ಮೈಸೂರಿನಲ್ಲಿದೆ ಕೌಟಿಲ್ಯನ ಅರ್ಥಶಾಸ್ತ್ರ

Kautilya's Arthashastra
Published on

ಸದೇಶ್ ಕಾರ್ಮಾಡ್ ಮೈಸೂರು

ಮೌರ್ಯ ಸಾಮ್ರಾಜ್ಯ ಸ್ಥಾಪನೆಯಲ್ಲಿ ಮಹತ್ವದ ಪಾತ್ರ ವಹಿಸಿದ ಚಾಣಕ್ಯ (ಕೌಟಿಲ್ಯ)ನ ಹೆಸರು ಕೇಳದವರೇ ಅಪರೂಪ. ಚಾಣಕ್ಯನ ನೀತಿಯು ಹಲವರಿಗೆ ಇಂದಿಗೂ ಸ್ಫೂರ್ತಿದಾಯಕ. ಇಂತಹ ಮೇರು ವ್ಯಕ್ತಿತ್ವದ ಕೌಟಿಲ್ಯ ರಚಿಸಿದ ಅರ್ಥಶಾಸ್ತ್ರದ ಮೂಲ ಪ್ರತಿ ಇರುವುದು ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ.

ಮೈಸೂರಿನ ಓರಿಯೆಂಟಲ್ ರಿಸರ್ಚ್ ಇನ್‌ಸ್ಟಿಟ್ಯೂಟ್‌ಗೆ ಭೇಟಿ ನೀಡಿದರೆ ಗ್ರಂಥ ಲಿಪಿಯಲ್ಲಿರುವ ಕೌಟಿಲ್ಯನ ಅರ್ಥಶಾಸ್ತ್ರದ ಮೂಲ ಪ್ರತಿಯನ್ನು ಕಾಣಬಹುದು. ಓರಿಯೆಂಟಲ್ ರಿಸರ್ಚ್ ಇನ್‌ಸ್ಟಿಟ್ಯೂಟ್ ಒಂದು ಶತಮಾನದಿಂದ ಅತ್ಯಂತ ಜತನದಿಂದ ಕೌಟಿಲ್ಯನ ಅರ್ಥಶಾಸ್ತ್ರವನ್ನು ಕಾಪಾಡಿಕೊಂಡು ಬರುತ್ತಿದೆ. ಕ್ರಿ.ಪೂ. 4ನೇ ಶತಮಾನದ ‘ಗ್ರಂಥ’ ಲಿಪಿಯಲ್ಲಿರುವ ಕೌಟಿಲ್ಯನ ಅರ್ಥಶಾಸ್ತ್ರ ಒಟ್ಟು 168 ತಾಳೆಗರಿಗಳನ್ನು ಹೊಂದಿದೆ. ಈ ತಾಳೆಗರಿ ಗ್ರಂಥವು ಒಟ್ಟು 37 ಸೆಂಟಿಮೀಟರ್ ಉದ್ದ, 5 ಸೆಂಟಿಮೀಟರ್ ಅಗಲವನ್ನು ಹೊಂದಿದೆ. ಒಂದು ಪುಟದಲ್ಲಿ 12 ಸಾಲುಗಳು, 1 ಸಾಲಿನಲ್ಲಿ 50 ಅಕ್ಷರಗಳು ಇವೆ.

ಕೌಟಿಲ್ಯನ ಅರ್ಥಶಾಸ್ತ್ರದಲ್ಲಿ ರಾಜಕುಮಾರನನ್ನು ಹೇಗೆ ಬೆಳೆಸಬೇಕು, ಅವರ ವಿದ್ಯಾಭ್ಯಾಸ ಹೇಗಾಗಬೇಕು, ರಾಯಭಾರಿಗಳ ಆಯ್ಕೆಯನ್ನು ಯಾವ ರೀತಿ ಮಾಡಬೇಕು, ಗೂಢಚಾರರನ್ನು ಹೇಗೆ ಉಪಯೋಗಿಸಿಕೊಳ್ಳಬೇಕು, ರಾಜನಿಗೆ ಅಪಾಯ ಒದಗದ ಹಾಗೆ ರಕ್ಷಣೆ ಯಾವ ರೀತಿ ನೀಡಬೇಕು, ಕಾನೂನು ಹಾಗೂ ರಕ್ಷಣಾ ಕಾರ್ಯ, ಶ್ರೀಮಂತರನ್ನು ಹೇಗೆ ಅಧೀನದಲ್ಲಿ ಇಟ್ಟುಕೊಳ್ಳಬೇಕು ಹಾಗೂ ಅವರು ದಾನ ಮಾಡುವಂತೆ ಹೇಗೆ ಪ್ರಚೋದಿಸಬೇಕು, ಯುದ್ಧವನ್ನು ಯಾವ ರೀತಿ ತಪ್ಪಿಸಬೇಕು ಸೇರಿದಂತೆ ಹಲವಾರು ವಿಷಯಗಳ ಕುರಿತು ಬೆಳಕು ಚೆಲ್ಲಲಾಗಿದೆ.

ಕೌಟಿಲ್ಯನ ಅರ್ಥಶಾಸ್ತ್ರದ ಕುರಿತು ಎಲ್ಲರಿಗೂ ಮಾಹಿತಿ ಇದ್ದರೂ 1905ರವರೆಗೆ ಈ ಗ್ರಂಥ ಎಲ್ಲಿದೆ ಎಂಬ ಮಾಹಿತಿ ಯಾರಿಗೂ ತಿಳಿದಿರಲಿಲ್ಲ. ತಮಿಳುನಾಡಿನ ವ್ಯಕ್ತಿಯೊಬ್ಬರ ಬಳಿಯಲ್ಲಿ ಗ್ರಂಥ ಲಿಪಿಯಲ್ಲಿ ರಚನೆಯಾದ ಕೌಟಿಲ್ಯನ ಅರ್ಥಶಾಸ್ತ್ರ ಇತ್ತು. ಈ ಗ್ರಂಥವನ್ನು 1905ರಲ್ಲಿ ತಮಿಳುನಾಡಿನ ವ್ಯಕ್ತಿಯು ಮೈಸೂರಿನ ಓರಿಯೆಂಟಲ್ ರಿಸರ್ಚ್ ಲೈಬ್ರರಿಯ ಗ್ರಂಥಪಾಲಕರು ಹಾಗೂ ಸಂಸ್ಕೃತ ವಿದ್ವಾಂಸರಾಗಿದ್ದ ರುದ್ರಪಟ್ಟಣ ಶಾಮಶಾಸ್ತ್ರಿ ಅವರಿಗೆ ನೀಡಿದ್ದರು. ಅಂದಿನಿಂದ ಇಂದಿನವರೆಗೆ ಬೆಲೆಕಟ್ಟಲು ಸಾಧ್ಯವಾಗದಂತಹ ಈ ಅಮೂಲ್ಯ ಗ್ರಂಥ ಮೈಸೂರಿನಲ್ಲಿ ಇದ್ದು, ಇದು ಮೈಸೂರಿಗೆ ಹಾಗೂ ರಾಜ್ಯಕ್ಕೆ ಒಂದು ಹಿರಿಮೆಯಾಗಿದೆ.

ಕೌಟಿಲ್ಯನ ಅರ್ಥಶಾಸ್ತ್ರ ಪಡೆದ ಶಾಮಶಾಸ್ತ್ರಿ ಅವರು ಅರ್ಥಶಾಸ್ತ್ರವನ್ನು ಹೊಸ ತಾಳೆಗರಿಗಳ ಮೇಲೆ ಲಿಪ್ಯಂತರ ಮಾಡಿ 1909ರಲ್ಲಿ ಪ್ರಕಟಿಸಿದರು. ನಂತರ ಆ ಕೃತಿಯನ್ನು 1915ರಲ್ಲಿ ಇಂಗ್ಲಿಷ್‌ಗೆ ಅನುವಾದಿಸಿದರು. ಶಾಮಶಾಸ್ತ್ರಿ ಅವರ ಪರಿಶ್ರಮದ ಫಲವಾಗಿ ಕೌಟಿಲ್ಯನ ಅರ್ಥಶಾಸ್ತ್ರ ದೇಶ, ವಿದೇಶಗಳಿಗೆ ತಲುಪಿ ದೇಶದ ಹಿರಿಮೆಯೂ ಹೆಚ್ಚಾಯಿತು.

90ರ ದಶಕದಲ್ಲಿ ಮೈಸೂರಿನ ಮಹಾರಾಜರು ಜರ್ಮನಿಗೆ ಪ್ರಯಾಣ ಬೆಳೆಸಿದಾಗ ಜರ್ಮನಿಯ ರಾಜರನ್ನು ಭೇಟಿಯಾದರು. ಮೈಸೂರಿನ ಮಹಾರಾಜ ಎಂದು ಪರಿಚಯಿಸಿಕೊಂಡಾಗ ‘ನೀವು ಶಾಮಶಾಸ್ತ್ರಿಗಳ ನಾಡಿನಿಂದ ಬಂದಿದ್ದೀರ’ ಎಂದು ಕೇಳಿದ್ದರು. ಕೌಟಿಲ್ಯನ ಅರ್ಥಶಾಸ್ತ್ರ ಹಾಗೂ ಶಾಮಾಶಾಸ್ತ್ರಿ ಹೆಸರು ವಿಶ್ವವಿಖ್ಯಾತಿ ಹೊಂದಿತ್ತು ಎಂಬುದಕ್ಕೆ ಇದು ನಿದರ್ಶನವಾಗಿದೆ.

ಮೋದಿಯಿಂದ ವೀಕ್ಷಣೆ: ದೇಶದ ಶ್ರೀಮಂತ ಹಸ್ತಪ್ರತಿ ಪರಂಪರೆ ಕುರಿತು ನವದೆಹಲಿಯಲ್ಲಿ ಇತ್ತೀಚೆಗೆ ‘ಜ್ಞಾನ ಭಾರತಂ’ ಅಂತಾರಾ ಷ್ಟ್ರೀಯ ಸಮ್ಮೇಳನ ಆಯೋಜಿಸಲಾಗಿತ್ತು. ಪ್ರಧಾನಿ ನರೇಂದ್ರ ಮೋದಿ ಸಮ್ಮೇಳನದಲ್ಲಿ ಭಾಗವಹಿಸಿ ಮೈಸೂರಿನ ಓರಿಯೆಂಟಲ್ ರಿಸರ್ಚ್ ಇನ್‌ಸ್ಟಿಟ್ಯೂಟ್ ಪ್ರದರ್ಶಿಸಿದ ಕೌಟಿಲ್ಯನ ಅರ್ಥಶಾಸ್ತ್ರದ ಹಸ್ತಪ್ರತಿಯನ್ನು ಕುತೂಹಲದಿಂದ ವೀಕ್ಷಿಸಿದ್ದರು.

1891ರಲ್ಲಿ ಮೈಸೂರು ರಾಜರಿಂದ ಸ್ಥಾಪಿಸಲ್ಪಟ್ಟ ಓರಿಯೆಂಟಲ್ ರಿಸರ್ಚ್ ಲೈಬ್ರರಿ, ನಂತರ ಸರ್ಕಾರದ ನೆರವಿನಿಂದ ಓರಿಯೆಂಟಲ್ ರಿಸರ್ಚ್ ಇನ್‌ಸ್ಟಿಟ್ಯೂಟ್ ಆಗಿ ಬದಲಾಯಿತು. ಈ ಸಂಸ್ಥೆ 70,000ಕ್ಕೂ ಹೆಚ್ಚು ಅಪರೂಪದ ಹಸ್ತಪ್ರತಿಗಳ ಸಂಗ್ರಹವನ್ನು ಹೊಂದಿದೆ. ವೈದಿಕ ಔಷಧ, ಅರ್ಥಶಾಸ್ತ್ರ ಮತ್ತು ರಾಜಕೀಯ ಹೀಗೆ ಹಲವು ವಿಷಯಗಳ ಕುರಿತು ಪ್ರಾಚೀನ ಪಠ್ಯಗಳನ್ನು ಹೊಂದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net