ಕಸ್ತೂರಿ ರಂಗನ್ ವರದಿ: ಬಾಧ್ಯಸ್ಥರೊಂದಿಗೆ ಸಮಾಲೋಚಿಸಲು ಈಶ್ವರ ಖಂಡ್ರೆ ಸಲಹೆ

MDK03
Published on

ಮಡಿಕೇರಿ: ಪಶ್ಚಿಮ ಘಟ್ಟ ಕುರಿತ ಕಸ್ತೂರಿ ರಂಗನ್ ವರದಿ ವೈಜ್ಞಾನಿಕವಾಗಿಲ್ಲ, ಇದನ್ನು ತಿರಸ್ಕರಿಸಬೇಕು ಎಂದು ರಾಜ್ಯ ಸರ್ಕಾರ ಈಗಾಗಲೇ ತೀರ್ಮಾನಿಸಿದೆ. ಆದಾಗ್ಯೂ ಕೇಂದ್ರ ಸರ್ಕಾರ ನಿವೃತ್ತಿ ಐ.ಎಫ್.ಎಸ್ ಅಧಿಕಾರಿ ಸಂಜಯ್ ಕುಮಾರ್ ಸಮಿತಿ ರಚಿಸಿದ್ದು, ಈ ಸಮಿತಿಗೆ ರಾಜ್ಯದ ಪಶ್ಚಿಮ ಘಟ್ಟದ ಎಲ್ಲ ಬಾಧ್ಯಸ್ಥರನ್ನು ಭೇಟಿ ಮಾಡಿ ವರದಿ ಸಲ್ಲಿಸುವಂತೆ ಕೋರಲಾಗಿದೆ ಎಂದು ಅರಣ್ಯ ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಖಂಡ್ರೆ ತಿಳಿಸಿದರು.


ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಶನಿವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಇತ್ತೀಚೆಗೆ ಸಂಜಯ್ ಕುಮಾರ್ ಸಮಿತಿ ಸದಸ್ಯರು ತಮ್ಮನ್ನು ಭೇಟಿ ಮಾಡಿದ್ದರು. ಈ ಸಂದರ್ಭ ಕೊಡಗು, ಹಾಸನ, ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು, ಚಾಮರಾಜನಗರ ಮೊದಲಾದ ಪಶ್ಚಿಮ ಘಟ್ಟ ಪ್ರದೇಶಕ್ಕೆ ಭೇಟಿ ನೀಡಿ, ಅಲ್ಲಿನ ಜನವಸತಿಯಲ್ಲಿರುವ ನಿವಾಸಿಗಳೊಂದಿಗೆ ಸಮಾಲೋಚಿಸಿ ನಂತರ ವರದಿ ಸಿದ್ಧಪಡಿಸಬೇಕು ಎಂದು ಕೋರಿದ್ದೇನೆ ಎಂದು ಸ್ಪಷ್ಟಪಡಿಸಿದರು.


ಪರಿಸರ ಉಳಿಯಬೇಕು. ಈ ಕಾರ್ಯವನ್ನು ಪಶ್ಚಿಮ ಘಟ್ಟದ ಜನರು ಮಾಡುತ್ತಿದ್ದಾರೆ. ಆದಗ್ಯೂ ಕೇಂದ್ರ ಸರ್ಕಾರ ಪಶ್ಚಿಮ ಘಟ್ಟ ಉಳಿಸಲು ಈ ಸಮಿತಿ ರಚಿಸಿದೆ. ಕಸ್ತೂರಿ ರಂಗನ್ ವರದಿ ೧೦ ವರ್ಷ ಹಳೆಯದಾಗಿದ್ದರೆ, ಗಾಡ್ಗೀಳ್ ವರದಿ ಅದಕ್ಕಿಂತ ಹಳೆಯದು. ಪ್ರಸಕ್ತ ಕಾಲಘಟ್ಟದ ಅಗತ್ಯಕ್ಕೆ ತಕ್ಕಂತೆ ವರದಿಯಲ್ಲಿ ಮಾರ್ಪಾಡು ಮಾಡಬೇಕಾಗುತ್ತದೆ. ಇದರಿಂದ ಜನರಿಗೆ ಯಾವುದೇ ತೊಂದರೆ ಆಗಬಾರದು ಎಂಬುದು ಸರ್ಕಾರದ ನಿಲುವಾಗಿದೆ. ಎಲ್ಲರೂ ಒಪ್ಪುವಂತಹ ವರದಿ ಬಂದರೆ ಶಾಸಕರೊಂದಿಗೆ, ಬಾಧ್ಯಸ್ಥರೊಂದಿಗೆ ಮತ್ತು ಸಚಿವ ಸಂಪುಟದ ಉಪ ಸಮತಿಯಲ್ಲಿ ಚರ್ಚಿಸಿ ಅಂತಿಮವಾಗಿ ಸರ್ಕಾರ ಈ ಕುರಿತಂತೆ ನಿರ್ಧಾರ ಕೈಗೊಳ್ಳಲಿದೆ ಎಂದು ಮತ್ತೊಮ್ಮೆ ಸ್ಪಷ್ಟಪಡಿಸಿದರು.


ಬೆಂಗಳೂರಿನ ಕಾರ್ಯಕ್ರಮವೊಂದರಲ್ಲಿ ತಾವು ಪಶ್ಚಿಮಘಟ್ಟದ ಜೀವಸಂಕುಲ, ಸಸ್ಯ ಸಂಕುಲ ಉಳಿಸಲು ಸರ್ಕಾರ ಬದ್ಧ ಎಂದು ನೀಡಿದ್ದ ಹೇಳಿಕೆ ತಿರುಚಲಾಗಿತ್ತು. ಪರಿಸರ ಪ್ರಕೃತಿ, ಪಶ್ಚಿಮ ಘಟ್ಟದ ಜೀವ ಮತ್ತು ಸಸ್ಯ ಸಂಕುಲ ಉಳಿಯಬೇಕು ಇದಕ್ಕೆ ಸರ್ಕಾರ ಬದ್ಧವಾಗಿದೆ ಎಂದರು.


ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಹಾಗೂ ಶಾಸಕ ಎ.ಎಸ್.ಪೊನ್ನಣ್ಣ, ಶಾಸಕ ಡಾ.ಮಂತರ್ ಗೌಡ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಧರ್ಮಜ ಉತ್ತಪ್ಪ, ಪ್ರಮುಖರಾದ ಎಚ್.ಎಸ್.ಚಂದ್ರಮೌಳಿ, ವಿ.ಪಿ.ಶಶಿಧರ್, ಟಿ.ಪಿ.ರಮೇಶ್, ತೆನ್ನಿರ ಮೈನಾ, ಎಚ್.ಎ.ಹಂಸ, ರಾಜೇಶ್ ಯಲ್ಲಪ್ಪ, ಸರಿತಾ ಪೂಣಚ್ಚ, ಸುರಯ್ಯ ಅಬ್ರಾರ್, ಮಂಜುನಾಥ್ ಗುಂಡೂರಾವ್, ಚುಮ್ಮಿ ದೇವಯ್ಯ, ಪುಲಿಯಂಡ ಜಗದೀಶ್, ಸೇರಿದಂತೆ ಪ್ರಮುಖರು ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net