

ಹಾವೇರಿ: ಸಚಿವ ಸ್ಥಾನ ಸಿಗದಿದ್ದಕ್ಕೆ ನೇರವಾಗಿ ಸಿಎಂ ಬಸವರಾಜ ಬೊಮ್ಮಾಯಿ ವಿರುದ್ಧವೇ ಆಕ್ರೋಶ ವ್ಯಕ್ತಪಡಿಸಿದ್ದ ಶಾಸಕ ನೆಹರು ಓಲೇಕಾರ ಇದೀಗ ಶಾಂತರಾಗಿದ್ದಾರೆ. ಓಲೇಕಾರ ಅವರ ನಿವಾಸಕ್ಕೆ ಶುಕ್ರವಾರ ಬೆಳಗ್ಗೆ ಭೇಟಿ ನೀಡಿದ ಸಚಿವ ಬಿ.ಸಿ. ಪಾಟೀಲ ಅಸಮಾಧಾನವನ್ನು ಸರಿಪಡಿಸುವಲ್ಲಿ ಯಶಸ್ವಿಯಾಗಿದ್ದಾರೆ.
2ನೇ ಬಾರಿಗೆ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ ನಂತರ ಸಿಎಂ ಸೂಚನೆ ಮೇರೆಗೆ ಜಿಲ್ಲೆಯ ನೆರೆ ಹಾಗೂ ಕೋವಿಡ್ ಉಸ್ತುವಾರಿ ವಹಿಸಿಕೊಂಡಿರುವ ಸಚಿವ ಬಿ.ಸಿ. ಪಾಟೀಲ ಅವರು ಶುಕ್ರವಾರ ಅಧಿಕಾರಿಗಳೊಂದಿಗೆ ಸಭೆ ನಡೆಸಲು ನಿರ್ಧರಿಸಿದ್ದರು. ಸಭೆಗೂ ಮುನ್ನ ಶಾಸಕ ನೆಹರು ಓಲೇಕಾರ ನಿವಾಸಕ್ಕೆ ತೆರಳಿ ಅವರೊಂದಿಗೆ ರ್ಚಚಿಸಿದರು.
ಬೊಮ್ಮಾಯಿ ಸಂಪುಟದಲ್ಲಿ ಸ್ಥಾನ ಸಿಗದಿದ್ದರಿಂದ ಓಲೇಕಾರ ತೀವ್ರ ಅಸಮಾಧಾನಗೊಂಡಿದ್ದರು. ‘ನನಗೆ ಸಚಿವ ಸ್ಥಾನ ಸಿಗದಿರಲು ಮುಖ್ಯಮಂತ್ರಿಗಳೇ ಕಾರಣ. ಸಚಿವ ಸ್ಥಾನ ಸಿಗದ ಅತೃಪ್ತ ಶಾಸಕರೊಂದಿಗೆ ಸಂಪರ್ಕದಲ್ಲಿದ್ದೇನೆ. ಮುಂದೆ ಏನು ಮಾಡಬೇಕು ಎಂಬ ಚರ್ಚೆ ನಡೆಯುತ್ತಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದ್ದರು. ಅಲ್ಲದೆ, ಸಿಎಂಗೆ ಅಸಹಕಾರ ನೀಡುವುದಾಗಿ ಘೊಷಿಸಿದ್ದರು. ಸಿಎಂ ಸ್ವಂತ ಜಿಲ್ಲೆಯ ಶಾಸಕರೇ ಈ ರೀತಿ ಅಸಮಾಧಾನ ಹೊರಹಾಕಿದ್ದರಿಂದ ಇದು ಸದ್ದು ಮಾಡಿತ್ತು. ಹೀಗಾಗಿ, ಓಲೇಕಾರ ಅವರನ್ನು ಸಮಾಧಾನಿಸುವುದು ರಾಜಕೀಯವಾಗಿ ಬಹುಮುಖ್ಯವಾಗಿತ್ತು. ಈ ಹೊಣೆಯನ್ನು ಸಿಎಂ ಬಸವರಾಜ ಬೊಮ್ಮಾಯಿ ಅವರು ಸಚಿವ ಬಿ.ಸಿ. ಪಾಟೀಲರ ಅವರ ಹೆಗಲಿಗೆ ಹಾಕಿದ್ದರು. ಹೀಗಾಗಿ, ಶುಕ್ರವಾರ ಬೆಳಗ್ಗೆ ಶಾಸಕ ಓಲೇಕಾರ ಅವರ ನಿವಾಸಕ್ಕೆ ತೆರಳಿದರು.
ಸಚಿವರನ್ನು ಹರ್ಷದಿಂದ ಬರಮಾಡಿಕೊಂಡ ಓಲೇಕಾರ, ನಂತರ ಮನೆಯಲ್ಲಿ ಗೌಪ್ಯವಾಗಿ ರ್ಚಚಿಸಿದರು. ಮುಖ್ಯಮಂತ್ರಿಗಳು ನೀಡಿದ ಸಂದೇಶವನ್ನು ಓಲೇಕಾರ ಅವರಿಗೆ ತಿಳಿಸಿದ್ದಲ್ಲದೆ ದೂರವಾಣಿ ಕರೆ ಮಾಡಿ ಸಿಎಂ ಬೊಮ್ಮಾಯಿ ಅವರೊಂದಿಗೆ ಮಾತನಾಡಿಸಿದ್ದಾರೆ. ಆದರೂ ಸಮಾಧಾನಗೊಳ್ಳದ ಓಲೇಕಾರ, ‘ನಾನು ಹಿರಿಯನಿದ್ದೇನೆ. ಬೊಮ್ಮಾಯಿ ಅವರೊಂದಿಗೆ ಸದಾ ಕೈಜೋಡಿಸಿದ್ದೆ. ಆದರೂ ನನ್ನನ್ನು ಪರಿಗಣಿಸದಿರುವುದು ಬೇಸರವಾಗಿದೆ. ನಿಮಗೆ ಅವಕಾಶ ಸಿಕ್ಕಿದೆ. ನೀವು ಕೆಲಸ ಮಾಡಿ’ ಎಂದು ಹೇಳಿದ್ದಾರೆ. ಆದರೂ ಪಟ್ಟು ಬಿಡದ ಬಿ.ಸಿ. ಪಾಟೀಲರು ಓಲೇಕಾರ ಅವರ ಬಂಡಾಯ ಥಂಡಾಗೊಳಿಸಲು ಯಶಸ್ವಿಯಾದರು.
ಸಚಿವರ ಸಂಧಾನದಿಂದ ಸಮಾಧಾನಗೊಂಡ ಶಾಸಕ ನೆಹರು ಓಲೇಕಾರ, ಸಚಿವರೊಂದಿಗೆ ಕೋವಿಡ್, ಪ್ರಗತಿ ಪರಿಶೀಲನೆ ಸಭೆಗೆ ಹಾಗೂ ಜಿಲ್ಲಾ ಬಿಜೆಪಿ ಕಚೇರಿಗೆ ಬಂದರು.
ಸಚಿವ ಬಿ.ಸಿ. ಪಾಟೀಲರು ಮನೆಗೆ ಬಂದು ಸಿಎಂ ಜತೆಗೆ ದೂರವಾಣಿಯಲ್ಲಿ ಮಾತನಾಡಿಸಿದರು. ಸಚಿವ ಸ್ಥಾನ ನೀಡುವಲ್ಲಿ ನಿಮಗೆ ಅನ್ಯಾಯವಾಗಿದೆ ಎಂದು ಸಿಎಂ ಹೇಳಿದರು. ಮುಂದಿನ ವಿಸ್ತರಣೆ ವೇಳೆ ಅವಕಾಶ ಕಲ್ಪಿಸುತ್ತೇವೆ. ಈಗ ಸಹಕಾರ ನೀಡಿ ಎಂದು ತಿಳಿಸಿದ್ದಾರೆ. ಅದಕ್ಕೆ ನಾನು ಸಮ್ಮತಿಸಿದ್ದೇನೆ. ಸಿಎಂ ಜತೆ ಸೇರಿ ಜಿಲ್ಲೆಯಲ್ಲಿ ಅಭಿವೃದ್ಧಿ ಕಾರ್ಯ ಕೈಗೊಳ್ಳುತ್ತೇವೆ.| ನೆಹರು ಓಲೇಕಾರ, ಶಾಸಕ ಹಾವೇರಿನೆಹರು ಓಲೇಕಾರ ಅವರ ಮನೆಗೆ ಸೌಜನ್ಯದ ಭೇಟಿ ಮಾಡಿದ್ದೇನೆ. ಅವರು ಸಚಿವ ಸ್ಥಾನಕ್ಕೆ ಅರ್ಹತೆ ಹೊಂದಿದ್ದರು. ಆದರೆ, ಸಚಿವ ಸ್ಥಾನ ಕೈತಪ್ಪಿದ್ದಕ್ಕೆ ಅಸಮಾಧಾನವಾಗಿದೆ. ಮುಂದಿನ ದಿನಗಳಲ್ಲಿ ಎಲ್ಲವೂ ಸರಿಯಾಗಲಿದೆ. ಸಿಎಂ ನಮ್ಮವರೇ ಇರುವುದರಿಂದ ಓಲೇಕಾರ ಅವರಿಗೂ ಸೂಕ್ತ ಸ್ಥಾನಮಾನ ಸಿಗಲಿದೆ. ಈ ಕುರಿತು ಜಿಲ್ಲೆಯ ಶಾಸಕರೊಂದಿಗೆ ಸಿಎಂ ಅವರನ್ನು ಭೇಟಿ ಮಾಡುತ್ತೇವೆ.| ಬಿ.ಸಿ. ಪಾಟೀಲ, ಸಚಿವ