ಭರದಿಂದ ಸಾಗುತ್ತಿದೆ ದುರಸ್ತಿ ಕಾರ್ಯ, ಕಾಪು ತಾಪಂಗೆ ತಾತ್ಕಾಲಿಕ ಕಟ್ಟಡ

kattada
Published on

ಪಡುಬಿದ್ರಿ: ನೂತನವಾಗಿ ಅಸ್ತಿತ್ವಕ್ಕೆ ಬಂದಿರುವ ಕಾಪು ತಾಲೂಕು ಪಂಚಾಯಿತಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಆಯ್ಕೆ ಕೆಲವೇ ದಿನಗಳೊಳಗೆ ನಡೆಯಲಿದ್ದು, ಹಿಂದಿನ ಉಳಿಯಾರಗೋಳಿ ಗ್ರಾಮ ಪಂಚಾಯಿತಿ ಕಟ್ಟಡದಲ್ಲಿ ಆ.15ರೊಳಗೆ ತಾತ್ಕಾಲಿಕ ಕಚೇರಿ ಆರಂಭಿಸುವ ನಿಟ್ಟಿನಲ್ಲಿ ಕಟ್ಟಡ ದುರಸ್ತಿ ಕಾರ್ಯ ಭರದಿಂದ ಸಾಗುತ್ತಿದೆ.

ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಈಗಾಗಲೇ ಸರ್ಕಾರದಿಂದ ಮೀಸಲಾತಿ ನಿಗದಿಯಾಗಿದ್ದು, ಕುಂದಾಪುರ ಉಪವಿಭಾಗಾಧಿಕಾರಿಗೆ ಚುನಾವಣೆ ನಡೆಸಲು ಹೊಣೆ ವಹಿಸಲಾಗಿದೆ. ಚುನಾವಣೆ ದಿನಾಂಕ ಶೀಘ್ರ ಪ್ರಕಟಗೊಳ್ಳಲಿದೆ. ಕಾಪು ತಾಲೂಕಿನ 16 ಗ್ರಾಪಂ ವ್ಯಾಪ್ತಿಗೊಳಪಟ್ಟ 2015-16ರ ಸಾಲಿನಲ್ಲಿ ಚುನಾಯಿತರಾಗಿದ್ದ 12 ತಾಪಂ ಸದಸ್ಯರು ಈವರೆಗೆ ಉಡುಪಿ ತಾಪಂಗೆ ಸೇರಿದ್ದರು. ಸರ್ಕಾರದ ಅಧಿಸೂಚನೆಯಂತೆ ಆ ಸದಸ್ಯರು ಸದ್ಯ ಹೊಸದಾಗಿ ರಚನೆಯಾದ ಕಾಪು ತಾಲೂಕಿನಲ್ಲಿ ನೂತನವಾಗಿ ಅಸ್ತಿತ್ವಕ್ಕೆ ಬಂದಿರುವ ಕಾಪು ತಾಪಂ ಸದಸ್ಯರಾಗಿದ್ದಾರೆ.

12 ಸದಸ್ಯ ಬಲದ ತಾಪಂನಲ್ಲಿ ನೀತಾ ಗುರುರಾಜ್(ಪಡುಬಿದ್ರಿ), ನಾಗೇಶ್ ಪೂಜಾರಿ(ಕಟಪಾಡಿ), ರಾಜೇಶ್ ಕುಮಾರ್ ಅಂಬಾಡಿ(ಕೋಟೆ-ಮಟ್ಟು), ಕೇಶವ ಮೊಯ್ಲಿ(ಎಲ್ಲೂರು), ಶಶಿಪ್ರಭಾ ಶೆಟ್ಟಿ (ಕಳತ್ತೂರು)ಬಿಜೆಪಿ ಹಾಗೂ ಸುಜಾತಾ ಶಂಕರ್ ಸುವರ್ಣ(ಬೆಳ್ಳೆ), ಗೀತಾ ವಾಗ್ಳೆ(ಶಿರ್ವ), ರಾಜೇಶ್ ಜಿ.ಶೆಟ್ಟಿ(ಇನ್ನಂಜೆ) ಮೈಕಲ್ ರಮೇಶ್ ಡಿಸೋಜ(ಮುದರಂಗಡಿ), ಯು.ಸಿ.ಶೇಖಬ್ಬ(ಬಡಾ), ರೇಣುಕಾ ಪುತ್ರನ್(ಹೆಜಮಾಡಿ), ದಿನೇಶ್ ಕೋಟ್ಯಾನ್(ಪಲಿಮಾರು) ಕಾಂಗ್ರೆಸ್ ಪಕ್ಷದ ಚುನಾಯಿತ ಸದಸ್ಯರು. ಅಧ್ಯಕ್ಷ ಹಿಂದುಳಿದ ವರ್ಗ(ಬಿ) ಮಹಿಳೆ ಹಾಗೂ ಉಪಾಧ್ಯಕ್ಷ ಸಾಮಾನ್ಯ ವರ್ಗಕ್ಕೆ ಮೀಸಲಾಗಿದ್ದು, ಕಾಂಗ್ರೆಸ್‌ಗೆ ಬಹುಮತವಿದ್ದರೂ ಸೂಕ್ತ ಅಭ್ಯರ್ಥಿಯಿಲ್ಲದ ಕಾರಣ ಬಿಜೆಪಿಯ ಶಶಿಪ್ರಭಾ ಶೆಟ್ಟಿಗೆ ಅಧ್ಯಕ್ಷ ಸ್ಥಾನ ಒಲಿಯಲಿದೆ. ಉಪಾಧ್ಯಕ್ಷ ಸ್ಥಾನ ಕಾಂಗ್ರೆಸ್ ಪಾಲಾಗಲಿದೆ.

ಆ.15ರ ವೇಳೆಗೆ ಉದ್ಘಾಟನೆ: ಉಳಿಯಾರಗೋಳಿ ಗ್ರಾಪಂ ಕಟ್ಟಡವನ್ನು ತಾತ್ಕಾಲಿಕವಾಗಿ ತಾಪಂ ಕಚೇರಿಯಾಗಿ ಉಪಯೋಗಿಸಲಾಗುವುದು. ಕಾಪು ಪ್ರವಾಸಿ ಬಂಗ್ಲೆ ಪ್ರದೇಶದಲ್ಲಿ ನಿರ್ಮಾಣಗೊಳ್ಳಲಿರುವ ಮಿನಿ ವಿಧಾನಸೌಧಕ್ಕೆ ಕಚೇರಿ ಸ್ಥಳಾಂತರಗೊಳ್ಳಲಿದೆ. ಪೀಠೋಪಕರಣಗಳಿಗೆ ಹಣದ ಕೊರತೆಯಾಗಲಿದ್ದು, ಗ್ರಾಮ ಪಂಚಾಯಿತಿಗಳ ಪೀಠೋಪಕರಣಗಳನ್ನು ಪಡೆಯಲಾಗುವುದು. ಶೇ.50ರಷ್ಟು ದುರಸ್ತಿ ಕಾಮಗಾರಿ ಪೂರ್ಣಗೊಂಡಿದ್ದು, ಮುಂದಿನ ಆ.15ರ ವೇಳೆಗೆ ಉದ್ಘಾಟನೆಗೆ ಸಿದ್ಧತೆ ನಡೆಸಲಾಗುತ್ತಿದೆ. ತಾಪಂನಲ್ಲಿ ಒಟ್ಟು 20 ಹುದ್ದೆಗಳು ಇದ್ದು, ಈಗ ಎಲ್ಲ ಹುದ್ದೆಗಳನ್ನು ತುಂಬಲಾಗುತ್ತಿಲ್ಲ. ಪ್ರಸ್ತುತ ಕುರ್ಕಾಲು ಗ್ರಾಪಂ ಅಭಿವೃದ್ಧಿ ಅಧಿಕಾರಿ, ಬಡಾ ಪಂಚಾಯಿತಿ ಕಾರ್ಯದರ್ಶಿ ಸಹಿತ ಮೂರು ನಾಲ್ಕು ಜನರನ್ನು ನೇಮಿಸಲಾಗುವುದು ಎಂದು ಪ್ರಭಾರ ಕಾರ್ಯನಿರ್ವಹಣಾಧಿಕಾರಿಯಾಗಿ ನಿಯೋಜನೆಗೊಂಡಿರುವ ಜಿಪಂ ಅಕ್ಷರ ದಾಸೋಹದ ವಿವೇಕಾನಂದ ಗಾಂವ್ಕರ್ ಮಾಹಿತಿ ನೀಡಿದ್ದಾರೆ.

ಕಾಪು ಪುರಸಭೆಗೆ ಸೇರಿದ ಉಳಿಯಾರಗೋಳಿ ಕಟ್ಟಡದಲ್ಲಿ ಆ.15ರೊಳಗೆ ತಾಪಂ ಕಚೇರಿ ಆರಂಭಿಸಿ ಸ್ವಾತಂತ್ರ್ಯ ಧ್ವಜಾರೋಹಣ ಮಾಡುವ ಉದ್ದೇಶವಿದೆ. ದುರಸ್ತಿಗೆ 8 ಲಕ್ಷ ರೂ. ವೆಚ್ಚವಾಗಲಿದ್ದು, 12 ತಾಪಂ ಸದಸ್ಯರ ನಿಧಿ ಸೇರಿ 3.50 ಲಕ್ಷ ರೂ. ಕಾಯ್ದಿರಿಸಲಾಗಿದೆ. ಶಾಸಕರ ನಿಧಿಗೆ ಬೇಡಿಕೆ ಸಲ್ಲಿಸಿದ್ದು, ಯಾವುದಾದರೊಂದು ಅನುದಾನದಲ್ಲಿ ಹಣಕಾಸು ಒದಗಿಸುವ ಪ್ರಯತ್ನ ಮಾಡಲಾಗುವುದು. - ಲಾಲಾಜಿ ಆರ್.ಮೆಂಡನ್, ಕಾಪು ಶಾಸಕ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net