ಕಾಟನಾಯಕನಹಳ್ಳಿ ಸರ್ಕಾರಿ ಶಾಲೆಗೆ ಅಭಿವೃದ್ಧಿ ಸ್ಪರ್ಶ

HYR govt school 29
Published on

ಹಿರಿಯೂರು: ಹೂವಿನಹೊಳೆ ಪ್ರತಿಷ್ಠಾನ ಸಂಸ್ಥೆಯ ಸ್ವಯಂ ಸೇವಕರ ತಂಡದ ಸದಸ್ಯರು ಹಿರಿಯೂರು ತಾಲೂಕು ಕಾಟನಾಯಕನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮೂರು ಶಿಥಿಲ ಕೊಠಡಿಗಳನ್ನು ಸುಣ್ಣ ಬಣ್ಣ ಬಳಿದು ವರ್ಣರಂಜಿತ ಚಿತ್ರಗಳನ್ನು ಬಿಡಿಸಿದ್ದಾರೆ.

ಶಾಲೆಯ ಹಳೆಯ ಕೊಠಡಿಗಳು ಶಿಥಿಲಗೊಂಡು ಬೀಳುವ ಹಂತದಲ್ಲಿದ್ದವು. ಶಾಲೆ ಉಳಿಸಿಕೊಳ್ಳಲು ಶಿಕ್ಷಕರು, ಗ್ರಾಮಸ್ಥರು, ಹಳೆಯ ವಿದ್ಯಾರ್ಥಿಗಳು, ಶಿಕ್ಷಣ ಪ್ರೇಮಿಗಳು ಸೇರಿ 3.50 ಲಕ್ಷ ರೂ. ವೆಚ್ಚದಲ್ಲಿ ಮೂರು ಕೊಠಡಿಗಳನ್ನು ನವೀಕರಿಸಿದ್ದಾರೆ.

ಈ ಮೂಲಕ ವಿದ್ಯಾರ್ಥಿಗಳ ಶೈಕ್ಷಣಿಕ ಚಟುವಟಿಕೆಗಳಿಗೆ ನೆರವಾಗಿದ್ದಾರೆ. ಸರ್ಕಾರಿ ಶಾಲೆಗಳನ್ನು ಉಳಿಸಿ- ಬೆಳೆಸಲು ವಿಶೇಷ ಕಾಳಜಿ ವಹಿಸಿ ಸಮಾಜಮುಖಿ ಕೆಲಸ ಮಾಡುತ್ತಿರುವ ಹೂವಿನಹೊಳೆ ಪ್ರತಿಷ್ಠಾನ ಸಂಸ್ಥೆ , ಶಾಲೆಯ ಮುಖ್ಯಶಿಕ್ಷಕ ಬಿ.ಆರ್.ಶ್ರೀನಿವಾಸ್ ಮನವಿ ಮೇರೆಗೆ ಅಭಿವೃದ್ಧಿ ಸ್ಪರ್ಶ ನೀಡಿದೆ.

ಈ ಅಭಿಯಾನದಲ್ಲಿ ಬೆಂಗಳೂರಿನಿಂದ ಬಂದಿದ್ದ ಹೂವಿನಹೊಳೆ ಪ್ರತಿಷ್ಠಾನದ 58 ಸ್ವಯಂ ಸೇವಕರ ಜತೆಯಲ್ಲಿ ಸಂಸ್ಥಾಪಕ ಅಧ್ಯಕ್ಷ ನಂದಿ ಜೆ ಹೂವಿನಹೊಳೆ, ಮಾರ್ಗದರ್ಶಕ ಆರ್.ಮಂಜುನಾಥ್, ಕಲಾವಿದರಾದ ಚಿಕ್ಕಬಳ್ಳಾಪುರ ರವಿ ಕುಮಾರ್, ವೀರು ಅಂಬಲಗೆರೆ, ಹೂವಿನಹೊಳೆ ಕೌಶಲ್ಯ ಕೇಂದ್ರದ ಹರೀಶ್ ಹಾಗೂ ಕಾತ್ಯಾಯಿನಿ, ಸರ್ಕಾರಿ ನೌಕರರ ಸಂಘದ ಉಪಾಧ್ಯಕ್ಷ ಬಿ.ಆರ್.ಶ್ರೀನಿವಾಸ್, ಎಸ್‌ಡಿಎಂಸಿ ಅಧ್ಯಕ್ಷ ಕೃಷ್ಣಮೂರ್ತಿ, ಗ್ರಾಮಸ್ಥರು, ಹಳೆ ವಿದ್ಯಾರ್ಥಿಗಳು ದಾನಿಗಳು ಭಾಗವಹಿಸಿದ್ದರು.

ನಿದರ್ಶನ: ಗ್ರಾಮೀಣ ಸರ್ಕಾರಿ ಶಾಲೆಗಳನ್ನು ಉಳಿಸಿ, ಬೆಳೆಸುವುದು ನಮ್ಮೆಲ್ಲರ ಕರ್ತವ್ಯ. ಸರ್ಕಾರಿ ಶಾಲೆಗಳ ಉಳಿವಿಗೆ ಪ್ರತಿಯೊಬ್ಬರ ಸಹಕಾರ ಅಗತ್ಯ. ಆ ನಿಟ್ಟಿನಲ್ಲಿ ಸಮುದಾಯದ ಸಹಕಾರದಿಂದ ಉತ್ತಮ ಶಾಲೆ ನಿರ್ಮಿಸಿ ಉಳಿಸುವುದರ ಜತೆಗೆ ಗುಣಮಟ್ಟದ ಶಿಕ್ಷಣ ನೀಡಲು ಸಾಧ್ಯ ಎಂಬುದಕ್ಕೆ ನಮ್ಮ ಶಾಲೆಯೇ ಒಂದು ನಿದರ್ಶನವಾಗಿದೆ.-ಬಿ.ಆರ್.ಶ್ರೀನಿವಾಸ್, ಮುಖ್ಯಶಿಕ್ಷಕ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net