

ಪಡುಬಿದ್ರಿ: ಕಾಪು ಪುರಸಭಾ ಚುನಾವಣೆ ಶಾಂತಿಯುತವಾಗಿ ನಡೆದಿದ್ದು, ಶೇ.73.95 ಮತದಾನ ನಡೆದಿದೆ. 23 ವಾರ್ಡ್‌ಗಳಲ್ಲಿ ಸೋಮವಾರ ಬೆಳಗ್ಗಿನಿಂದಲೇ ಮತದಾರರು ಉತ್ಸಾಹದಿಂದ ಮತಗಟ್ಟೆಗಳಿಗೆ ಆಗಮಿಸಿ ಹಕ್ಕು ಚಲಾಯಿಸಿದರು.
ಬೆಳಗ್ಗೆ 9 ಗಂಟೆ ಶೇ.16, 11 ಗಂಟೆಗೆ ಶೇ.37, 1 ಗಂಟೆಗೆ ಶೇ.53, 3 ಗಂಟೆಗೆ ಶೇ. 63ರಷ್ಟು ಮತದಾನವಾಗಿತ್ತು. ಮಂಗಳಪೇಟೆ ಮತಗಟ್ಟೆಯಲ್ಲಿ ಬೆಳಗ್ಗಿನಿಂದಲೇ ಮಂದಗತಿಯ ಮತದಾನ ನಡೆದು ಅಂತಿಮವಾಗಿ ಕಡಿಮೆ ಅಂದರೆ ಶೇ. 64.33ರಷ್ಟು ಮಂದಿ ಹಕ್ಕು ಚಲಾಯಿಸಿದ್ದಾರೆ. ಕೈಪುಂಜಾಲು ಮತಗಟ್ಟೆಯಲ್ಲಿ ಅತೀ ಹೆಚ್ಚು ಅಂದರೆ ಶೇ.80.12ರಷ್ಟು ಮತದಾನವಾಗಿದೆ.
ಕುಂದಾಪುರ ಉಪ ವಿಭಾಗಾಧಿಕಾರಿ ರಾಜು ಕೆ. ಕೆಲವು ಮತಗಟ್ಟೆಗಳಿಗೆ ಭೇಟಿ ನೀಡಿ ಮತದಾನ ಪ್ರಕ್ರಿಯೆ ವೀಕ್ಷಿಸಿದರು. ಚುನಾವಣಾ ವೀಕ್ಷಕ ಮಹಮ್ಮದ್ ಇಸಾಕ್ ಮತ್ತು ಕಾಪು ತಹಸೀಲ್ದಾರ್ ಶ್ರೀನಿವಾಸ ಮೂರ್ತಿ ಕುಲಕರ್ಣಿ, ಪುರಸಭೆ ಮುಖ್ಯಾಧಿಕಾರಿ ವೆಂಕಟೇಶ ನಾವಡ ಹಾಗೂ ವಿವಿಧ ಅಧಿಕಾರಿಗಳು ಪ್ರತಿ ಮತಗಟ್ಟೆಗೂ ಭೇಟಿ ನೀಡಿ ಪರಿಶೀಲಿಸಿದರು. ಉಡುಪಿ ಜಿಲ್ಲಾ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಕುಮಾರ ಚಂದ್ರ ಹಾಗೂ ಕಾಪು ವೃತ್ತ ನಿರೀಕ್ಷಕ ಪ್ರಕಾಶ್, ಕಾರ್ಕಳ ವೃತ್ತ ನಿರೀಕ್ಷಕ ಸಂಪತ್ ಕುಮಾರ್ ನೇತೃತ್ವದಲ್ಲಿ ಕಾಪು, ಪಡುಬಿದ್ರಿ, ಶಿರ್ವ ಪಿಎಸ್‌ಐ, ಕ್ರೈಂ ಎಸ್‌ಐಗಳ ಸಹಿತವಾಗಿ ಪೊಲೀಸ್ ಸಿಬ್ಬಂದಿ ಚುನಾವಣಾ ಕರ್ತವ್ಯದಲ್ಲಿ ನಿರತರಾಗಿದ್ದರು.