ಸೆಕ್ಷನ್ 4, ಪರಿಸರ ಸೂಕ್ಷ್ಮ ವಲಯಕ್ಕೆ ಆಕ್ಷೇಪಣೆ

web 4
Published on

ಬಾಳೆಹೊನ್ನೂರು: ಖಾಂಡ್ಯ ನಾಗರಿಕ ರಕ್ಷಣಾ ವೇದಿಕೆ ಮತ್ತು ದೇವದಾನ ಗ್ರಾಮಸ್ಥರು ಅರಣ್ಯಕಾಯ್ದೆ 1963 ಕಲಂ 5ರಡಿ ದೇವದಾನ ಗ್ರಾಮದಲ್ಲಿ ಮೀಸಲು ಅರಣ್ಯ, ಹುಲಿ ಯೋಜನೆ, ಕಸ್ತೂರಿ ರಂಗನ್ ವರದಿ, ಪರಿಸರ ಸೂಕ್ಷ್ಮ ವಲಯ, ಸೆಕ್ಷನ್ 4 ಜಾರಿಗೊಳಿಸದಂತೆ ಆಕ್ಷೇಪಣಾ ಪತ್ರವನ್ನು ಗ್ರಾಪಂ ಆಡಳಿತಾಧಿಕಾರಿ ಬಿ.ಆರ್.ರಾಜಕುಮಾರ್ ಅವರಿಗೆ ಸಲ್ಲಿಸಿದರು.

ಖಾಂಡ್ಯ ಹೋಬಳಿ ದೇವದಾನ ಗ್ರಾಪಂ ಸಭಾಂಗಣದಲ್ಲಿ ಬುಧವಾರ ಆಯೋಜಿಸಿದ್ದ ವಿಶೇಷ ಗ್ರಾಮಸಭೆಯಲ್ಲಿ ನಾಗರಿಕ ರಕ್ಷಣಾ ವೇದಿಕೆ ಸದಸ್ಯ ಚಂದ್ರಶೇಖರ್ ರೈ ಮಾತನಾಡಿ, ದೇವದಾನ ಗ್ರಾಮದಲ್ಲಿ 5 ಸಾವಿರಕ್ಕೂ ಹೆಚ್ಚು ಜನರು ವಾಸವಾಗಿದ್ದು, ನಮ್ಮ ಪೂರ್ವಿಕರ ಕಾಲದಿಂದಲೂ ಇಲ್ಲಿಯೇ ವಾಸ ಮಾಡುತ್ತಿದ್ದೇವೆ. ಪ್ರಸ್ತುತ ಕರ್ನಾಟಕ ಅರಣ್ಯಕಾಯ್ದೆ 1963 ಕಲಂ 5ರಲ್ಲಿ ಖಾಂಡ್ಯ ಹೊಬಳಿ ದೇವದಾನ ಗ್ರಾಮದಲ್ಲಿ ಮೀಸಲು ಅರಣ್ಯ, ಹುಲಿ ಯೋಜನೆ, ಕಸ್ತೂರಿ ರಂಗನ್ ವರದಿ ಹಾಗೂ ಪರಿಸರ ಸೂಕ್ಷ್ಮವಲಯ, ಸೆಕ್ಷನ್4ಗೆ ಸೇರಿಸಿ ಗ್ರಾಮಸ್ಥರ ಬದುಕನ್ನು ಕಸಿದುಕೊಂಡು ಚೆಲ್ಲಾಟವಾಡುತ್ತಿದ್ದಾರೆ ಎಂದು ದೂರಿದರು.

ಈ ಯೋಜನೆಗಳಿಂದ ಮಲೆನಾಡಿಗರ ಬದುಕು ದುಸ್ತರವಾಗಲಿದೆ. ಮಲೆನಾಡಿಗೆ ಮಾರಕವಾದ ಈ ಯೋಜನೆಗಳನ್ನು ಜಾರಿಗೊಳಿಸದೆ ನಮ್ಮನ್ನು ಸಹಬಾಳ್ವೆಯಿಂದ ಬದುಕಲು ಬಿಡಬೇಕು ಎಂದು ಒತ್ತಾಯಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net