ಕಟೀಲು ಅಭಿವೃದ್ಧಿ ಕೆಲಸ ಚುರುಕು

kateel new
Published on

ಕಟೀಲು: ಪುರಾಣ ಪ್ರಸಿದ್ಧ ಕಟೀಲು ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ಜ.22ರಿಂದ ಫೆ.3ರವರೆಗೆ ನಡೆಯಲಿರುವ ಬ್ರಹ್ಮಕಲಶೋತ್ಸವ ಪೂರ್ವಭಾವಿಯಾಗಿ ಕಟೀಲು ರಥಬೀದಿಯ ವಿಸ್ತರಣೆ ಕಾಮಗಾರಿ ಪ್ರಗತಿಯಲ್ಲಿದೆ.

ಕಟೀಲು ರಥಬೀದಿಯಲ್ಲಿ ವಾಹನ ಸಂಚಾರ ಹಾಗೂ ಅಭಿವೃದ್ಧಿ ದೃಷ್ಟಿಯಿಂದ ಬೀದಿಯಲ್ಲಿದ್ದ ದುರ್ಗಾಭವನ ಹಾಗೂ ಎರಡು ಅಂತಸ್ತು ಕಟ್ಟಡ ಹಾಗೂ ಕೆಳಗಿನ ಭಾಗದಲ್ಲಿ ಇದ್ದ ಅಂಗಡಿಗಳನ್ನು ತೆರವು ಮಾಡಲಾಗಿದೆ. ದೇವಳದ ಮುಂಭಾಗ ರಕ್ತೇಶ್ವರೀ ಕಟ್ಟೆಯಿಂದ ರಥದ ಕೊಠಡಿಯ ತನಕ ಇದ್ದ ಕೊಡಮಣಿತ್ತಾಯ ದೈವದ ಕೋಣೆ, ಎಟಿಎಂ ಸಹಿತ ಎಲ್ಲ ಅಂಗಡಿಗಳು ತೆರವುಗೊಂಡು ದೇವಸ್ಥಾನ ಪಾರ್ಶ್ವಭಾಗ ಕಾಣಿಸುತ್ತದೆ.

ಸರಸ್ವತೀ ಸದನದ ಹಳೆಯ ಕಟ್ಟಡ ಕೆಡವಿ ರಥಬೀದಿಯ ಮಟ್ಟಕ್ಕೆ ತರಲಾಗಿದೆ. ಅಲ್ಲಿದ್ದ ಎರಡು 200 ವರ್ಷ ಹಳೆಯ ಬೃಹತ್ ಅಶ್ವತ್ಥ ಮರಗಳನ್ನು ತೆಗೆದು ಬೃಹತ್ ಯಂತ್ರದ ಮೂಲಕ ಸಿತ್ಲಬೈಲಿನ ಸಮತಟ್ಟು ಮಾಡಿದ ಜಾಗದಲ್ಲಿ ನಡೆಲಾಗಿದೆ. ಸ್ಥಳೀಯರ ಸಹಕಾರದಿಂದ ಕಟೀಲು ಅಜಾರುವಿನಿಂದ ಕಟೀಲು ಸೇತುವೆ ತನಕ ರಸ್ತೆಯನ್ನು ಅಗಲಗೊಳಿಸಲಾಗಿದೆ.

22ರಂದು ಉಗ್ರಾಣ ಮುಹೂರ್ತ ಕಟೀಲು ಶ್ರೀದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ನಡೆಯುವ ಬ್ರಹ್ಮಲಕಶೋತ್ಸವ, ನಾಗಮಂಡಲ ಮತ್ತು ಸಹಸ್ರಚಂಡಿಕಾಯಾಗದ ಪೂರ್ವಭಾವಿಯಾಗಿ ಜ.22ರಂದು ಉಗ್ರಾಣ ಮೂಹೂರ್ತ ನಡೆಯಲಿದ್ದು, ಅಂದು ಬೆಳಗ್ಗೆ 8ಕ್ಕೆ ಅತ್ತೂರು ಕೊಡೆತ್ತೂರು ಮಾಗಣೆಯ ಗ್ರಾಮಸ್ಥರ ಹೊರೆಕಾಣಿಕೆ ಮೆರವಣಿಗೆ ನಡೆಯಲಿದೆ. ಬ್ರಹ್ಮಕಲಶೋತ್ಸವ ದಿನದ ಅನ್ನಸಂತರ್ಪಣೆಗೆ ಬೇಕಾಗುವ ಅಕ್ಕಿಯನ್ನು ಅತ್ತೂರು ಕೊಡೆತ್ತೂರು ಮಾಗಣೆಯ ಗ್ರಾಮಸ್ಥರು ನೀಡಲಿದ್ದು, ಬೆಳಗ್ಗೆ ಆಯಾ ಸಂಗ್ರಹಣ ಕೇಂದ್ರದಿಂದ ಹೊರಟು ಕಿನ್ನಿಗೋಳಿಯಿಂದ ನೂರಾರು ಜನರ ಮೆರವಣಿಗೆಯೊಂದಿಗೆ ಕಟೀಲಿಗೆ ಹೊರೆಕಾಣಿಕೆ ಮೆರವಣಿಗೆ ಹೊರಡಲಿದೆ ಎಂದು ಮಾಗಣೆಯ ಪ್ರಕಟಣೆ ತಿಳಿಸಿದೆ.

ಸ್ಥಳೀಯರ ಸಹಕಾರದಿಂದ ಕಟೀಲು ದೇವಸ್ಥಾನ ಬಹಳಷ್ಟು ಅಭಿವೃದ್ಧಿ ಕಾಣಲು ಸಾಧ್ಯವಾಯಿತು. ದೇವಳಕ್ಕೆ ಬೇಕಾದಷ್ಟು ಸ್ಥಳಾವಕಾಶವೂ ದೊರೆಯಿತು. ಇನ್ನು ವಿಶೇಷ ದಿನಗಳಲ್ಲಿ ಯಾವುದೇ ರಸ್ತೆ ಬ್ಲಾಕ್ ಆಗುವ ಸಂಭವ ಕಡಿಮೆ. - ಗಿರೀಶ್ ಶೆಟ್ಟಿ ಕಾರ್ಯಾಧ್ಯಕ್ಷ, ಬ್ರಹ್ಮಕಲಶೋತ್ಸವ ಅರ್ಥಿಕ ಸಮಿತಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net