

ಬಾಳೆಹೊನ್ನೂರು: ಹುಲಿ ಯೋಜನೆ, ಕಸ್ತೂರಿ ರಂಗನ್ ವರದಿ ಮತ್ತು ಪರಿಸರ ಸೂಕ್ಷ್ಮ ವಲಯ ಯೋಜನೆಗಳನ್ನು ಸರ್ಕಾರ ಕೂಡಲೇ ರದ್ದು ಮಾಡಬೇಕು ಎಂದು ಆಗ್ರಹಿಸಿ ಖಾಂಡ್ಯ ನಾಗರಿಕರ ರಕ್ಷಣಾ ವೇದಿಕೆ ಪದಾಧಿಕಾರಿಗಳು ಹೋಬಳಿ ನಾಲ್ಕು ಗ್ರಾಪಂಗಳ ಚುನಾವಣಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಈ ಯೋಜನೆಗಳನ್ನು ಕೆಲವು ಸರ್ವೆ ನಂಬರ್ಗಳಲ್ಲಿ ಸೂಕ್ಷ್ಮ ವಲಯವನ್ನು 0 ಯಿಂದ 12.5 ಕಿಮೀವರೆಗೂ ವಿಸ್ತರಿಸಲು ಹೊರಟಿರುವುದು ಅವೈಜ್ಞಾನಿಕ. ನಮ್ಮ ಹಿರಿಯರು ಕಾಡು-ನಾಡನ್ನು ಸಮನಾಗಿ ಕಂಡಿದ್ದರು. ಈಗ ಕಾಡು ಮತ್ತು ನಾಡನ್ನು ಬೇರೆ ಮಾಡಿ ಯೋಜನೆ ರೂಪಿಸುತ್ತಿರುವುದರ ಹಿಂದೆ ಲೂಟಿಕೋರರ ಸಂಚು ಅಡಗಿದೆ ಎಂದು ದೂರಿದರು.
ಹಿರಿಯರಂತೆ ನಮಗೂ ಕಾಡು-ನಾಡಿನ ಮಧ್ಯೆ ಬದುಕಲು ಅವಕಾಶ ಮಾಡಿಕೊಡಬೇಕು. ಇದಕ್ಕಾಗಿ ಯೋಜನೆಗಳನ್ನು ರದ್ದು ಮಾಡಬೇಕು. ಗೋಮಾಳ ಸೇರಿ ಯಾವುದೇ ಕಂದಾಯ ಜಮೀನಿನೊಳಗೆ ಅರಣ್ಯಾಧಿಕಾರಿಗಳು ಪ್ರವೇಶಿಸಿ ರೈತರ ಕೂಲಿ ಕಾರ್ವಿುಕರ ಮತ್ತು ಕಾಫಿ ಬೆಳೆಗಾರರ ಮೇಲೆ ದೌರ್ಜನ್ಯ ಮಾಡುವುದನ್ನು ಕೂಡಲೇ ನಿಲ್ಲಿಸಬೇಕು ಎಂದು ಒತ್ತಾಯಿಸಿದರು.
ನಮ್ಮ ಎಲ್ಲ ಬೇಡಿಕೆಗಳು ಈಡೇರುವವರೆಗೆ ಖಾಂಡ್ಯ ನಾಗರಿಕರ ರಕ್ಷಣಾ ವೇದಿಕೆಯು ಗ್ರಾಪಂ ಸೇರಿ ಮುಂದಿನ ಎಲ್ಲ ಚುನಾವಣೆಯಲ್ಲೂ ಮತದಾನ ಬಹಿಷ್ಕರಿಸುತ್ತದೆ. ಹಾಗಾಗಿ ಚುನಾವಣಾಧಿಕಾರಿಗಳು ನಮ್ಮ ಮನವಿಯನ್ನು ಸರ್ಕಾರಕ್ಕೆ ತಲುಪಿಸುವಂತೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.