

ಕಿನ್ನಿಗೋಳಿ: ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಭ್ರಾಮರಿ ದೇವಿಗೆ ಗುರುವಾರ ಬೆಳಗ್ಗೆ 9.37ರ ಮೀನ ಲಗ್ನ ಸುಮುಹೂರ್ತದಲ್ಲಿ ಶಿಬರೂರು ವೇದವ್ಯಾಸ ತಂತ್ರಿಗಳ ಆಚಾರ್ಯತ್ವದಲ್ಲಿ ಶಿಬರೂರು ಕೃಷ್ಣ ತಂತ್ರಿಗಳ ಸಹಯೋಗದೊಂದಿಗೆ ಬ್ರಹ್ಮಕಲಶಾಭಿಷೇಕ ನೆರವೇರಿತು.
ಅಭಿಷೇಕಗೊಂಡ ಕಟೀಲು ಅಮ್ಮನ ವೈಭವ ಕಂಡು ಭಕ್ತ ಸಮೂಹ ಪುಳಕಗೊಂಡಿತು. ಬ್ರಹ್ಮಕಲಶ ಸಂಭ್ರಮಕ್ಕೆ ದೇವಳವನ್ನು ಹೂವಿನಿಂದ ಅಲಂಕರಿಸಲಾಗಿತ್ತು. ಬ್ರಹ್ಮಕಲಶಾಭಿಷೇಕ ಹಾಗೂ ಆ ಬಳಿಕ ಬಲಿ ಉತ್ಸವ ಸಂದರ್ಭ ಪ್ರಾಂಗಣದಲ್ಲಿ ಭಕ್ತರು ಸಾಕಷ್ಟು ಸಂಖೆಯಲ್ಲಿ ಸೇರಿದ್ದರು. ಮುಂಜಾನೆಯಿಂದಲೇ ಕ್ಷೇತ್ರದತ್ತ ಭಕ್ತರ ಹರಿವು ಆರಂಭವಾಗಿದ್ದು, 11 ಗಂಟೆ ವೇಳೆಗೆ ಜನಸಾಗರವೇ ಕಂಡುಬಂತು. ಕಿನ್ನಿಗೋಳಿ ಮತ್ತು ಬಜ್ಪೆ ರಸ್ತೆಗಳಲ್ಲಿ ಕಿಲೋಮೀಟರ್‌ಗಟ್ಟಲೆ ಸರತಿ ಕಂಡು ಬಂತು. ದೇವಳದ ಒಳಗೆ ಜನಸಂದಣಿ ನಿಯಂತ್ರಿಸಲು ನೂರಾರು ಕಾರ್ಯಕರ್ತರನ್ನು ನಿಯೋಜಿಸಲಾಗಿತ್ತು.
ಬೆಳಗ್ಗೆ 11ರಿಂದ ಭಕ್ತರಿಗೆ ಅನ್ನಸಂತರ್ಪಣೆ ಪ್ರಾರಂಭವಾಗಿದ್ದು, ಸುಮಾರು ಒಂದೂವರೆ ಲಕ್ಷಕ್ಕೂ ಅಧಿಕ ಮಂದಿ ದೇವಿಯ ಅನ್ನ ಪ್ರಸಾದ ಸ್ವೀಕರಿಸಿದರು. ಸುಮಾರು 50ಸಾವಿರದಷ್ಟು ಜನರಿಗೆ ಉಪಾಹಾರ ನೀಡಲಾಯಿತು. ಕಿನ್ನಿಗೋಳಿ ಮತ್ತು ಹಳೆಯಂಗಡಿ ವಿಶ್ವಕರ್ಮ ಬಾಂಧವರಿಂದ ಭಕ್ತರಿಗೆ ಕಲ್ಲಂಗಡಿ ಹಣ್ಣು ವಿತರಿಸಲಾಯಿತು.
ದೇವಳದ ಮೊಕ್ತೇಸರ ವಾಸುದೇವ ಆಸ್ರಣ್ಣ, ಆಡಳಿತ ಸಮಿತಿ ಅಧ್ಯಕ್ಷ ಮತ್ತು ಆನುವಂಶಿಕ ಮೊಕ್ತೇಸರ ಸನತ್ ಕುಮಾರ್ ಶೆಟ್ಟಿ ಕೊಡೆತ್ತೂರುಗುತ್ತು, ಲಕ್ಷ್ಮೀನಾರಾಯಣ ಆಸ್ರಣ್ಣ, ಅನಂತಪದ್ಮನಾಭ ಆಸ್ರಣ್ಣ, ವೆಂಕಟರಮಣ ಆಸ್ರಣ್ಣ, ಕಮಲಾದೇವಿ ಪ್ರಸಾದ್ ಆಸ್ರಣ್ಣ, ಶ್ರೀಹರಿನಾರಾಯಣದಾಸ ಆಸ್ರಣ್ಣ, ಸುಧೀರ್ ಶೆಟ್ಟಿ ಕೊಡೆತ್ತೂರುಗುತ್ತು, ಬಿಪಿನ್‌ಚಂದ್ರ ಶೆಟ್ಟಿ ಕೊಡೆತ್ತೂರುಗುತ್ತು, ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್, ಗೌರವಾಧ್ಯಕ್ಷ ಉಮಾನಾಥ ಕೋಟ್ಯಾನ್, ಮುಂಬೈ ಸಮಿತಿ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ, ಕಾರ್ಯದರ್ಶಿ ಕರ್ನಿರೆ ವಿಶ್ವನಾಥ್ ಶೆಟ್ಟಿ, ಕೋಶಾಧಿಕಾರಿ ಕೆ.ಡಿ.ಶೆಟ್ಟಿ, ಉಡುಪಿ ಸಂಸದೆ ಶೋಭಾ ಕರಂದ್ಲಾಜೆ, ಮಂಗಳೂರು ಶಾಸಕ ಡಾ.ಭರತ್ ಶೆಟ್ಟಿ, ಅತ್ತೂರು ಕೊಡೆತ್ತೂರು ಮಾಗಣೆ ಗ್ರಾಮಸ್ಥರು, ಮುಂಬೈ ಬೆಂಗಳೂರು ಭಕ್ತರು ಉಪಸ್ಥಿತರಿದ್ದರು.