

ಮಡಿಕೇರಿ:
ಎಸ್. ಕಟ್ಟೆಮಾಡು ಗ್ರಾಮದ ಶ್ರೀ ಮಹಾಮೃತ್ಯುಂಜಯ ಮಹಾದೇಶ್ವರ ದೇವಾಲಯದ ಅರ್ಚಕ ವಿಘ್ನೇಶ್ ಭಟ್ ಮೇಲೆ ಹಲ್ಲೆ ಮಾಡಿದ ದುಷ್ಕರ್ಮಿಗಳನ್ನು ಆದಷ್ಟು ಬೇಗ ಬಂಧಿಸಬೇಕು ಹಾಗೂ ಗ್ರಾಮಸ್ಥರಿಗೆ ಸೂಕ್ತ ರಕ್ಷಣೆ ನೀಡಬೇಕು ಎಂದು ಶ್ರೀ ಮಹಾಮೃತ್ಯುಂಜಯ ಮಹಾದೇಶ್ವರ ದೇವಾಲಯ ಸಮಿತಿ ಅಧ್ಯಕ್ಷ ಕಟ್ಟೆಮನೆ ಶಶಿ ಜನಾರ್ದನ ಪೊಲೀಸ್ ಇಲಾಖೆಯನ್ನು ಒತ್ತಾಯಿಸಿದ್ದಾರೆ.
ಪ್ರಧಾನ ಅರ್ಚಕರ ಮೇಲೆ ನಡೆದಿರುವ ಹಲ್ಲೆ ಅವರೊಬ್ಬರ ಮೇಲೆ ನಡೆದಿರುವ ದಾಳಿ ಅಲ್ಲ. ದೇವಾಲಯ ಸಮಿತಿ ಮೇಲಿನ ಹಲ್ಲೆ ಎಂದು ಪರಿಗಣಿಸಿದ್ದೇವೆ. ಈ ಹಲ್ಲೆ ಹಿಂದೆ ಯಾವುದೇ ವ್ಯಯಕ್ತಿಕ ವಿಚಾರಗಳು ಕಂಡುಬರುತ್ತಿಲ್ಲ. ವಿಘ್ನೇಶ್ ಹಲವು ವರ್ಷಗಳಿಂದ ಇಲ್ಲಿ ಕೆಲಸ ಮಾಡುತ್ತಿದ್ದಾರೆ. ಎಲ್ಲರ ಜತೆ ಸಹಬಾಳ್ವೆ ನಡೆಸುತ್ತಿದ್ದಾರೆ. ಹಾಗಾಗಿ ಇದು ಪೂರ್ವ ನಿಯೋಜಿತ ಘಟನೆ. ಕಟ್ಟೆಮಾಡು ಪ್ರಕರಣಕ್ಕೆ ಸಂಬAಧಿಸಿದAತೆ ದೇವಾಲಯ ಸಮಿತಿ ಪರವಾಗಿ ಪತ್ರಿಕೆ ಮೂಲಕ ಹೇಳಿಕೆ ಕೊಟ್ಟವರಿಗೂ ಬೆದರಿಕೆ ಕರೆಗಳು ಬರುತ್ತಿದೆ.
ಅರ್ಚಕರಿಗೂ ಈ ಮೊದಲು ಬೆದರಿಕೆ ಕರೆ ಬಂದಿತ್ತು. ಈಗಿನ ಪರಿಸ್ಥಿತಿ ನೋಡಿದರೆ ಗ್ರಾಮಸ್ಥರ ರಕ್ಷಣೆ ಹೇಗೆ ಎನ್ನುವ ಆತಂಕ ಕಾಣಿಸಿಕೊಂಡಿದೆ. ಈ ಸಂಬAಧ ಪೊಲೀಸ್ ಇಲಾಖೆಗೆ ಮನವಿ ಮಾಡಿದರೂ ಪ್ರಯೋಜನ ಅಗಿಲ್ಲ. ಸಮಸ್ಯೆಗೆ ಊರಿನವರು, ಜಿಲ್ಲಾಡಳಿತ ಸೇರಿ ಪರಿಹಾರ ಕಂಡುಕೊಳ್ಳುವ ಸಮಯದಲ್ಲಿ ಹೊರಗಿನವರು ಬಂದು ಶಾಂತಿ ಕದಡುತ್ತಿದ್ದಾರೆ. ಈ ಮಧ್ಯೆ ಜಿಲ್ಲಾಡಳಿತ ಮತ್ತು ಪೊಲೀಸರು ಸಹಕಾರ ಕೊಡದಿದ್ದರೆ ಇನ್ನು ದೇವರ ಮೊರೆ ಹೋಗುವುದಷ್ಟೇ ನಮಗೆ ಉಳಿದಿರುವ ದಾರಿ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಗ್ರಾಮಸ್ಥರಾದ ಬಿದ್ರುಪಣೆ ಮನು ಮಾತನಾಡಿ ಪ್ರಧಾನ ಅರ್ಚಕರಿಗೆ ಮೂರು ಜನರು ಮನೆಗೆ ತೆರಳಿ ಮೃತ್ಯುಂಜಯ ದೇವಾಲಯ ಅರ್ಚಕರು ನೀವಾ ಎಂದು ಕೇಳಿ ಹಲ್ಲೆ ಮಾಡಲಾಗಿದೆ. ಅವರ ಮೂಗಿನ ಸರ್ಜರಿ ಮಾಡಬೇಕಿದೆ. ಐಸಿಯುನಲ್ಲಿ ಚಿಕಿತ್ಸೆ ಕೊಡಲಾಗುತಿದೆ. ಇಂಥ ಅಹಿತಕರ ಘಟನೆಗಳು ಆದಾಗ ದೇವಸ್ಥಾನದ ಮೇಲೂ ಪರಿಣಾಮ ಆಗುತ್ತದೆ. ದ್ವೇಷ ರಾಜಕಾರಣ ಇಲ್ಲಿ ನಡೆಯುತ್ತಿದೆ. ಇದು ಒಳ್ಳೆಯ ಬೆಳವಣಿಗೆ ಅಲ್ಲ. ಘಟನೆಗೆ ಕಾರಣ ಆದವರ ಬಂಧನ ಆಗಬೇಕು. ಜಿಲ್ಲಾಡಳಿತ ಸೂಕ್ತ ಕ್ರಮ ತೆಗೆದುಕೊಳ್ಳದಿದ್ದರೆ ಬೇರೆ ಬೇರೆ ಪರಿಣಾಮ ಆಗಬಹುದು ಎಂದರು.
ದೇವಾಲಯ ಸಮಿತಿಯ ಪ್ರಮುಖರಾದ ಪಾಣತ್ತಲೆ ಜಗದೀಶ್ ಮಂದಪ್ಪ, ಬಿದ್ರುಪಣೆ ಚೇತನ, ಕಟ್ಟೆಮನೆ ಪುರುಷೋತ್ತಮ ಹಾಗೂ ಬಿದ್ರುಪಣೆ ಪ್ರಸನ್ನ ಸುದ್ದಿಗೋಷ್ಠೀಯಲ್ಲಿ ಇದ್ದರು.