

ಹುಣಸೂರು: ತಾಲೂಕಿನ ಕಟ್ಟೆಮಳಲವಾಡಿ ಗ್ರಾಮದ ಆರೋಗ್ಯ ಮತ್ತು ಕ್ಷೇಮ ಕೇಂದ್ರಕ್ಕೆ ವೈದ್ಯಾಧಿಕಾರಿಗಳನ್ನು ನೇಮಿಸಬೇಕೆಂದು ಬೆಳಕು ಸೇವಾ ಸಂಸ್ಥೆಯ ಮುಖ್ಯಸ್ಥ ನಿಂಗರಾಜ್ ಹಾಗೂ ಕೇಂದದ ಆರೋಗ್ಯ ರಕ್ಷಾ ಸಮಿತಿ ಸದಸ್ಯ ಮಲ್ಲಾಡಿ ಆಗ್ರಹಿಸಿದರು.
ಶುಕ್ರವಾರ ಕೇಂದ್ರದಲ್ಲಿ ಆಯೋಜಿಸಿದ್ದ ಆರೋಗ್ಯ ರಕ್ಷಾ ಸಮಿತಿ ಸಭೆಯಲ್ಲಿ ಮಾತನಾಡಿದ ಅವರು, ಕಟ್ಟೆಮಳಲವಾಡಿ ತಾಲೂಕಿನಲ್ಲಿಯೇ ಅತಿಹೆಚ್ಚು ಜನಸಂಖ್ಯೆ ಹೊಂದಿರುವ ದೊಡ್ಡ ಗ್ರಾಮವಾಗಿದೆ. ಪರಿಶಿಷ್ಟ ಜಾತಿ, ಪಂಗಡ ಹಾಗೂ ಇತರ ಹಿಂದುಳಿದ ಜಾತಿಗೆ ಸೇರಿದ ಸಾವಿರಾರು ಬಡ ಕುಟುಂಬಗಳು ವಾಸ ಮಾಡುತ್ತಿವೆ. ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕಳೆದ ಮೂರ‌್ನಾಲ್ಕು ವರ್ಷಗಳಿಂದ ಶಾಶ್ವತ ವೈದ್ಯಾಧಿಕಾರಿಗಳಿಲ್ಲದೆ ರೋಗಿಗಳು ತೊಂದರೆಗೊಳಗಾಗಿದ್ದಾರೆ ಎಂದು ದೂರಿದರು.
ಗ್ರಾಮದ ಖಾಸಗಿ ಕ್ಲಿನಿಕ್‌ಗಳಿಗೆ ದುಬಾರಿ ಹಣ ತೆತ್ತು ಚಿಕಿತ್ಸೆ ಪಡೆದುಕೊಳ್ಳುವ ಪರಿಸ್ಥಿತಿ ಬಂದೊದಗಿದೆ. ಈ ಬಗ್ಗೆ ಅನೇಕ ಬಾರಿ ತಾಲೂಕು ಆರೋಗ್ಯಾಧಿಕಾರಿ, ಜಿಲ್ಲಾ ಆರೋಗ್ಯಾಧಿಕಾರಿ, ಶಾಸಕರಿಗೆ ಮನವಿ ಮಾಡಲಾಗಿದ್ದರೂ ಸಮಸ್ಯೆ ಪರಿಹಾರವಾಗಿಲ್ಲ. ಕೂಡಲೇ ಗ್ರಾಮದ ಸರ್ಕಾರಿ ಆಸ್ಪತ್ರೆಗೆ ಸೇವಾ ಮನೋಭಾವನೆ ಇರುವ ವೈದ್ಯಾಧಿಕಾರಿಯನ್ನು ನೇಮಕ ಮಾಡುವಂತೆ ಒತ್ತಾಯಿಸಿದರು.
ವೈದ್ಯಾಧಿಕಾರಿ ಡಾ.ದಿನೇಶ್‌ಬಾಬು ಮಾತನಾಡಿ, ನಾನು ಮುಳ್ಳೂರು ಆಸ್ಪತ್ರೆಯಲ್ಲಿ ವೈದ್ಯಾಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದು, ತಾಲೂಕು ಆರೋಗ್ಯಾಧಿಕಾರಿಗಳು ನನ್ನನ್ನು ಕಟ್ಟೆಮಳಲವಾಡಿ ಗ್ರಾಮದ ಆಸ್ಪತ್ರೆಗೆ ತಾತ್ಕಾಲಿಕವಾಗಿ ಆಡಳಿತ ವೈದ್ಯಾಧಿಕಾರಿಯಾಗಿ ನೇಮಕ ಮಾಡಿದ್ದಾರೆ. ನಾನು ಆಡಳಿತದ ವಿಚಾರದಲ್ಲಿ ಮಾತ್ರ ಜವಾಬ್ದಾರಿ ಹೊಂದಿದ್ದೇನೆ. ಕಟ್ಟೆಮಳಲವಾಡಿ ಗ್ರಾಮದ ಆಸ್ಪತ್ರೆಗೆ 2.53 ಲಕ್ಷ ರೂ. ಅನುದಾನ ಬಿಡುಗಡೆಯಗಿದ್ದು, ಸರ್ಕಾರದ ನಿಯಮಾನುಸಾರ ಖರ್ಚು ಮಾಡಬೇಕಾಗಿದೆ. ಹೀಗಾಗಿ ಈ ಸಭೆ ಅನುಮೋದನೆ ನೀಡಬೇಕೆಂದು ತಿಳಿಸಿದರು.
ಸಭೆಯಲ್ಲಿ ಕಟ್ಟೆಮಳಲವಾಡಿ ಗ್ರಾಪಂ ಅಧ್ಯಕ್ಷ ಚಿನ್ನಮುತ್ತು, ಉಪಾಧ್ಯಕ್ಷ ದಿಲೀಪ್, ಸರ್ಕಾರಿ ಶಾಲೆಯ ಶಿಕ್ಷಕಿ ಲೂಸಿಪ್ರೇಮಾ, ವೈದ್ಯರಾದ ಡಾ.ಪ್ರದ್ಯುಮ್ನ, ಆರೋಗ್ಯ ಸುರಕ್ಷಣಾಧಿಕಾರಿ ಕುಸ್ನಮ್ ಭಾನು, ಸಮುದಾಯ ಆರೋಗ್ಯಾಧಿಕಾರಿ ರೂಪಾ, ರಾಜಶೇಖರ, ಪ್ರಾಥಮಿಕ ಆರೋಗ್ಯ ಸುರಕ್ಷಣಾಧಿಕಾರಿ ಕೆ.ನಿಸರ್ಗಾ, ಚೇತನ್, ಸಿಬ್ಬಂದಿ ನಾಗರಾಜು ಇತರರು ಇದ್ದರು.