ಈ ನೂತನ ವಿಭಾಗದಲ್ಲಿ ಚಿಕಿತ್ಸೆ ದೊರೆಯಲಿದೆ ಎಂದರು.
ಕಾವೇರಿ ಆಸ್ಪತ್ರೆಯ ಕಾರ್ಯನಿರ್ವಾಹಕ ನಿರ್ದೇಶಕ ಡಾ. ಎಸ್. ವಿಜಯಭಾಸ್ಕರ್, ಜೀವನ ಶೈಲಿ ರೋಗಗಳು ವಿಭಾಗದ ಮುಖ್ಯಸ್ಥ ಡಾ. ರಾಜಕುಮಾರ್ ಚನ್ನಬಸವಯ್ಯ, ನೆಫ್ರೋಲಜಿ ವಿಭಾಗದ ನಿರ್ದೇಶಕ ಡಾ. ರಾಮ್ ಮೋಹನ್ ಭಟ್ ಇತರರು ಇದ್ದರು.