

ಉಡುಪಿ: ಕಟಪಾಡಿ ಸಂತ ವಿನ್ಸೆಂಟ್ ಡಿ ಪಾವ್ಲ್ ಇಗರ್ಜಿ ಅಮೃತ ಮಹೋತ್ಸವ ಅಂಗವಾಗಿ ನವೆಂಬರ್ 14 ರಂದು ಬೆಳಿಗ್ಗೆ 9.30 ಉಡುಪಿ ಕಥೊಲಿಕ ಧರ್ಮಪ್ರಾಂತ್ಯದ ಧಮಾರ್ಧ್ಯಕ್ಷ ಡಾ. ಜೆರಾಲ್ಡ್ ಐಸಾಕ್ ಲೋಬೊ ನೇತೃತ್ವದಲ್ಲಿ ಕೃತಜ್ಞಾತಾ ಬಲಿಪೂಜೆ ಜರುಗಲಿದೆ ಎಂದು ಚರ್ಚಿನ ಪಾ. ರಾಜೇಶ್ ಪಸನ್ನಾ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
11.30ಕ್ಕೆ ಧಮಾರ್ಧ್ಯಕ್ಷ ಡಾ. ಜೆರಾಲ್ಡ್ ಐಸಾಕ್ ಲೋಬೊ ಅಧ್ಯಕ್ಷತೆಯಲ್ಲಿ ಸಭಾ ಕಾರ್ಯಕ್ರಮ ಜರುಗಲಿದ್ದು, ಧರ್ಮಪ್ರಾಂತ್ಯದ ಶ್ರೇಷ್ಠ್ಠಗುರು ಮೊನ್ಸಿಂಜ್ಞೊರ್ ಫರ್ಡಿನಾಂಡ್ ಗೊನ್ಸಾಲ್ವಿಸ್, ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ, ಹೋಲಿ ಕ್ರಾಸ್ ಸಭೆ ದಕ್ಷಿಣ ಭಾರತದ ಪ್ರೊವಿನ್ಸಿಯಲ್ ಸುಪಿರೀಯರ್ ರೋಕ್ ಡಿಕೊಸ್ತಾ ಧರ್ಮಪ್ರಾಂತ್ಯದ ಕುಲಪತಿ ಡಾ. ರೋಶನ್ ಡಿಸೋಜಾ, ಉಡುಪಿ ವಲಯ ಪ್ರಧಾನ ಧರ್ಮಗುರು ಚಾರ್ಲ್ಸ್ ಮಿನೇಜಸ್, ಹೋಲಿ ಕ್ರಾಸ್ ಸ್ಟೂಡಂಟ್ ಹೋಮ್ ನಿರ್ದೇಶಕ ರೋನ್ಸನ್ ಆರ್. ಡಿಸೋಜಾ, ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ, ಪತ್ರಕರ್ತ ವಾಲ್ಟರ್ ನಂದಳಿಕೆ, ಕಟಪಾಡಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಪ್ರಭಾ ಶೆಟ್ಟಿ, ಕೋಟೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಪ್ರಮೀಳಾ ಜತ್ತನ್ನ, ಚರ್ಚ್ ಸ್ಮರಣ ಸಂಚಿಕೆ ಸಂಪಾದಕ ಕ್ಯಾಥರಿನ್ ರೊಡ್ರಿಗಸ್ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದರು.
ಸಾಯಂಕಾಲ 6 ಗಂಟೆಗೆ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಿಗೆ ಬಹುಮಾನ ವಿತರಣೆ ಹಾಗೂ ಸಾಂಸ್ಕತಿಕ ಕಾರ್ಯಕ್ರಮ ನಡೆಯಲಿದ್ದು, ಅಧ್ಯಕ್ಷತೆಯನ್ನು ಉಡುಪಿ ವಲಯ ಪ್ರಧಾನ ಧರ್ಮಗುರು ವಂ. ಚಾರ್ಲ್ಸ್ ಮಿನೇಜಸ್ ವಹಿಸಲಿದ್ದು, ಹೋಲಿ ಕ್ರಾಸ್ ಸಭೆ ದಕ್ಷಿಣ ಭಾರತದ ಪ್ರೊವಿನ್ಸಿಯಲ್ ಸುಪಿರೀಯರ್ ರೋಕ್ ಡಿಕೊಸ್ತಾ, ಕಟಪಾಡಿ ಕೊಂಕಣ್ಸ್ ಯುಎಇ ಸ್ಥಾಪಕ ಕಾರ್ಯದರ್ಶಿ ಆಗ್ನೆಲ್ ರೊಡ್ರಿಗಸ್, ಬರಹಗಾರ ವಿಜಯ್ ಕುಮಾರ್ ಶೆಟ್ಟಿ ಮುಂಬೈ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದರು.
10 ರಂದು ಸಾಯಂಕಾಲ ಹಸಿರು ಹೊರೆಕಾಣಿಕೆ ಮೆರವಣಿಗೆ ಹಾಗೂ 11 ರಂದು ಸಾರ್ವಜನಿಕ ಅನ್ನ ಸಂತರ್ಪಣೆ ಕಾರ್ಯಕ್ರಮ ಜರುಗಲಿದೆ.1948 ಮೇ 16 ರಂದು ಕಟಪಾಡಿಯಲ್ಲಿ ಚರ್ಚಿನ ಸ್ಥಾಪನೆಯಾಗಿದ್ದು, ರೊಜಾರಿಯೋ ಫೆರ್ನಾಂಡಿಸ್ ಪ್ರಥಮ ಧರ್ಮಗುರುಗಳಾಗಿ ಸೇವೆ ಸಲ್ಲಿಸಿದ್ದಾರೆ. ಅಮೃತ ಮಹೋತ್ಸವದ ಪ್ರಯುಕ್ತ ಬಡವರಿಗಾಗಿ ಒಂದು ಮನೆಯನ್ನು ನಿರ್ಮಿಸುವ ಯೋಜನೆ ಇದೆ ಎಂದರು.
ಚರ್ಚ್ ಪಾಲನಾ ಸಮಿತಿಯ ಉಪಾಧ್ಯಕ್ಷ ಬ್ರಾಯನ್ ಕೊರೆಯಾ, ಕಾರ್ಯದರ್ಶಿ ತೆರೆಸಾ ಲೋಬೊ, 20 ಆಯೋಗಗಳ ಸಂಚಾಲಕ ಲುವಿಸ್ ಡಿಸಿಲ್ವಾ, ಕ್ರೀಡಾ ಮತ್ತು ಸಾಂಸ್ಕೃತಿಕ ಸಮಿತಿಯ ಅಧ್ಯಕ್ಷ ಕಿರಣ್ ಲೂವಿಸ್ ಉಪಸ್ಥಿತರಿದ್ದರು.