

ಪಡುಬಿದ್ರಿ: ಇಲ್ಲಿನ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದಲ್ಲಿ ಗಣಪತಿ ದೇವರಿಗೆ ಸಾರ್ವಜನಿಕ ಕಟ್ಟದ ಅಪ್ಪ ಸೇವೆ ಆ.6 ಮತ್ತು 7ರಂದು ನಡೆಯಲಿದೆ.
ನೂರಾರು ವರ್ಷಗಳ ಹಿಂದೆ ಪಡುಬಿದ್ರಿ ಬೇಂಗ್ರೆ ಬಳಿ ಗ್ರಾಮಸ್ಥರು ಕೃಷಿಗಾಗಿ ನೀರು ತುಂಬಿಸಲು ಪ್ರತಿವರ್ಷ ಕಾಮಿನಿ ಹೊಳೆ ತೋಡಿಗೆ ಕಟ್ಟ (ಒಡ್ಡು) ನಿರ್ಮಿಸುತ್ತಿದ್ದು, ನೀರಿನ ರಭಸಕ್ಕೆ ಅದು ಕಡಿದು ಹೋಗುತ್ತಿತ್ತು. ಕಟ್ಟ ಕಡಿದು ಹೋಗದಂತೆ ಗಣಪತಿ ದೇವರಿಗೆ ಅಪ್ಪ ಸೇವೆ ನೀಡುವುದಾಗಿ ಮಾಡಿಕೊಂಡ ಪ್ರಾರ್ಥನೆ ಬಳಿಕ ನಂತರ ಕಟ್ಟ ನಿಂತಿತು.
ಹರಕೆ ತೀರಿಸಲು ಅಂದು 10 ಸೇರು ಅಕ್ಕಿಯಿಂದ ತಯಾರಿಸಿದ ಅಪ್ಪವನ್ನು ಪಡುಬಿದ್ರಿ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದಲ್ಲಿ ಗಣಪತಿ ದೇವರಿಗೆ ಸಮರ್ಪಿಸಿದ್ದರು. ಕಟ್ಟ ಕಡಿಯದಂತೆ ನೀಡಿದ ಈ ಅಪ್ಪ ಸೇವೆಗೆ ಕಟ್ಟದಪ್ಪ ಸೇವೆ ಎಂದು ಹೆಸರಾಯಿತು. ಅಂದಿನಿಂದ ಪ್ರತಿವರ್ಷ ಊರಿನ ಬ್ರಾಹ್ಮಣ ಕುಟುಂಬಗಳು ವರ್ಷಂಪ್ರತಿ ಸಾರ್ವಜನಿಕ ವಂತಿಗೆ ಪಡೆದು ಕಟ್ಟದಪ್ಪ ಸೇವೆಯನ್ನು ನೀಡುತ್ತಿದ್ದರು.
ಸಾರ್ವಜನಿಕ ವಂತಿಗೆ ಹೆಚ್ಚಾಗುತ್ತಿದ್ದಂತೆ ಗ್ರಾಮದ ಪ್ರಮುಖರೆಲ್ಲರೂ ಸೇರಿಕೊಂಡು ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ವೆಂಕಟರಮಣ ಆಚಾರ್ಯ ನೇತೃತ್ವದಲ್ಲಿ 1982ರಲ್ಲಿ ಸಾರ್ವಜನಿಕ ಹಾಗೂ ಬ್ರಾಹ್ಮಣ ಸೇವೆಯನ್ನು ಪ್ರತ್ಯೇಕಗೊಳಿಸಿದರು. ಒಂದು ದಿನ ಸಾರ್ವಜನಿಕ ಸೇವೆ ನಡೆದರೆ ಮರುದಿನ ಬ್ರಾಹ್ಮಣ ಸಮಾಜದ ಸೇವೆ ನಡೆಸಲು ಆರಂಭಿಸಿದರು. ವರ್ಷದಿಂದ ಅಪ್ಪದ ಸೇವೆ ಹೆಚ್ಚುತ್ತಿದ್ದು, ಈಗ ಎರಡು ದಿನಗಳಲ್ಲಿ ಸುಮಾರು 90 ಮುಡಿ ಅಕ್ಕಿಯಿಂದ ಅಪ್ಪ ತಯಾರಿಲಾಗುತ್ತದೆ.