

ವಿಜಯವಾಣಿ ಸುದ್ದಿಜಾಲ ಉಡುಪಿ
ಸ್ವಾಂತತ್ರ್ಯದ ಪೂರ್ವದ ದಿನಗಳಿಂದಲೂ ರಂಗಭೂಮಿಯು ಆಡಳಿತ ನಡೆಸುವವರಿಗೆ ಹಲವಾರು ವಿಧದ ಪ್ರಶ್ನೆ ಕೇಳಿದೆ. ಅಲ್ಲದೆ, ಸಮಾಜ ಪರಿವರ್ತನೆಯಲ್ಲಿ ಪ್ರಮುಖ ಪಾತ್ರ ವಹಿಸಿದೆ ಎಂದು ತೊಟ್ಟಂ ಚರ್ಚ್ನ ಧರ್ಮಗುರು ವಂ. ಡೆನಿಸ್ ಡೆಸಾ ಅಭಿಮತ ವ್ಯಕ್ತಪಡಿಸಿದರು.
ಮಲ್ಪೆಯ ಸಂತ ಅನ್ನಮ್ಮ ಚರ್ಚ್ ತೊಟ್ಟಂ ಇದರ ಸಾಮಾಜಿಕ ಸಂಪರ್ಕ ಸಾಧನಗಳ ಆಯೋಗ, ಪ್ರತಿಭಾಂಗಣ ಸಾಂಸ್ಕೃತಿಕ ಸಂಘಟನೆ ತೊಟ್ಟಂ ಹಾಗೂ ಸಮನ್ವಯ ಸರ್ವಧರ್ಮ ಸೌಹಾರ್ದ ಸಮಿತಿ ಇವರ ಆಶ್ರಯದಲ್ಲಿ ತೊಟ್ಟಂ ಚರ್ಚ್ನ ವಠಾರದ್ಲಲಿ ನಾದಮಣಿ ನಾಲ್ಕೂರು ನೇತೃತ್ವದಲ್ಲಿ ಮಾ.29ರಂದು ಆಯೋಜಿಸಿದ್ದ ಕತ್ತಲ ಹಾಡು ಎಂಬ ವಿಶಿಷ್ಟ ಕಾರ್ಯಕ್ರಮದಲ್ಲಿ ಮಾತನಾಡಿದರು.
ಯೇಸು ಕ್ರಿಸ್ತ, ಬಸವಣ್ಣ, ಬುದ್ಧ, ಕನಕದಾಸ ಹೀಗೆ ಅನೇಕರು ಸಮಾಜದಲ್ಲಿದ್ದ ಅನ್ಯಾಯದ ವಿರುದ್ಧ ದನಿ ಎತ್ತಿದರು. ಧಾರ್ಮಿಕ, ರಾಜಕೀಯ ನಾಯಕರಿಗೆ ಪ್ರಶ್ನೆ ಹಾಕುವುದರ ಮೂಲಕ ಮಾದರಿಯಾದರು. ಪ್ರಜಾಪ್ರಭುತ್ವದಲ್ಲಿ ಎಲ್ಲರಿಗೂ ಪ್ರಶ್ನೆ ಕೇಳುವ ಹಕ್ಕಿದೆ. ಆಡಳಿತ ಪಕ್ಷವನ್ನು ಪ್ರಶ್ನಿಸಲು ನಮ್ಮ ಹಕ್ಕನ್ನು ಉಪಯೋಗಿಸೋಣ. ಕಲ್ಮಶ ತುಂಬಿದ ಜಗತ್ತಿನಲ್ಲಿ ತಮ್ಮ ತಂಬೂರಿ ನಾದದಲ್ಲಿ ಶಾಂತಿ, ಪ್ರೀತಿ, ಸೌಹಾರ್ದತೆ, ಸಹಿಷ್ಣುತೆ, ತ್ಯಾಗ, ಅಧ್ಯಾತ್ಮದ ಮಹತ್ವಗಳನ್ನು ಪ್ರಚುರಪಡಿಸುವ ಕಾಯಕದಲ್ಲಿ ನಾದಮಣಿ ನಾಲ್ಕೂರು ತೊಡಗಿಕೊಂಡಿದ್ದಾರೆ ಎಂದರು.
ಲವೀನಾ ಫೆರ್ನಾಂಡಿಸ್ ಕಾರ್ಯಕ್ರಮ ನಿರೂಪಿಸಿದರು.
ಜೀವನದಲ್ಲಿ ಕಷ್ಟ ಅನುಭವಿಸುತ್ತಿರುವ, ಕತ್ತಲಲ್ಲಿ ತೊಳಲಾಡುವ ಹಲವಾರು ಜನರ ಬಾಳಿಗೆ ಬೆಳಕಾದ ಆಪತ್ಬಾಂಧವ ಈಶ್ವರ ಮಲ್ಪೆ ಹಾಗೂ ನಾದಮಣಿ ನಾಲ್ಕೂರು ಇವರನ್ನು ಸನ್ಮಾನಿಸಲಾಯಿತು. ಕತ್ತಲ ಹಾಡು ಪರಿಕಲ್ಪನೆಯಲ್ಲಿ ತತ್ವಪದ, ದಾಸರ ಪದ, ಕಡಕೋಳ ಮಡಿವಾಳಪ್ಪರ ವಚನ, ಅಬ್ರಹಾಂ ಲಿಂಕನ್ ಬರೆದ ಪತ್ರ, ಜಿ.ಎಸ್. ಶಿವರುದ್ರಪ್ಪ ಅವರ ಭಾವಗೀತೆ ಹಾಗೂ ಹೊಸ ಕವಿತೆಗಳನ್ನು ನಾದಮಣಿ ಅವರು ಎರಡೂವರೆ ಗಂಟೆಗಳ ಕಾಲ ಪ್ರಸ್ತುತಪಡಿಸಿದರು.