ಕೌಟಿಲ್ಯನ ಅರ್ಥಶಾಸ್ತ್ರ ಸಾರ್ವಕಾಲಿಕ ಮಹತ್ವದ್ದು

1kmt1_Havyaka
Published on

ಕುಮಟಾ: ಅಂಗವಿಕಲರು, ರೋಗಿಗಳು, ವಯೋವೃದ್ಧರು, ಸ್ತ್ರೀ ಮತ್ತು ಬ್ರಾಹ್ಮಣರು ದುರ್ಬಲ ವರ್ಗದವರಾಗಿದ್ದು, ಇವರನ್ನೆಲ್ಲ ಒಳಗೊಂಡೇ ದೇಶ ಪ್ರಗತಿ ಸಾಧಿಸಬೇಕು ಎಂದು ಕೌಟಿಲ್ಯನ ಅರ್ಥಶಾಸ್ತ್ರದಲ್ಲಿ ನಿರ್ದೇಶಿಸಿದೆ. ಕೌಟಿಲ್ಯನ ಅರ್ಥಶಾಸ್ತ್ರವು ಸಾರ್ವಕಾಲಿಕ ಮಹತ್ವ ಉಳ್ಳದ್ದಾಗಿದೆ ಎಂದು ಆರ್ಥಿಕ ತಜ್ಞ ಡಾ. ಜಿ.ವಿ.ಜೋಶಿ ಹೇಳಿದರು.

ಹವ್ಯಕ ಸಭಾಮಂಟಪದಲ್ಲಿ ಹವ್ಯಕ ವಿದ್ಯಾವರ್ಧಕ ಸಂಘದಿಂದ ಆಯೋಜಿಸಿದ್ದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಉದ್ಘಾಟಿಸಿ ಕೌಟಿಲ್ಯನ ಅರ್ಥಶಾಸ್ತ್ರದಲ್ಲಿ ಒಳಗೊಳ್ಳುವಿಕೆಯ ಅಭಿವೃದ್ಧಿ - ಒಂದು ಪರಿಕಲ್ಪನೆ ಎಂಬ ವಿಷಯದ ಮೇಲೆ ಉಪನ್ಯಾಸ ನೀಡಿದರು.

ರಾಜ, ಅಮಾತ್ಯ, ಕೋಟೆ, ಕೋಶ, ಜನಪದ ಸೈನ್ಯ ಮತ್ತು ಮಿತ್ರ ಇವು ರಾಜ್ಯದ ಏಳು ಘಟಕಗಳಾಗಿದೆ ಎಂದು ತನ್ನ ಸಪ್ತಾಂಗ ಸಿದ್ಧಾಂತದಲ್ಲಿ ಸಾರಿರುವ ಕೌಟಿಲ್ಯ, ಪ್ರಗತಿಯು ಈ ಎಲ್ಲವನ್ನೂ ಒಳಗೊಂಡು ನಡೆಯುತ್ತದೆ ಎಂಬುದನ್ನು ಇಂದಿನ ಕಾಲಘಟ್ಟಕ್ಕೂ ಸರಳವಾಗಿ ಅನ್ವಯಿಸಬಹುದಾಗಿದೆ ಎಂದು ವಿವರಿಸಿದರು.

ಅಧ್ಯಕ್ಷ ಚಂದ್ರಶೇಖರ ಉಪಾಧ್ಯಾಯ ಮಾತನಾಡಿ, ಜೀವನದಲ್ಲಿ ಎಷ್ಟೇ ಎತ್ತರದ ಸಾಧನೆ ಮಾಡಿ ಯಶಸ್ವಿಯಾಗಿದ್ದರೂ ತಂದೆ, ತಾಯಿ, ಕುಟುಂಬ ಹಾಗೂ ಸಮಾಜವನ್ನು ಮರೆಯಬಾರದು. ಸಮಾಜದ ಋಣವನ್ನು ಪ್ರತಿಯೊಬ್ಬರೂ ತೀರಿಸಬೇಕು ಎಂದರು.

ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಶೇ. 90ಕ್ಕಿಂತ ಅಧಿಕ ಅಂಕಗಳಿಸಿದ ತಾಲೂಕಿನ ಹವ್ಯಕ ಸಾಧಕ ವಿದ್ಯಾರ್ಥಿಗಳನ್ನು ಪುರಸ್ಕರಿಸಿ ಪ್ರೋತ್ಸಾಹಿಸಲಾಯಿತು. ಕಾರ್ಯದರ್ಶಿ ಮಧು ಹೆಗಡೆ ಕಾರ್ಯಕ್ರಮ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net