

ವಿಜಯವಾಣಿ ಸುದ್ದಿಜಾಲ ಬೆಳಗಾವಿ
ರಾಮದುರ್ಗ ತಾಲೂಕಿನ ಕಟಕೋಳ ಗ್ರಾಮದಲ್ಲಿ ಘಾಟಗೆ ಎಂಬುವರಿಗೆ ಸೇರಿದ ಜಮೀನಿನ ಸ್ವಾಧೀನಕ್ಕಾಗಿ ನಡೆದ ಸಣ್ಣರಾಮಪ್ಪ ಅತ್ತಾರ (65)ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರನ್ನು ಬಂಧಿಸಿ ವಿಚಾರಣೆ ನಡೆಸಲಾಗುತ್ತಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಭೀಮಾಶಂಕರ ಗುಳೇದ ತಿಳಿಸಿದರು.
ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಕಟಕೋಳದ ಶಂಕರ ಜಾಧವ, ಚಿಕ್ಕೋಡಿಯ ಸುಲ್ತಾನ್ ಕಿಲ್ಲೇದಾರ, ರಾಹುಲ ಬಾಗೇವಾಡಿ ಮತ್ತು ನಿಪ್ಪಾಣಿ ಟಿಪ್ಪು ಮುಜಾವರ ಎಂಬುವವರನ್ನು ಬಂಧಿಸಲಾಗಿದೆ ಎಂದರು.
ರಾಮದುರ್ಗ ತಾಲೂಕಿನ ಕಟಕೋಳ ಹೊರವಲಯದಲ್ಲಿ ಫೆ.25ರಂದು ರಾತ್ರಿ ಸಣ್ಣರಾಮಪ್ಪ (65)ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ ಎಂದು ಆರಂಭದಲ್ಲಿ ಬಿಂಬಿಸಲಾಗಿತ್ತು. ಆದರೆ, ಇದು ಅಪಘಾತವಲ್ಲ ಎಂದು ಕುಟುಂಬಸ್ಥರೂ ಸಂಶಯ ವ್ಯಕ್ತಪಡಿಸಿದ್ದರು. ಮರಣೋತ್ತರ ಪರೀಕ್ಷಾ ವರದಿಯಲ್ಲೂ ಕೊಲೆ ಎಂಬುವುದು ಮೇಲ್ನೋಟಕ್ಕೆ ಕಂಡುಬಂದಿತ್ತು. ಎಲ್ಲ ಆಯಾಮಗಳಲ್ಲಿ ತನಿಖೆ ಕೈಗೊಂಡಾಗ ಕೊಲೆ ಮಾಡಿರುವುದು ಖಚಿತವಾಗಿದೆ ಎಂದು ತಿಳಿಸಿದರು.
ಪ್ರಕರಣ ಹಿನ್ನೆಲೆ:ಮಹಾರಾಷ್ಟ್ರದ ಕೋಲ್ಲಾಪುರದಲ್ಲಿ ನೆಲೆಸಿರುವ ಘಾಟಗೆ ಕುಟುಂಬಕ್ಕೆ ಅವರಿಗೆ ಸೇರಿದ 7 ಎಕರೆ 2 ಗುಂಟೆ ಕೃಷಿಭೂಮಿ ಕಟಕೋಳದಲ್ಲಿ ಇತ್ತು. ಶಂಕರ ಜಾಧವ ಅದನ್ನು ಉಳುಮೆ ಮಾಡುತ್ತಿದ್ದರು. ಉಳುವವನೇ ಭೂಮಿ ಒಡೆಯ ಯೋಜನೆಯಡಿ ಅದನ್ನು ಪಡೆಯಲು ಪ್ರಯತ್ನಿಸಿದ್ದರು. ಆದರೆ, ನ್ಯಾಯಾಲಯದಲ್ಲಿ ಘಾಟಗೆ ಪರವಾಗಿ ತೀರ್ಪು ಬಂದಿತ್ತು. ತದನಂತರ ಘಾಟಗೆ ಕುಟುಂಬದವರು ಅದೇ ಗ್ರಾಮದ ಸಣ್ಣರಾಮಪ್ಪ ಅತ್ತಾರಗೆ ಆ ಭೂಮಿ ಉಳುಮೆ ಮಾಡಲು ಕೊಟ್ಟಿದ್ದರು. ಅಷ್ಟೇ ಅಲ್ಲದೆ ಪವಾರ್ ಆಫ್ ಅರ್ಥಾಟಿ ಬರೆದು ಕೊಟ್ಟಿದ್ದರು. ಈ ಹಿನ್ನೆಲೆ ಜಮೀನಿಗಾಗಿ ಶಂಕರ ಜಾಧವ ಮತ್ತು ಸಣ್ಣರಾಮಪ್ಪ ನಡುವೆ ಜಗಳೆ ನಡೆದಿತ್ತು.
ಸಣ್ಣರಾಮಪ್ಪ ಹತ್ಯೆ ಮಾಡಲು ಶಂಕರ ಜಾಧವ ಸುಲ್ತಾನ್ ಕಿಲ್ಲೇದಾರ ಮತ್ತು ಆತನ ಗೆಳೆಯರಿಗೆ 2.5 ಲಕ್ಷ ರೂ.ಸುಪಾರಿ ಕೊಟ್ಟು ಮುಂಗಡವಾಗಿ 1.50 ಲಕ್ಷ ರೂ. ನೀಡಿದ್ದನು. ಅದರಂತೆ ರಾಮದುರ್ಗ ತಾಲೂಕಿನ ಕಟಕೋಳ ಹೊರವಲಯದಲ್ಲಿ ಫೆ.25ರಂದು ರಾತ್ರಿ ಸಣ್ಣರಾಮಪ್ಪ ಹತ್ಯೆ ಮಾಡಿ ಅಪಘಾತದಲ್ಲಿ ಸಾವನ್ನಪ್ಪಿದ್ದಾನೆ ಎಂದು ಬಿಂಬಿಸಲಾಗಿತ್ತು. ಈ ಕುರಿತು ಸಿಪಿಐ ಐ.ಆರ್.ಪಟ್ಟಣಶೆಟ್ಟಿ, ಪಿಎಸ್‌ಐ ಬಸವರಾಜ ಕೊಣ್ಣೂರೆ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿ ಕೊಲೆ ಆರೋಪಿಗಳನ್ನು ಪತ್ತೆ ಹಚ್ಚಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದರು.
ಬೈಲಹೊಂಗಲ ತಾಲೂಕಿನ ದೊಡವಾಡ ಠಾಣೆ ವ್ಯಾಪ್ತಿಯ ಗುಡಿಕಟ್ಟೆ ಹೊರವಲಯದಲ್ಲಿ ಮಾರ್ಚ್ 5ರಂದು ಬಾಗಲಕೋಟೆ ಜಿಲ್ಲೆಯ ಕಟಗೇರಿಯ ಕಟ್ಟಡ ಕಾರ್ಮಿಕ ಬಸವರಾಜ ಕುಂಬಾರ(48) ಅವರನ್ನು ಕಲ್ಲಿನಿಂದ ಜಜ್ಜಿ ಕೊಲೆ ಮಾಡಿದ ಪ್ರಕರಣ ಸಂಬಂಧಿಸಿದಂತೆ ಒಬ್ಬನನ್ನು ಬಂಧಿಸಲಾಗಿದೆ.
ಪೈಲ್ವಾನ್ ಬಸವರಾಜ ಕಲ್ಲಯ್ಯ ಪೂಜಾರ(58) ಬಂಧಿತ ವ್ಯಕ್ತಿ. ಈತ ಕರ್ನಾಟಕ ಮತ್ತು ಮಹಾರಾಷ್ಟ್ರದಲ್ಲಿ ನಡೆದ ವಿವಿಧ ಕುಸ್ತಿ ಪಂದ್ಯಗಳಲ್ಲಿ ವಿಜೇತನಾಗಿದ್ದಾನೆ. ಹೊಲದಲ್ಲಿ ಮನೆ ಕಟ್ಟುವ ವಿಚಾರವಾಗಿ ನಡೆದ ಜಗಳ ಕೊಲೆಯಲ್ಲಿ ಅಂತ್ಯವಾಗಿತ್ತು ಎಂದು ಎಸ್‌ಪಿ ಡಾ.ಭೀಮಾಶಂಕರ ಗುಳೇದ ತಿಳಿಸಿದ್ದಾರೆ.