ಕಟ್ಟೀಮನಿ ಸಾಹಿತ್ಯ ಸೇವೆ ಅಪಾರ, ಕೃತಿಗಳ ಲೋಕಾರ್ಪಣೆ ವೇಳೆ ಕವಟಗಿಮಠ ಶ್ಲಾಘನೆ

08-Jaggu-6.JPG
Published on

ಬೆಳಗಾವಿ: ಬಸವರಾಜ ಕಟ್ಟೀಮನಿ ಅವರು ಸಾಹಿತ್ಯದ ಮೂಲಕ ಸಮಾಜದ ಉದ್ಧಾರಕ್ಕೆ ಶ್ರಮಿಸಿದರು. ಅವರ ಸಾಹಿತ್ಯ ಸಮಾಜಕ್ಕೆ ಆದರ್ಶಪ್ರಾಯ ಎಂದು ಕೆಎಲ್ಇ ಸಂಸ್ಥೆಯ ನಿರ್ದೇಶಕ ಮಹಾಂತೇಶ ಕವಟಗಿಮಠ ಹೇಳಿದರು.
 ಬಸವರಾಜ ಕಟ್ಟೀಮನಿ ಪ್ರತಿಷ್ಠಾನ ಹಾಗೂ ಕೆಎಲ್ಇ ಸಂಸ್ಥೆಯ ಲಿಂಗರಾಜ ಮಹಾವಿದ್ಯಾಲಯದ ಕನ್ನಡ ವಿಭಾಗ ಹಾಗೂ ರಾಜ್ಯ ಸರ್ಕಾರದ ಸಹಯೋಗದಲ್ಲಿ ನಗರದ ಲಿಂಗರಾಜ ಕಾಲೇಜಿನಲ್ಲಿ ಶನಿವಾರ ಆಯೋಜಿಸಿದ್ದ ಬಸವರಾಜ ಕಟ್ಟೀಮನಿ ಅವರ 3 ಕೃತಿಗಳ ಲೋಕಾರ್ಪಣೆ, ಗೌರವ ಸನ್ಮಾನ ಮತ್ತು ವಿದ್ಯಾರ್ಥಿಗಳೊಂದಿಗೆ ಸಂವಾದ ಉದ್ಘಾಟಿಸಿ ಅವರು ಮಾತನಾಡಿದರು.
 ಕೇಂದ್ರ ಸಾಹಿತ್ಯ ಅಕಾಡೆಮಿ ಸದಸ್ಯ ಡಾ. ಬಸವರಾಜ ಸಾದರ ಅವರು ಕಟ್ಟೀಮನಿ ಬದುಕು-ಬರಹ ಕೃತಿ ಕುರಿತು ಮಾತನಾಡಿ, ಸಾಹಿತಿ ಉಳಿಯುವುದು ಆತನ ಕೃತಿಯ ಮೂಲಕ. ಕಟ್ಟೀಮನಿ ಅವರು ನೇರ ನುಡಿಯ ಸಾಹಿತಿ, ಪತ್ರಕರ್ತರಾಗಿದ್ದರು. ಅವರು ಕನ್ನಡ ಸಾಹಿತ್ಯಕ್ಕೆ ಅಪಾರ ಕೊಡುಗೆ ನೀಡಿದ್ದಾರೆ. ಅವರ ಸಾಹಿತ್ಯವನ್ನು ವಿಶ್ವವಿದ್ಯಾಲಯಗಳು ಪಠ್ಯಕ್ರಮದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.
 ಹಿರಿಯ ಲೇಖಕ ಚಂದ್ರಶೇಖರ ಅಕ್ಕಿ ಅವರು ಬಸವರಾಜ ಕಟ್ಟೀಮನಿ ಕಥೆಗಳು: ಒಂದು ಅವಲೋಕನ ಕೃತಿ ಬಗ್ಗೆ ಮಾತನಾಡಿ, ಬಸವರಾಜ ಅವರು ಮಹಿಳಾ ಸಂವೇದನೆ ಕುರಿತು ಸಾಹಿತ್ಯ ರಚಿಸಿದವರು. ಅವರ ಸಾಹಿತ್ಯ ಜನಮೆಚ್ಚಿ ಓದುವ ಸಾಹಿತ್ಯ ಎಂದರು.
 ಕತೆಗಾರ, ಕಾದಂಬರಿಕಾರ ಡಾ.ಬಾಳಾಸಾಹೇಬ ಲೋಕಾಪುರ ಪ್ರಗತಿಶೀಲ ಕಾದಂಬರಿಗಳು ಕೃತಿಯ ಕುರಿತು ಮಾತನಾಡಿ, ಕಟ್ಟೀಮನಿ ಅವರು ಮಾನವೀಯ ಧ್ವಜವನ್ನು ಎತ್ತಿ ಹಿಡಿದ ಸಾಹಿತಗಳು. ಅವರ ಸಾಹಿತ್ಯ ಮಾನವೀಯತೆ ಬೆಂಬಲಿಸುವ ಸಾಹಿತ್ಯ ಎಂದರು.
 ಅಧ್ಯಕ್ಷತೆ ವಹಿಸಿದ್ದ ಬಸವರಾಜ ಕಟ್ಟೀಮನಿ ಪ್ರತಿಷ್ಠಾನದ ಅಧ್ಯಕ್ಷ ಪ್ರೊ.ಮಲ್ಲಿಕಾರ್ಜುನ ಹಿರೇಮಠ ಮಾತನಾಡಿ, ಕಟ್ಟೀಮನಿ ಅವರು ತಾವು ಬದುಕಿದಂತೆ ಸಾಹಿತ್ಯ ರಚಿಸಿದವರು. ಅವರ ಸಾಹಿತ್ಯವನ್ನು ಸಮಾಜಕ್ಕೆ ಹಾಗೂ ಯುವ ಜನಾಂಗಕ್ಕೆ ತಲುಪಿಸುವ ಕಾರ್ಯ ಕಟ್ಟೀಮನಿ ಪ್ರತಿಷ್ಠಾನ ಮಾಡುತ್ತಿದೆ ಎಂದರು.
 ಕಟ್ಟೀಮನಿ ಅವರ ‘ಜ್ವಾಲಾಮುಖಿಯ ಮೇಲೆ’ ಕಾದಂಬರಿಯ ಹಿಂದಿ ಅನುವಾದಕ್ಕಾಗಿ ಹಿರಿಯ ಸಾಹಿತಿ ಪ್ರೊ. ಧರಣೇಂದ್ರ ಕುರಕುರಿ ಅವರನ್ನು ಸನ್ಮಾನಿಸಲಾಯಿತು. ವಿದ್ಯಾರ್ಥಿಗಳು ಕಟ್ಟೀಮನಿ ಅವರ ಕತೆಗಳ ವಿಮರ್ಶೆ ಹಾಗೂ ಸಂವಾದ ನಡೆಸಿದರು. ಹಿರಿಯ ಸಾಹಿತಿ ಸರಜೂ ಕಾಟ್ಕರ್, ಶಿರೀಷ ಜೋಷಿ, ದುರ್ಗಾದಾಸ, ರಾಮಕೃಷ್ಣ ಮರಾಠೆ, ಪ್ರೇಮಾ ನಡುವಿನಮನಿ, ಪ್ರಾಚಾರ್ಯ ಹನುಮಂತ ಮೇಲಿನಮನಿ ಇದ್ದರು. ವಿಜಯಲಕ್ಷ್ಮೀ ಪ್ರಾರ್ಥಿಸಿದರು. ಬಸವರಾಜ ಕಟ್ಟಿಮನಿ ಪ್ರತಿಷ್ಠಾನದ ಸದಸ್ಯ ಕಾರ್ಯದರ್ಶಿ ವಿದ್ಯಾವತಿ ಭಜಂತ್ರಿ ಸ್ವಾಗತಿದಸಿದರು. ಡಾ.ರೇಣುಕಾ ಕಠಾರಿ ಹಾಗೂ ಸಿದ್ಧ್ದನಗೌಡ ಪಾಟೀಲ ನಿರೂಪಿಸಿದರು. ಡಾ.ಎಚ್.ಎಂ.ಚನ್ನಪ್ಪಗೋಳ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net