ಶಿಕ್ಷಣವೆಂದರೆ ಸಂಸ್ಕಾರ ವೃದ್ಧಿ

kateel pooje
Published on

ಕಟೀಲು: ಶಿಕ್ಷಣ ಎಂದರೆ ಕೇವಲ ಸರ್ಟಿಫಿಕೆಟ್ ಅಲ್ಲ. ಶಿಕ್ಷಣಕ್ಕೆ ಬೇಕಾಗಿರುವುದು ಸಂಸ್ಕಾರ. ವ್ಯಕ್ತಿತ್ವ ಬೆಳವಣಿಗೆಗೆ ಸಂಸ್ಕಾರ ಹಾಗೂ ಪರಿಸರ ಮುಖ್ಯ ಪಾತ್ರ ವಹಿಸುತ್ತದೆ ಎಂದು ಶಿಕ್ಷಣ ತಜ್ಞ ಗುರುರಾಜ ಕರ್ಜಗಿ ಹೇಳಿದರು.

ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಳದ ಬ್ರಹ್ಮಕಲಶೋತ್ಸವ ಪ್ರಯುಕ್ತ ಭ್ರಾಮರಿ ಸಭಾಂಗಣದಲ್ಲಿ ಮಂಗಳವಾರ 7ನೇ ದಿನದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ‘ಶಿಕ್ಷಣದೊಂದಿಗೆ ಸಂಸ್ಕಾರ’ ವಿಶೇಷ ಉಪನ್ಯಾಸದಲ್ಲಿ ಮಾತನಾಡಿದರು.
ಪ್ರಪಂಚದಲ್ಲಿ ಪ್ರತಿಯೊಂದು ವಸ್ತುವಿಗೂ ತನ್ನದೇ ಆದ ಗುಣಗಳಿವೆ. ಆದರೆ ಮನುಷ್ಯ ಮಾತ್ರ ಇನ್ನೊಬ್ಬರಂತಾಗಲು ಹೋಗಿ ತನ್ನತನ ಮರೆಯುತ್ತಿದ್ದಾನೆ. ತನ್ನ ಗುಣಗಳಿಂದ ಸಾಗಿದರೆ ಯಶಸ್ಸು ಪಡೆಯಲು ಸಾಧ್ಯವಿದೆ. ಜೀವನದಲ್ಲಿ ಅನುಸರಣೆ ಬೇಕು ಆದರೆ ಅನುಕರಣೆ ಬೇಡ. ಉತ್ತಮ ಸಂಸ್ಕಾರದಿಂದ ಭಗವಂತನನ್ನು ಒಲಿಸಿಕೊಳ್ಳಬಹುದು ಎಂದರು.

ಉಪ್ಪಳ ಕೊಂಡೆವೂರು ನಿತ್ಯಾನಂದ ಯೋಗಾಶ್ರಮದ ಶ್ರೀ ಯೋಗಾನಂದ ಸರಸ್ವತೀ ಸ್ವಾಮೀಜಿ ಆಶೀರ್ವಚನ ನೀಡಿ, ಮಾನವ ಬದುಕಿನಲ್ಲಿ ಒಳ್ಳೆಯ ಕರ್ಮವನ್ನು ಮಾಡಿದರೆ ದೇವರ ಅನುಗ್ರಹವಿರುತ್ತದೆ. ನಾವು ಮಾಡುವ ಕಾರ್ಯದಲ್ಲಿ ಸಂಸ್ಕೃತಿ ಅನಾವರಣವಾಗಬೇಕು. ಬದುಕಿಗೆ ಒಳ್ಳೆಯ ಬೆಲೆ ಬರಬೇಕಾದರೆ ಜೀವನದಲ್ಲಿ ಭಗವಂತನಿಗೆ ಪ್ರಿಯವಾದ ಕಾರ್ಯ ಮಾಡಬೇಕು ಎಂದರು.

ಮಂಗಳೂರು ಮಂಗಳಾದೇವಿ ರಾಮಕೃಷ್ಣ ಮಠ ಅಧ್ಯಕ್ಷ ಸ್ವಾಮಿ ಜಿತಕಾಮಾನಂದಜಿ ಮಾತನಾಡಿದರು. ಬ್ರಹ್ಮಕಲಶೋತ್ಸವಕ್ಕೆ ಸಹಕರಿಸಿದ ದಾನಿಗಳನ್ನು ಸನ್ಮಾನಿಸಲಾಯಿತು. ಮೂಲ್ಕಿ ವೆಂಕಟರಮಣ ದೇವಸ್ಥಾನ ಮೊಕ್ತೇಸರ ಅತುಲ್ ಎ.ಕುಡ್ವ ಅಧ್ಯಕ್ಷತೆ ವಹಿಸಿದ್ದರು. ಶ್ರೀ ಕ್ಷೇತ್ರ ಧರ್ಮಸ್ಥಳದ ಪದ್ಮನಾಭ ತಂತ್ರಿ ಆಲಂಬಾಡಿ, ಅರ್ಚಕರಾದ ಈಶ್ವರ ಪೆರ್ಲತ್ತಾಯ, ರಾಮಕೃಷ್ಣ ಕಲ್ಲೂರಾಯ, ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ, ಜಿಪಂ ಉಪಾಧ್ಯಕ್ಷೆ ಕಸ್ತೂರಿ ಪಂಜ, ಶ್ರೀಧಾಮ ಮಾಣಿಲದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ, ಮಂಗಳೂರು ಎಕ್ಸ್‌ಪರ್ಟ್ ವಿದ್ಯಾಸಂಸ್ಥೆ ಅಧ್ಯಕ್ಷ ಎಲ್.ನರೇಂದ್ರ ನಾಯಕ್, ಅಬುಧಾಬಿ ಅರಬ್ ಉಡುಪಿ ಗ್ರೂಪ್ ಆಫ್ ಹೋಟೆಲ್ಸ್‌ನ ಕಳತ್ತೂರು ಶೇಖರ ಶೆಟ್ಟಿ, ಉದ್ಯಮಿಗಳಾದ ಮಂಗಳೂರಿನ ಅಭಿಜಿತ್ ವಿ.ಶೇಟ್, ಕಟೀಲು ಪದ್ಮನಾಭ ಭಟ್, ಐಕಳ ಆನಂದ ಶೆಟ್ಟಿ, ಕೊಡೆತ್ತೂರು ದೇವಸ್ಯ ಸುರೇಶ್ ಶೆಟ್ಟಿ, ಕೊಡೆತ್ತೂರು ಪುರುಷೋತ್ತಮ ಶೆಟ್ಟಿ, ಅತ್ತೂರು ಕುಡ್ತಿಮಾರುಗುತ್ತು ಭಾಸ್ಕರ ಶೆಟ್ಟಿ, ಉದ್ಯಮಿ ಚಂದ್ರಶೇಖರ ಗಟ್ಟಿ, ಪಾಡ್ದನ ಕೋಗಿಲೆ ಗಿಡಿಗೆರೆ ರಾಮಕ್ಕ, ಪುತ್ತೂರಿನ ಜೋತಿಷಿ ಹರಿವೈಲಾಯ, ದೇರಳಕಟ್ಟೆ ಅಯ್ಯಪ್ಪ ಸ್ವಾಮಿ ದೇವಸ್ಥಾನ ಮೊಕ್ತೇಸರ ಸೀತಾರಾಮ ಶೆಟ್ಟಿ, ಬಂಟ್ವಾಳ ದಂಡೆಗೋಳಿ ಮಹಾಗಣಪತಿ ದೇವಸ್ಥಾನ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಸುದರ್ಶನ್ ಜೈನ್, ಮಂಗಳೂರು ಅಗ್ರಜ ಬಿಲ್ಡರ್ಸ್‌ನ ಸಂದೇಶ್ ಶೆಟ್ಟಿ, ವಿಶ್ವಜಾಗತಿಕ ಬಂಟರ ಸಂಘ ಅಧ್ಯಕ್ಷ ಹಾಗೂ ಮುಂಬೈ ಸಮಿತಿ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ, ಸಂಜೀವ ಶೆಟ್ಟಿ, ಬಿಪಿನ್ ಚಂದ್ರ ಶೆಟ್ಟಿ, ದಯಾನಂದ ಶೆಟ್ಟಿ, ವಿಶ್ವ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.
ದೇವಳ ಆನುವಂಶಿಕ ಅರ್ಚಕ ಕೆ.ಲಕ್ಷ್ಮೀನಾರಾಯಣ ಆಸ್ರಣ್ಣ ಸ್ವಾಗತಿಸಿದರು, ದಯಾನಂದ ಕಟೀಲು ಪರಿಚಯಿಸಿದರು. ಶರಣ್ ಪಂಪ್‌ವೆಲ್ ವಂದಿಸಿದರು. ಶರತ್ ಶೆಟ್ಟಿ ನಿರೂಪಿಸಿದರು.

10 ಸಾವಿರ ಮಸಾಲೆ ದೋಸೆ!: ಮಂಗಳವಾರ ಬೆಳಗ್ಗಿನ ಉಪಾಹಾರಕ್ಕೆ 10 ಸಾವಿರ ಮಸಾಲೆ ದೋಸೆ ತಯಾರಿಸಿದ್ದು ವಿಶೇಷವಾಗಿತ್ತು. ಬೆಳಗ್ಗೆ 6ರಿಂದ ಉಪಾಹಾರ ಆರಂಭಗೊಂಡಿದ್ದು, 10 ಸಾವಿರ ಜನರಿಗೆ ಬೇಕಾಗುವಷ್ಟು ಮೊಸರವಲಕ್ಕಿ, ಬಾಸ್ಮತಿ ಅಕ್ಕಿಯ ಪಲಾವ್, ಬಾಳೆಹಣ್ಣು, ಹಲ್ವ ಮತ್ತಿತರ ತಿಂಡಿಗಳನ್ನು ತಯಾರಿಸಲಾಗಿತ್ತು. ಪ್ರತಿದಿನ ಸಾವಿರಾರು ಭಕ್ತರು ಭೇಟಿ ನೀಡುತ್ತಿದ್ದು, ದಿನಕ್ಕೆ ಎರಡು ಬಾರಿ ಉಪಾಹಾರ ಮತ್ತು ಅನ್ನದಾನವಿದೆ. ಉಪಹಾರಕ್ಕೆ ದಿನಕ್ಕೊಂದು ಬಗೆಯ ತಿಂಡಿ ಮಾಡಲಾಗುತ್ತಿದೆ. ಈವರೆಗೆ ಇಡ್ಲಿ, ವಡೆ, ಅವಲಕ್ಕಿ, ಚಿತ್ರಾನ್ನ, ಮೊಸರವಲಕ್ಕಿ, ಪಲಾವ್ ಹೀಗೆ ನಾನಾ ಬಗೆಯ ತಿಂಡಿ ಮಾಡಲಾಗಿದೆ. ಪಾಕಶಾಲೆಯಲ್ಲಿ ಅಡುಗೆ ತಯಾರಕರ ಜತೆ ವಿವಿಧ ಮಹಿಳಾ ಸಂಘ ಸದಸ್ಯರು ಸಹಕರಿಸಿದರು. ಮಂಗಳವಾರ ಸುಮಾರು 70 ಸಾವಿರ ಮಂದಿ ಅನ್ನಪ್ರಸಾದ ಸ್ವೀಕರಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net